ಕಳೆದ ಹಲಾವರು ವರ್ಷಗಳಿಂದ ತಮಿಳು ಹಿರಿಯ ನಟ ರಜನಿಕಾಂತ್ ರಾಜಕೀಯ ಪ್ರವೇಶದ ಕುರಿತಾಗಿ ಹಲವಾರು ಚರ್ಚೆಗಳು ನಡೆದಿದ್ದವು. ಇದೇ ಹಿನ್ನೆಲೆಯಲ್ಲಿ ಕಳೆದ ವರ್ಷ ತಾವು ರಾಜಕೀಯಕ್ಕೆ ಬರುವುದಾಗಿ ನಟ ಘೋಷಣೆ ಮಾಡಿದ್ದರು. ಆನಂತರ ಅನಾರೋಗ್ಯದ ಸಮಸ್ಯೆಯಿಂದ ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದರು.
ಇಷ್ಟಾದರೂ ಕೂಡ ಮಾಧ್ಯಮಗಳಲ್ಲಿ ರಜನಿ ಮತ್ತೆ ರಾಜಕೀಯಕ್ಕೆ ಬರ್ತಾರೆ ಅಂತ ಚರ್ಚೆಗಳು ನಡೆಯುತ್ತಿದ್ದು, ಈ ಕಾರಣಕ್ಕೆ ಹಿರಿಯ ನಟ ಇಂದು ಬಹಿರಂಗ ಪತ್ರ ಒಂದನ್ನು ಬರೆದು, ಸ್ಪಷ್ಟನೆ ನೀಡಿದ್ದಾರೆ.
ಬಹಿರಂಗ ಪತ್ರದಲ್ಲಿ ತಿಳಿಸಿರುವ ನಟ, ನಾನು ಇನ್ನು ಮುಂದೆ ರಾಜಕೀಯಕ್ಕೆ ಬರುವುದಿಲ್ಲ. ಭವಿಷ್ಯದಲ್ಲಿಯೂ ನನ್ನ ನಿರ್ಣಯವನ್ನು ಬದಲಾವಣೆ ಮಾಡುವುದಿಲ್ಲ ಎಂದಿದ್ದಾರೆ. ಆ ಮೂಲಕ ರಜನಿಕಾಂತ್ ಮುಂದೆಂದಾದರೂ ರಾಜಕೀಯಕ್ಕೆ ಬರಬಹುದೆಂಬ ಅಭಿಮಾನಿಗಳ ನಿರೀಕ್ಷೆ ಸಹ ಪೂರ್ಣವಾಗಿ ಅಂತ್ಯವಾಗಿದೆ.
ತಮ್ಮ ರಾಜಕೀಯ ಉದ್ದೇಶದಿಂದ ಕಟ್ಟಿದ್ದ ‘ರಜನಿ ಮಕ್ಕಲ್ ಮಂಡ್ರಂ’ ಪಕ್ಷವನ್ನು ‘ರಜನಿ ರಸಿಗರ್ ಮಂಡ್ರಂ’ (ರಜನಿ ಅಭಿಮಾನಿಗಳ ಸಂಘ)ವಾಗಿ ಬದಲಾವಣೆ ಮಾಡಿರುವುದಾಗಿಯೂ ರಜನಿಕಾಂತ್ ಪತ್ರದಲ್ಲಿ ತಿಳಿಸಿದ್ದಾರೆ.