ಹೊಸದಿಲ್ಲಿ: ಕೊರೊನಾದಿಂದಾಗಿ ಸಂಕಷ್ಟದಲ್ಲಿರುವ ಅರ್ಥವ್ಯವಸ್ಥೆಗೆ ನೆರವಾಗಲು ನೋಟುಗಳನ್ನು ಮುದ್ರಿಸಲಾಗುವುದಿಲ್ಲ. ಸರಕಾರದ ಮುಂದೆ ಈ ರೀತಿಯ ಯಾವ ಯೋಚನೆಯೂ ಇಲ್ಲ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸೋಮವಾರ ಲೋಕಸಭೆಗೆ ತಿಳಿಸಿದ್ದಾರೆ.
ಲಾಕ್‌ಡೌನ್ ತೆರವಿನ ಬಳಿಕ ಕೆಲವೊಂದು ಕ್ಷೇತ್ರಗಳು ಚೇತರಿಕೆಯ ದಾರಿಯಲ್ಲಿವೆ. ಎಪ್ರಿಲ್-ಮೇನಲ್ಲಿ ಸೋಂಕಿನ ಪ್ರಮಾಣ ತೀವ್ರವಾಗಿದ್ದಾಗ ಕೆಲವು ಆರ್ಥಿಕ ತಜ್ಞರು ಅರ್ಥ ವ್ಯವಸ್ಥೆಯ ಚೇತರಿಕೆಗೆ ನೋಟು ಮುದ್ರಣ ಮಾಡುವಂತೆ ಸಲಹೆ ನೀಡಿದ್ದರು.
ದೇಶದ ಅರ್ಥವ್ಯವಸ್ಥೆಯ ಮೂಲತಳಹದಿ ಭದ್ರ ವಾಗಿದೆ. ನೋಟು ಮುದ್ರಣದ ಇರಾದೆ ಸರಕಾರಕ್ಕೆ ಇಲ್ಲ. ಲಾಕ್‌ಡೌನ್ ಅನ್ನು ಹಂತಹಂತವಾಗಿ ತೆರವು ಗೊಳಿಸಿದ ಬಳಿಕ ಮತ್ತು ಆತ್ಮನಿರ್ಭರ ಭಾರತದ ಪರಿ ಕಲ್ಪನೆಯ ಅನ್ವಯ ದೇಶದ ಅರ್ಥ ವ್ಯವಸ್ಥೆ 2020- 21ರ 2ನೇ ತ್ತೈಮಾಸಿಕದಿಂದ ಚೇತರಿಕೆಯತ್ತ ಸಾಗುತ್ತಾ ಬಂದಿದೆ ಎಂದೂ ವಿತ್ತ ಸಚಿವರು ಲೋಕಸಭೆಗೆ ನೀಡಿದ ಲಿಖೀತ ಉತ್ತರದಲ್ಲಿ ತಿಳಿಸಿದ್ದಾರೆ.
ಪ್ರಗತಿಯಲ್ಲಿ: ದೇಶದಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳ ನಿಯಂತ್ರಣಕ್ಕಾಗಿ ಆಯೋಗ ರಚಿಸುವ ನಿಟ್ಟಿನಲ್ಲಿ ಶಿಕ್ಷಣ ಸಚಿವಾಲಯದ ನೇತೃತ್ವದಲ್ಲಿ ವಿಧೇಯಕ ಸಿದ್ಧ ಗೊಳಿಸಲಾಗುತ್ತಿದೆ ಎಂದು ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ. ಹೊಸ ವ್ಯವಸ್ಥೆ ಬಂದ ಬಳಿಕ ಯುಜಿಸಿ, ಅಖೀಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ, ರಾಷ್ಟ್ರೀಯ ಶಿಕ್ಷಕರ ತರಬೇತಿ ಮಂಡಳಿ (ಎನ್‌ಸಿಟಿಇ)ಗಳು ರದ್ದುಗೊಳ್ಳಲಿವೆ. ಕಾನೂನು ಮತ್ತು ವೈದ್ಯ ಶಿಕ್ಷಣ ಈ ಆಯೋಗದ ವ್ಯಾಪ್ತಿಯಿಂದ ಹೊರಗೆ ಇರಲಿವೆ.
ಪ್ರತಿಪಕ್ಷಗಳನ್ನು ಸಂಪರ್ಕಿಸಿಲ್ಲ: ಸಂಸತ್‌ನಲ್ಲಿ ಸುಗಮ ಕಲಾಪ ನಡೆದು, ವಿಧೇಯಕಗಳನ್ನು ಮಂಡಿಸಿ ಅಂಗೀಕರಿಸುವ ನಿಟ್ಟಿನಲ್ಲಿ ಸರಕಾರ ವಿಪಕ್ಷಗಳ ಜತೆಗೆ ಮಾತುಕತೆಗೆ ಮುಂದಾಗಿದೆ ಎಂಬ ವರದಿಗಳನ್ನು ಕೇಂದ್ರ ತಿರಸ್ಕರಿಸಿದೆ. “ರಾಜ್ಯಸಭೆಯಲ್ಲಿ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆಯವರ ಕಚೇರಿಗೆ ತೆರಳಿ ಅವರ ಜತೆಗೆ ಮಾತುಕತೆ ನಡೆಸಲು ಕೇಂದ್ರ ಸಚಿವ ಪಿಯೂಷ್ ಗೋಯಲ್ ಮತ್ತು ನಾನು ಸಮಯ ಕೇಳಿದ್ದು ಹೌದು. ಈ ಮೂಲಕ ವಿಪಕ್ಷಗಳ ನಾಯಕರ ಜತೆಗೆ ಸಭೆ ನಡೆಸಲು ಯೋಚಿಸಿದ್ದೆ’ ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
2 ವಿಧೇಯಕ ಅಂಗೀಕಾರ :
ಅಧಿವೇಶನ ಆರಂಭವಾಗಿ 2ನೇ ವಾರ ಪ್ರವೇಶಿಸಿ ದ್ದರೂ, ಸುಗಮ ಕಲಾಪ ಇನ್ನೂ ಸಾಧ್ಯವಾಗಿಲ್ಲ. ಲೋಕಸಭೆಯಲ್ಲಿ ದಿನವಿಡೀ ಗಲಾಟೆ ನಡೆದಿದೆ. ಇದರ ಹೊರತಾಗಿಯೂ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಕ್ಷೇತ್ರಗಳಿಗೆ ಅನುಕೂಲ ವಾಗುವ ಅಪವರ್ತನ ನಿಯಂತ್ರಣ (ತಿದ್ದುಪಡಿ) 2020 ಮತ್ತು ರಾಷ್ಟ್ರೀಯ ಆಹಾರ ತಂತ್ರಜ್ಞಾನ ಸಂಸ್ಥೆ ವಿಧೇಯಕಗಳನ್ನು ಅಂಗೀಕರಿಸಲಾಗಿದೆ. ದಿನದಲ್ಲಿ ಒಟ್ಟು ಮೂರು ಬಾರಿ ಕೋಲಾಹಲದ ಹಿನ್ನೆಲೆಯಲ್ಲಿ ಕಲಾಪವನ್ನು ಮುಂದೂಡಿ, ನಂತರ ಮಂಗಳವಾರಕ್ಕೆ ಮುಂದೂಡಲಾಯಿತು.
ಟ್ರಾಕ್ಟರ್ ಚಲಾಯಿಸಿದ ರಾಹುಲ್ :
ಸೋಮವಾರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಸಂಸತ್ ಭವನದವರೆಗೆ ಟ್ರಾಕ್ಟರ್ ಚಲಾಯಿಸಿಕೊಂಡು ಹೋಗುವ ಮೂಲಕ ಕೇಂದ್ರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಬೆಂಬಲ ವ್ಯಕ್ತಪಡಿಸಿದರು. ಜತೆಗೆ, ರೈತರ ಹಿತಾಸಕ್ತಿಗೆ ಮಾರಕವಾಗಿರುವ ಕೃಷಿ ಕಾಯ್ದೆಗಳನ್ನು ಕೂಡಲೇ ಹಿಂಪಡೆಯಬೇಕು ಎಂದು ಕೇಂದ್ರ ಸರಕಾರವನ್ನು ಆಗ್ರಹಿಸಿದರು.