ಹುಮನಾಬಾದ: ಯಾವುದೇ ಕಾರಣಕ್ಕೂ ಆರನೇ ವೇತನ ಆಯೋಗದ ಸಮನಾದ ಸಂಬಳ ನೀಡಲು ಸಾಧ್ಯವಿಲ್ಲ ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ಸ್ಪಷ್ಟಪಡಿಸಿದ್ದಾರೆ.
ಬೀದರ ಜಿಲ್ಲೆಯ ಹುಮನಾಬಾದ ತಾಲೂಕಿನ ಮಾಣಿಕನಗರದಲ್ಲಿ ರವಿವಾರ ‘ಉದಯವಾಣಿ’ ಜತೆ ಮಾತನಾಡಿದ ಅವರು, ಆರನೇ ವೇತನ ಆಯೋಗದ ಸಮನಾದ ಸಂಬಳ ನೀಡಲು ಸಾಧ್ಯವೇ ಇಲ್ಲ. ಒಂದು ವೇಳೆ ಸಮನಾದ ಸಂಬಳ ನೀಡಿದರೆ ಇಲಾಖೆಯ ಸಿಬ್ಬಂದಿಗಳ ಮಧ್ಯೆ ತಾರತಮ್ಯ ನೀತಿ ಹುಟ್ಟಿಕೊಳ್ಳುತ್ತದೆ. ಸೀನಿಯರ್ ಸಿಬ್ಬಂದಿಗಳು ಹಾಗೂ ಜೂನಿಯರ್ ಸಿಬ್ಬಂದಿಗಳ ಮಧ್ಯೆ ವೈಮನಸು ಉಂಟಾಗುತ್ತದೆ. ಸಮನಾದ ಸಂಬಳ ನೀಡಿದರೆ ಜೂನಿಯರ್ ಸಿಬ್ಬಂದಿಗಳಿಗೆ ಮಾತ್ರ ಲಾಭವಾಗುತ್ತದೆ. ಮತ್ತೆ ಇದು ಮುಂದಿನ ದಿನಗಳಲ್ಲಿ ಸಂಘರ್ಷಕ್ಕೆ ಕಾರಣವಾಗುತ್ತದೆ ಎಂದು ಅಭಿಪ್ರಾಯ ಪಟ್ಟರು.
6ನೇ ವೇತನದ ಸಮನಾದ ಸಂಬಳದ ಬದಲಾಗಿ ಸಿಬ್ಬಂದಿಗಳಿಗೆ ವಿವಿಧ ಸೌಲಭ್ಯ ಸೌಕರ್ಯಗಳು ನೀಡುತ್ತಿದ್ದೇವೆ. ಬಾಟಾ, ಓಟಿ, ಇನ್ಸೆಂಟಿವ್ ಹಾಗೂ ದೂರದ ಊರುಗಳಿಗೆ ಸಂಚಾರದಲ್ಲಿ ಸಂಗ್ರಹವಾಗುವ ಹಣದಲ್ಲಿ ಶೇ.2ರಷ್ಟು ಇನ್ಸೆಂಟಿವ್ ಈಗಾಗಲೇ ನೀಡಲಾಗುತ್ತಿದೆ. ಹೆಚ್ಚಿನ ಅವಧಿ ಕೆಲಸ ಮಾಡಿದರೆ ಹೆಚ್ಚಿನ ಸಂಬಳ ನೀಡಲಾಗುತ್ತಿದೆ. ಒಂದು ಗಂಟೆ ಕೆಲಸ ಮಾಡಿದರೆ ಎರಡು ಗಂಟೆಗಳ ಅವಧಿ ಪರಿಗಣಿಸಲಾಗುತ್ತಿದೆ. ಈ ಮಾಹಿತಿ ಇಲಾಖೆಯ ಎಲ್ಲಾ ಸಿಬ್ಬಂದಿಗಳು ಗೊತ್ತಿದೆ. ಅದರ ಲಾಭ ಕೂಡ ಪಡೆದುಕೊಳ್ಳುತ್ತಿದ್ದಾರೆ. ಆದರೆ ಆಸೆ ಎಲ್ಲರಿಗೂ ಇರುತ್ತೆ ಹೆಚ್ಚಿನ ಸಂಬಳ ಸಿಗುತ್ತೆ ಎಂಬ ಆಸೆ ಅವರಿಗೂ ಇದೆ. ನಾನು ಕೂಡ ಸಂಬಳ ಹೆಚ್ಚಿಸುವ ಬಗ್ಗೆ ಭರವಸೆ ನೀಡಿದ್ದೇನೆ. ಇಲಾಖೆಯ ಸಿಬ್ಬಂದಿಗಳು ಕರ್ತವ್ಯಕ್ಕೆ ಹಾಜರಾದರೆ ಮುಂದಿನ ದಿನಗಳಲ್ಲಿ ಕುಳಿತು ಸಮಾಲೋಚನೆ ಮಾಡಿ ಎಲ್ಲಾ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ. ಸಂಬಳ ಹೆಚ್ಚಿಸುವ ಕೆಲಸ ಮಾಡುತ್ತೇನೆ ಆದರೆ ಎಷ್ಟು ಪ್ರಮಾಣದಲ್ಲಿ ಎಂಬುವುದು ಮುಂದಿನ ದಿನಗಳಲ್ಲಿ ಹೇಳುವುದಾಗಿ ತಿಳಿಸಿದ್ದಾರೆ.
ಸಾರಿಗೆ ನೌಕರರ ಮುಷ್ಕರ ಹತ್ತಿಕ್ಕುವ ನಿಟ್ಟಿನಲ್ಲಿ ಸರ್ಕಾರ ವಿವಿಧ ನೌಕರರ ವಿರುದ್ದ ವಿವಿಧ ಅಸ್ತ್ರಗಳು ಉಪಯೋಗಿಸುತ್ತಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕಾನೂನು ರೀತಿಯಲ್ಲಿ ಕೆಲಸ ಮಾಡುತ್ತಿದ್ದೇವೆ. ಇಲಾಖೆಯ ತರಬೇತಿಯಲ್ಲಿರುವ (ಟ್ರೈನಿ) ಸಿಬ್ಬಂದಿಗಳಿಗೆ ಪ್ರತಿಭಟನೆ ಮಾಡುವ ಹಕ್ಕಿಲ್ಲ. ಎರಡು ವರ್ಷ ಅವಧಿಯಲ್ಲಿ ಯಾವುದೇ ಪ್ರತಿಭಟನೆ ಅಥವಾ ಸರ್ಕಾರದ ವಿರುದ್ದ, ಸಂಸ್ಥೆಯ ವಿರುದ್ದ ಪ್ರತಿಭಟನೆ ನಡೆಸುವುದು, ಭಾಗ ವಹಿಸುವುದು ಕಾನೂನಿನಲ್ಲಿ ಅವಕಾಶ ಇಲ್ಲ. ಈ ಕುರಿತು ನಿನ್ನೆ ಬೆಂಗಳೂರಿನ ಲೇಬರ್ ಕೋರ್ಟಿನಲ್ಲಿ ಅವರ ವಿರುದ್ಧ ನಿರ್ಣಯವಾಗಿದೆ. ಈ ಪ್ರತಿಭಟನೆ ಮಾಡುವುದು ಸೂಕ್ತ ಅಲ್ಲ ಎಂದು ನ್ಯಾಯಾಲಯ ಆದೇಶ ನೀಡಿದೆ. ನ್ಯಾಯಾಲಯದ ಆದೇಶದ ನಂತರವು ಸಿಬ್ಬಂದಿಗಳು ಪ್ರತಿಭಟನೆ ಮಾಡುವುದು ಸೂಕ್ತವಲ್ಲ. ಕಾನೂನಿಗೆ ಪ್ರತಿಯೊಬ್ಬರು ಗೌರವ ನೀಡಬೇಕಾಗುತ್ತದೆ. ಕಾನೂನಿಗೆ ಮೀರಿ ಯಾರೂ ದೊಡ್ಡವರಲ್ಲ ಎಂದು ತಿಳಿಸಿದರು.
ಸರ್ಕಾರಿ ಬಸ್ ಗಳ ಸಂಚಾರ ಬಂದಾದರೂ ಕೂಡ ಖಾಸಗಿ ಬಸ್ ಗಳು ಜನರಿಗೆ ಸೂಕ್ತ ಸೇವೆ ನೀಡುತ್ತಿವೆ. ಖಾಸಗಿ ವಾಹನಗಳಲ್ಲಿ ಟಿಕೆಟ್ ದರ ಹಾಕುವಂತೆ ಸೂಚಿಸಲಾಗಿದೆ. ಸರ್ಕಾರಿ ಬಸ್ ಗಳು ಪಡೆಯುವ ಟಿಕೆಟ್ ದರ ಮಾತ್ರ ಖಾಸಗಿ ವಾಹನಗಳು ಪಡೆಯಬೇಕು ಎಂದು ಸೂಚನೆ ಕೂಡ ನೀಡಲಾಗಿದೆ. ಕೆಲ ಕಡೆಗಳಲ್ಲಿ ಹೆಚ್ಚಿನ ದರ ಪಡೆಯುತ್ತಿರುವ ಬಗ್ಗೆ ದೂರುಗಳು ಕೇಳಿಬರುತ್ತಿದ್ದು, ಈ ಕುರಿತು ಅಧಿಕಾರಿಗಳು ಗಮನ ಹರಿಸುವಂತೆ ಸೂಚಿಸಲಾಗಿದೆ. ಸಮಯದ ದುರ್ಲಾಭ ಪಡೆಯಬೇಡಿ ಎಂದು ಖಾಸಗಿ ವಾಹನ ಮಾಲೀಕರಿಗೆ ಮನವಿ ಕೂಡ ಮಾಡಿದ್ದೇವೆ. ಬೆಂಗಳೂರು-ಮೈಸೂರು ರಸ್ತೆಯಲ್ಲಿ ಸಂಚರಿಸುವ ವಾಹನಗಳು ಕಡಿಮೆ ದರದಲ್ಲಿ ಪ್ರಯಾಣಿಕರಿಗೆ ಸೇವೆ ನೀಡುತ್ತಿದ್ದಾರೆ ಎಂದು ವಿವರಿಸಿದ ಸಚಿವರು, ಶನಿವಾರ 1600 ಬಸ್ಸುಗಳು ಸಂಚಾರ ನಡೆಸಿವೆ. ಇಂದು ಭಾನುವಾರ ಸುಮಾರು 3000 ಬಸ್ಸುಗಳ ಸಂಚಾರ ನಡೆಸಲಿವೆ. ನಾಳೆ 4000ಕ್ಕೂ ಅಧಿಕ ಬಸ್ಸುಗಳು ಸಂಚಾರ ನಡೆಯುತ್ತೆ. ಮೂರ್ನಾಲ್ಕು ದಿನದಲ್ಲಿ ಸಾಮಾನ್ಯ ಸ್ಥಿತಿಗೆ ಬರುತ್ತದೆ ಎಂಬ ವಿಶ್ವಾಸ ಇದೆ ಎಂದು ಹೇಳಿದರು.