ಕೋಲ್ಕತ : ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ರಾಜ್ಯದಲ್ಲಿ ಯಾವುದೇ ಸಾರ್ವಜನಿಕ ಭಾಷಣ ಕಾರ್ಯಕ್ರಮ ನಡೆಸದಂತೆ ಮಾಡುವ ನಿಟ್ಟಿನಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಸರಕಾರ ಮಾಲ್ಡಾ ಜಿಲ್ಲೆಯಲ್ಲಿ ಅಮಿತ್ ಶಾ ಅವರ ಹೆಲಿಕಾಪ್ಟರ್ ಇಳಿಯುವುದಕ್ಕೆ ಅನುಮತಿ ನಿರಾಕರಿಸಿದೆ.
ಹೊಸದಿಲ್ಲಿಯ ಏಮ್ಸ್ ಆಸ್ಪತ್ರೆಯಲ್ಲಿ ಈಚೆಗಷ್ಟೇ ಎಚ್1ಎನ್1 ಗೆ ಚಿಕಿತ್ಸೆ ಪಡೆದು ಚೇತರಿಸಿಕೊಂಡಿರುವ ಅಮಿತ್ ಶಾ ಅವರು ಜನವರಿ 22ರಂದು ಮಾಲ್ಡಾದಲ್ಲಿ ರಾಲಿಯೊಂದನ್ನು ಉದ್ದೇಶಿಸಿ ಭಾಷಣ ಮಾಡುವ ಕಾರ್ಯಕ್ರಮ ಇದೆ.
ಬಿಜೆಪಿ ಪ್ಲಾನ್ ಪ್ರಕಾರ ಶಾ ಅವರು ಮೊದಲು ಕೋಲ್ಕತ ತಲುಪಿ ಅಲ್ಲಿಂದ ಹೆಲಿಕಾಪ್ಟರ್ ಮೂಲಕ ಮಾಲ್ಡಾ ತಲುಪಿ ಉತ್ತರ ಬಂಗಾಲದ ಬಿಜೆಪಿ ಕಾರ್ಯಕರ್ತರೊಂದಿಗೆ ರಾಲಿಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಆದರೆ ಈ ನಡುವೆ ಮಾಲ್ಡಾ ಜಿಲ್ಲಾಡಳಿತವು ಈ ವಾರ ಮಾಲ್ಡಾ ಏರ್‌ಪೋರ್ಟ್ ನಲ್ಲಿ ಹೆಲಿಕಾಪ್ಟರ್ ಇಳಿಯುವುದಕ್ಕೆ ಅನುಮತಿ ನೀಡಲಾಗದು ಎಂದು ಬಿಜೆಪಿಗೆ ತಿಳಿಸಿದೆ.
ಮಾಲ್ಡಾ ವಿಭಾದ ಪಿಡಬ್ಲ್ಯುಡಿ ಎಕ್ಸಿಕ್ಯುಟಿವ್ ಇಂಜಿನಿಯರ್ ವರದಿ ಪ್ರಕಾರ ಮಾಲ್ಡಾ ವಿಮಾನ ನಿಲ್ದಾಣವನ್ನು ಮೇಲ್ಮಟ್ಟಕೇರಿಸುವ ಕಾಮಗಾರಿಗಳು ಪೂರ್ಣ ಪ್ರಮಾಣದಲ್ಲಿ ಭರದಿಂದ ನಡೆಯುತ್ತಿವೆ. ರನ್‌ವೇ ಉದ್ದಕ್ಕೂ ಉಸುಕು, ಮಣ್ಣು , ನಿರ್ಮಾಣ ಪರಿಕರಗಳು ರಾಶಿ ಬಿದ್ದಿವೆ. ಹಾಗಾಗಿ ಇನ್ನೊಂದ ವಾರದ ಮಟ್ಟಿಗೆ ಹೆಲಿಕಾಪ್ಟರ್ ಇಳಿಯುವುದಕ್ಕೆ ಅವಕಾಶ ಇರುವುದಿಲ್ಲ ಎಂದು ಮಾಲ್ಡಾದ ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಪತ್ರ ಮೂಲಕ ಬಿಜೆಪಿಗೆ ತಿಳಿಸಿದ್ದಾರೆ.