Advertisement

ಸರಕು ವಾಹನಕ್ಕೆ ರಾಜ್ಯದೊಳಗೆ ಪಾಸ್‌ ಬೇಡ

02:01 AM Apr 10, 2020 | Team Udayavani |

ಉಡುಪಿ: ರೈತರಿಂದ ಹಣ್ಣು ಮತ್ತು ತರಕಾರಿಗಳನ್ನು ಖರೀದಿಸಿ ಗ್ರಾಹಕರಿಗೆ ತೋಟಗಾರಿಕೆ ಇಲಾಖೆಯ ಅಂಗಸಂಸ್ಥೆಯಾದ ಹಾಪ್‌ಕಾಮ್ಸ್‌ ಮೂಲಕ ಮಾರಾಟ ಮಾಡಲಾಗುತ್ತಿದೆ. ರಾಜ್ಯದೊಳಗೆ ಯಾರು ಕೂಡ ತಾವು ಬೆಳೆದ ತರಕಾರಿಗಳನ್ನು ಮಾರಾಟ ಮಾಡಬಹುದಾಗಿದೆ.

Advertisement

ಉಡುಪಿ ಜಿಲ್ಲೆಯಲ್ಲಿ ಬೆಳಗ್ಗೆ 7ರಿಂದ 11ರ ವರೆಗೆ ಅಗತ್ಯ ವಸ್ತುಗಳ ಖರೀದಿ ಹಾಗೂ ಸಂಚಾರಕ್ಕೆ ಅವಕಾಶ ಇದೆ. ಇದೇ ರೀತಿ ವಿವಿಧ ಜಿಲ್ಲೆಗಳಲ್ಲಿ ನಿರ್ದಿಷ್ಟ ಸಮಯಗಳನ್ನು ನಿಗದಿಪಡಿಸಲಾಗಿದೆ. ಈ ವೇಳೆ ಸಾಗಾಟಕ್ಕೆ ಅವಕಾಶ ಕಲ್ಪಿಸಲಾಗಿದೆ.

ಹೊರರಾಜ್ಯಕ್ಕೆ ತೆರಳಲು ಮಾತ್ರ ಪಾಸ್‌
ರೈತರು ತಾವು ಬೆಳೆದ ಬೆಳೆಗಳನ್ನು ಹೊರರಾಜ್ಯಗಳಿಗೆ ತಲುಪಿಸಬೇಕಾದರೆ ಮಾತ್ರ ಪಾಸ್‌ ಪಡೆಯಬೇಕಾಗುತ್ತದೆ. ಆಯಾ ಜಿಲ್ಲೆಗಳಲ್ಲಿರುವ ತೋಟಗಾರಿಕೆ ಇಲಾಖೆಯನ್ನು ವಾಹನದ ದಾಖಲೆ ಸಹಿತ ಸಂಪರ್ಕಿಸಿದರೆ ತತ್‌ಕ್ಷಣ ಪಾಸ್‌ ಒದಗಿಸಲಾಗುತ್ತದೆ. ವಾಹನದಲ್ಲಿ ಕೇವಲ ಇಬ್ಬರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.

ಅನಾನಸು ಮಾತ್ರ ಹೊರರಾಜ್ಯಕ್ಕೆ
ಉಡುಪಿ ಜಿಲ್ಲೆಯ ಬೆಳೆಗಳ ಪೈಕಿ ಹೊರ ರಾಜ್ಯಗಳಿಂದ ಬೇಡಿಕೆ ಬಂದಿರುವುದು ಅನಾನಸಿಗೆ ಮಾತ್ರ. ಈಗಾಗಲೇ 17 ಟನ್‌ಗಳಷ್ಟು ಅನಾನಸುಗಳನ್ನು ಕೊಂಡೊಯ್ಯಲು 7 ವಾಹನಗಳಿಗೆ ಅನುಮತಿ ನೀಡಲಾಗಿದೆ. ಕೇರಳ, ರಾಜಸ್ಥಾನ, ಮಹಾರಾಷ್ಟ್ರ, ದ.ಕ., ಉತ್ತರ ಕನ್ನಡಗಳಿಂದ ಅನಾನಸಿಗೆ ಬೇಡಿಕೆ ಇದೆ. ಜಿಲ್ಲೆಯಲ್ಲಿ ಮಟ್ಟುಗುಳ್ಳ, ಕಲ್ಲಂಗಡಿ ಹಣ್ಣುಗಳ ಬೆಳೆ ಧಾರಾಳವಾಗಿದೆಯಾದರೂ ಸ್ಥಳೀಯ ಮಾರುಕಟ್ಟೆಯಲ್ಲಿಯೇ ಮಾರಾಟವಾಗುತ್ತಿದೆ. ಉಳಿದಂತೆ ದ.ಕ., ಉತ್ತರಕನ್ನಡ ಜಿಲ್ಲೆಗೆ ಪೂರೈಕೆಯಾಗುತ್ತಿದೆ.

ಸಾಮಾಜಿಕ ಅಂತರ ಕಡ್ಡಾಯ
ಭತ್ತ ಗದ್ದೆ ಸಹಿತ ತೋಟಗಾರಿಕೆ ಬೆಳೆಗಳ ಕಟಾವು ಸಹಿತ ಇನ್ನಿತರ ಕೆಲಸಕಾರ್ಯಗಳನ್ನು ನಿಭಾಯಿಸುವಾಗ 5 ಮಂದಿಗಿಂತ ಹೆಚ್ಚುಮಂದಿ ಕಾರ್ಮಿಕರನ್ನು ನಿಯೋಜಿಸದಂತೆ ಸೂಚನೆ ನೀಡಲಾಗಿದೆ. ಕೆಲಸ ನಿರ್ವಹಿಸುವ ಸಂದರ್ಭದಲ್ಲಿಯೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸೂಚನೆ ನೀಡಲಾಗಿದೆ.

Advertisement

ಜಿಲ್ಲೆಗೆ ಬರುವ ವಸ್ತುಗಳು
ಅಗತ್ಯ ವಸ್ತುಗಳಿಗೆ ಈಗ ಎಲ್ಲೆಂದರಲ್ಲಿ ಭಾರೀ ಬೇಡಿಕೆ ಸೃಷ್ಟಿಯಾಗಿದೆ. ಜಿಲ್ಲೆಯಲ್ಲಿ ದ್ರಾಕ್ಷಿ, ಪಪ್ಪಾಯ, ಬಾಳೆಹಣ್ಣುಗಳಿಗೆ ಬೇಡಿಕೆಯಿದೆ. ಸ್ಥಳೀಯ ಮಾರಾಟಗಾರರಿಂದ ಇದನ್ನು ಹಾಪ್‌ಕಾಮ್ಸ್‌ ಮೂಲಕ ಖರೀದಿಸಲಾಗುತ್ತಿದೆಯಾದರೂ ಅದನ್ನು ಬೇಡಿಕೆಗೆ ತಕ್ಕಂತೆ ಪೂರೈಸಲು ಸಾಧ್ಯವಾಗುತ್ತಿಲ್ಲ. ಈ ಕಾರಣಕ್ಕಾಗಿ ಉತ್ತರ ಕರ್ನಾಟಕ, ಶಿವಮೊಗ್ಗ ಸಹಿತ ವಿವಿಧ ಜಿಲ್ಲೆಗಳಿಂದ ವಸ್ತುಗಳನ್ನು ಪೂರೈಕೆ ಮಾಡಲಾಗುತ್ತಿದೆ.

ಕಿತ್ತಳೆಗೆ ಬೇಡಿಕೆ
ಕರ್ನಾಟಕ ರಾಜ್ಯಸಹಿತ ಉಡುಪಿ ಜಿಲ್ಲೆಗೆ ಮಹಾರಾಷ್ಟ್ರದಿಂದ ಕಿತ್ತಾಳೆ ಸರಬರಾಜಾಗುತ್ತಿತ್ತು. ಆದರೆ ಮಹಾರಾಷ್ಟ್ರ ದಲ್ಲಿ ಹೆಚ್ಚುತ್ತಿರುವ ಕೋವಿಡ್‌-19 ಅಟ್ಟಹಾಸದಿಂದಾಗಿ ಅಲ್ಲಿಂದ ಯಾವುದೇ ವಸ್ತುಗಳು ಸದ್ಯಕ್ಕೆ ರಾಜ್ಯಕ್ಕೆ ಸರಬರಾಜಾಗುತ್ತಿಲ್ಲ. ಕೆಲವು ಜಿಲ್ಲೆಗಳಿಗೆ ಮಾತ್ರ ನಿರ್ದಿಷ್ಟ ಪ್ರಮಾಣದಲ್ಲಿ ಸರಬರಾಜು ಮಾಡಲಾಗುತ್ತಿದೆ. ಉಡುಪಿ ಜಿಲ್ಲೆಗೂ ಈವರೆಗೆ ಯಾವುದೇ ವಸ್ತುಗಳು ಮಹಾರಾಷ್ಟ್ರ ಸಹಿತ ಇತರ ರಾಜ್ಯಗಳಿಂದ ಸರಬರಾಜಾಗಲಿಲ್ಲ. ರಾಜ್ಯದೊಳಗಿನ ಬೆಳೆಗಳಿಗಷ್ಟೇ ಬೇಡಿಕೆ ಸೃಷ್ಟಿಯಾಗಿದೆ ಎನ್ನುತ್ತಾರೆ ತೋಟಗಾರಿಕೆ ಇಲಾಖೆಯ ಅಧಿಕಾರಿ.

Advertisement

Udayavani is now on Telegram. Click here to join our channel and stay updated with the latest news.

Next