Advertisement

Gauri Lankesh ಪ್ರಕರಣದ ಆರೋಪಿಗೆ ಪಕ್ಷದ ಹುದ್ದೆ: ತಡೆ ಹಿಡಿದ ಶಿಂಧೆ ಶಿವಸೇನೆ

05:29 PM Oct 20, 2024 | Team Udayavani |

ಮುಂಬಯಿ: ಪತ್ರಕರ್ತೆ ಗೌರಿ ಲಂಕೇಶ್ ಹ*ತ್ಯೆ ಪ್ರಕರಣದ ಆರೋಪಿ ಶ್ರೀಕಾಂತ್ ಪಂಗರ್ಕರ್ ಅವರನ್ನು ಜಲ್ನಾ ಜಿಲ್ಲೆಯಲ್ಲಿ ಪಕ್ಷದ ಪದಾಧಿಕಾರಿ ಹುದ್ದೆಗೆ ನೇಮಕ ಮಾಡುವುದನ್ನು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ತಡೆಹಿಡಿದಿದೆ.

Advertisement

ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ಮುನ್ನ, ಪಂಗರ್ಕರ್ ಶುಕ್ರವಾರ ಪಕ್ಷದ ನಾಯಕ ಮತ್ತು ಮಾಜಿ ರಾಜ್ಯ ಸಚಿವ ಅರ್ಜುನ್ ಖೋಟ್ಕರ್ ಅವರ ಸಮ್ಮುಖದಲ್ಲಿ ಶಿಂಧೆ ನೇತೃತ್ವದ ಶಿವಸೇನೆಗೆ ಸೇರ್ಪಡೆಗೊಂಡಿದ್ದರು.

ಮಾಜಿ ಶಿವಸೇನಾ ಕಾರ್ಯಕರ್ತರಾಗಿದ್ದ ಪಂಗರ್ಕರ್ ಅವರು ಪಕ್ಷಕ್ಕೆ ಮರಳಿದ್ದಾರೆ ಮತ್ತು ಜಲ್ನಾ ವಿಧಾನಸಭಾ ಚುನಾವಣಾ ಪ್ರಚಾರದ ಮುಖ್ಯಸ್ಥರಾಗಿ ನಾಮನಿರ್ದೇಶನಗೊಂಡಿದ್ದಾರೆ ಎಂದು ಖೋಟ್ಕರ್ ಹೇಳಿದ್ದರು. ಟೀಕೆಗಳು ಕೇಳಿ ಬಂದ ತತ್ ಕ್ಷಣ ಪಂಗರ್ಕರ್ ಅವರಿಗೆ ಪಕ್ಷದ ಹುದ್ದೆ ನೀಡುವ ನಿರ್ಧಾರವನ್ನು ತಡೆಹಿಡಿಯಲಾಗಿದೆ ಎಂದು ಶಿವಸೇನೆ ರವಿವಾರ(ಅ 20) ಹೇಳಿಕೆಯಲ್ಲಿ ತಿಳಿಸಿದೆ.

2017ಸೆಪ್ಟೆಂಬರ್ 5 ರಂದು ಬೆಂಗಳೂರಿನ ನಿವಾಸದ ಹೊರಗೆ ಗೌರಿ ಲಂಕೇಶ್ ಅವರನ್ನು ಗುಂಡಿಕ್ಕಿ ಹತ್ಯೆಗೈಯಲಾಗಿತ್ತು. ಮಹಾರಾಷ್ಟ್ರದ ತನಿಖಾ ಸಂಸ್ಥೆಗಳ ಳ ಸಹಾಯದಿಂದ ಕರ್ನಾಟಕದ ಪೊಲೀಸರು ನಡೆಸಿದ ತನಿಖೆಯಲ್ಲಿ ಹಲವರನ್ನು ಬಂಧಿಸಲಾಗಿತ್ತು.

2001 ಮತ್ತು 2006 ರ ನಡುವೆ ಅವಿಭಜಿತ ಶಿವಸೇನೆಯ ಜಲ್ನಾ ಪುರಸಭೆಯ ಕೌನ್ಸಿಲರ್ ಆಗಿದ್ದ ಪಂಗರ್ಕರ್ ಅವರನ್ನು ಆಗಸ್ಟ್ 2018 ರಲ್ಲಿ ಬಂಧಿಸಲಾಗಿತ್ತು. ಈ ವರ್ಷ ಸೆಪ್ಟೆಂಬರ್ 4 ರಂದು ಕರ್ನಾಟಕ ಹೈಕೋರ್ಟ್ ಜಾಮೀನು ನೀಡಿತ್ತು. 2011 ರಲ್ಲಿ ಶಿವಸೇನೆ ಪಂಗರ್ಕರ್‌ಗೆ ಟಿಕೆಟ್ ನಿರಾಕರಿಸಿದ್ದ ವೇಳೆ ಬಲಪಂಥೀಯ ಹಿಂದೂ ಜನಜಾಗೃತಿ ಸಮಿತಿಯನ್ನು ಸೇರಿದ್ದರು.

Advertisement

ಅರ್ಜುನ್ ಖೋಟ್ಕರ್ ಅವರು ಜಲ್ನಾದಿಂದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಬಯಸುವುದಾಗಿ ಹೇಳಿದ್ದರು, ಆದರೆ ಮಹಾಯುತಿಯಲ್ಲಿ (ಶಿವಸೇನೆ, ಬಿಜೆಪಿ ಮತ್ತು ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿಯನ್ನು ಒಳಗೊಂಡಿರುವ ಮೈತ್ರಿ ಕೂಟ ) ಸೀಟು ಹಂಚಿಕೆ ಚರ್ಚೆಗಳು ನಡೆಯುತ್ತಿವೆ. ಸದ್ಯ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಕೈಲಾಶ್ ಗೊರಂಟ್ಯಾಲ್ ಶಾಸಕರಾಗಿದ್ದಾರೆ.

ನವೆಂಬರ್ 20 ರಂದು ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ನಡೆಯಲಿದ್ದು, ನವೆಂಬರ್ 23 ರಂದು ಫಲಿತಾಂಶ ಪ್ರಕಟವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next