ವಿಜಯಪುರ: ವಿಜಯಪುರ ನಗರ ಮಹಾ ನಗರವಾಗಿ ಪರಿವರ್ತನೆ ಹೊಂದುತ್ತಿದ್ದು, ಬೆಳೆಯುತ್ತಿರುವ ನಗರಕ್ಕೆ ತಕ್ಕಂತೆ ವಾಹನಗಳು ಅದರಲ್ಲೂ ಆಟೋಗಳ ಓಡಾಟವೂ ಹೆಚ್ಚಿದೆ. ಸಂಚಾರಿ ನಿಯಮ ಪಾಲಿಸುವ ಹಾಗೂ ಚಾಲನೆ ಹಾಗೂ ವಾಹನಗಳಿಗೆ ಸಂಬಂಧಿಸಿದ ಸೂಕ್ತ ದಾಖಲೆ ಹೊಂದಿದ್ದರೆ ಯಾರೂ ದಂಡ ಕಟ್ಟುವ ಅಗತ್ಯವಿಲ್ಲ ಎಂದು ವಿಜಯಪುರ ಸಂಚಾರಿ ಪೊಲೀಸ್ ಠಾಣೆ ಎಎಸ್‌ಐ ಕೇಶಾಪುರ ಹೇಳಿದರು.
ನಗರದಲ್ಲಿ ಅನೌಪಚಾರಿಕ ಶಿಕ್ಷಣ ಸಂಸ್ಥೆ ಹಾಗೂ ಮಹಾತ್ಮ ಗಾಂಧಿ ಆಟೋ ಚಾಕಲರ ಯೂನಿಯನ್ ಸಹಯೋಗದಲ್ಲಿ ಆಟೋ ಚಾಲಕರು ವಾಹನ ಚಲಿಸುವಾಗ ಪಾಲಿಸಬೇಕಾದ ನಿಯಮ ಹಾಗೂ ದಾಖಲಾತಿಗಳ ಅರಿವು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಆಟೋ ಚಾಲಕರಿಗೆ ಸಂಚಾರಿ ನಿಯಮಗಳ ಕುರಿತು ತಿಳಿವಳಿಕೆ ನೀಡುವುದು ಇಂದಿನ ಅಗತ್ಯ.
ಇತರೆ ವಾಹನಗಳ ಜೊತೆಗೆ ಆಟೋಗಳ ಸಂಖ್ಯೆ ಹೆಚ್ಚಾಗಿ ವಾಹನ ದಟ್ಟಣೆ ಹೆಚ್ಚಿದೆ. ಹೀಗಾಗಿ ವಾಹನ ಚಾಲಕರು ವಾಹನ ಚಲಾಯಿಸುವಾಗ ಕಡ್ಡಾಯವಾಗಿ ಸಂಚಾರಿ ನಿಯಮ ಪಾಲಿಸಿದ್ದಲ್ಲಿ ಅಪಘಾತ ತಪ್ಪಿಸಲು ಸಾಧ್ಯ ಎಂದರು. ವಾಹನ ಚಾಲಕರು ಲೈಸೆನ್ಸ್, ಬ್ಯಾಡ್ಜ್, ಸಮವಸ್ತ್ರ, ಏಕಮುಖ ಸಂಚಾರ ಇರುವ ಮಾರ್ಗದಲ್ಲಿ ಹೋಗುವುದು, ಸಿಗ್ನಲ್ ಜಂಪ್ ಮಾಡುವುದು, ನೋ ಪಾರ್ಕಿಂಗ್ ಸ್ಥಳದಲ್ಲಿ ವಾಹನ ನಿಲ್ಲಿಸುವುದು, ಫ್ರಂಟ್ ಸೀಟ್ ಬೆಲ್ಟ್ ಹಾಕುವುದು, ಸೂಕ್ತ
ದಾಖಲೆಗಳಿದ್ದರೂ ಪೊಲೀಸರನ್ನು ನೋಡಿ ಹೆದರಿ ಅಡ್ಡಾದಿಡ್ಡಿಯಾಗಿ ವಾಹನ ಚಾಲನೆ ಮಾಡುವುದರಿಂದ ಅಪಘಾತ ಸಂಭವಿಸುತ್ತವೆ.
ಆದ್ದರಿಂದ ಯಾವುದೇ ವಾಹನ ಚಾಲಕ ಚಾಲನಾ ಪರವಾನಗಿ ಸೇರಿದಂತೆ ವಾಹನಗಳಿಗೆ ಸಂಬಂಧಿಸಿದ ಸೂಕ್ತ ದಾಖಲೆ ಹೊಂದಿ, ಸಂಚಾರಿ ನಿಯಮ ಪಾಲಿಸಿದ್ದಲ್ಲಿ ಪೊಲೀಸರು ಅನಗತ್ಯವಾಗಿ ದಂಡ ವಿಧಿಸುವ ಪ್ರಮೇಯವೇ ಬರುವುದಿಲ್ಲ ಎಂದು ವಿವರಿಸಿದರು. ನಂತರ ನಡೆದ ಸಂವಾದಲ್ಲಿ ಆಟೋ ಚಾಲಕರು ಕೇಳಿದ ಪ್ರಶ್ನೆಗಳಿಗೆ ಕೇಶಾಪುರ ಹಾಗೂ ಕುಂಬಾರ ಉತ್ತರ ನೀಡಿದರು.
ಸ್ಲಂ ಅಭಿವೃದ್ಧಿ ಸಮಿತಿ ಒಕ್ಕೂಟದ ಅಧ್ಯಕ್ಷ ಅಕ್ರಂ ಮಾಶ್ಯಾಳಕರ ಮಾತನಾಡಿ, ಸಂಚಾರಿ ಪೊಲೀಸ್ ಅಧಿಕಾರಿಗಳು ಆಟೋ ಚಾಲಕರಿಗೆ ನಿಯಮಗಳ ಅರಿವು ಕೊಟ್ಟಿದ್ದಾರೆ. ಚಾಲಕರು ಸಂಚಾರಿ ನಿಯಮ ಪಾಲಿಸಿದರೆ ಅಪಘಾತ ರಹಿತ ಚಾಲನೆ ಸಾಧ್ಯ. ಅಲ್ಲದೇ ಸೂಕ್ತ ದಾಖಲೆಗಳಿದ್ದರೆ ಅನಗತ್ಯ ದಂಡ ಕಟ್ಟುವಿಕೆಯಿಂದ ಪಾರಾಗಲು ಸಾಧ್ಯವಿದೆ ಎಂದರು. ಈ ವೇಳೆ ಮಹಾತ್ಮಗಾಂಧಿ ಆಟೋ ಯೂನಿಯನ್ ಅಧ್ಯಕ್ಷ ಉಮೇಶ ರುದ್ರಮುನಿ, ಬಸವರಾಜ ಮಾಳಿ ಸೇರಿದಂತೆ ನೂರಾರು ಆಟೋ ಚಾಲಕರು ಇದ್ದರು. ಪರುಶುರಾಮ ತೇಲಿ ಸ್ವಾಗತಿಸಿದರು. ರಮೇಶ ಪೂಜಾರಿ ನಿರೂಪಿಸಿದರು. ದಸ್ತಗೀರ ಉಕ್ಕಲಿ ವಂದಿಸಿದರು.