Advertisement

ಪುನೀತ್ ಗೆ ಸಿಗದ ಪದ್ಮಪ್ರಶಸ್ತಿ: ಮಾತು ತಪ್ಪಿದ ಬೊಮ್ಮಾಯಿ

03:15 PM Jan 26, 2022 | Team Udayavani |

ಬೆಂಗಳೂರು: ಪುನೀತ್ ರಾಜಕುಮಾರ್ ಅವರಿಗೆ ಪದ್ಮಪ್ರಶಸ್ತಿ ಸಿಗದೇ ಇರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಈ ವಿಚಾರದಲ್ಲಿ ಸಿಎಂ‌ ಬೊಮ್ಮಾಯಿ ಕೊಟ್ಟ ಮಾತು ಉಳಿಸಿಕೊಂಡಿಲ್ಲ ಎಂದು ಟೀಕಿಸಿದ್ದಾರೆ.

Advertisement

ಪುನೀತ್ ರಾಜಕುಮಾರ್ ಅವರ ಹೆಸರನ್ನು ಪದ್ಮ ಪ್ರಶಸ್ತಿಗೆ ಶಿಫಾರಸು ಮಾಡುತ್ತೇವೆ ಎಂದು ಮುಖ್ಯಮಂತ್ರಿಗಳು ಹೇಳಿದ್ದರು ಆದರೆ ಪ್ರಶಸ್ತಿ ಪಟ್ಟಿಯಲ್ಲಿ ಅವರ ಹೆಸರಿಲ್ಲ ಎಂಬ ಪ್ರಶ್ನೆಗೆ, ‘ಪ್ರಧಾನಮಂತ್ರಿಗಳಿಗೆ ಯಾರು ಏನು ಶಿಫಾರಸ್ಸು ಮಾಡಿದ್ದರೋ ಗೊತ್ತಿಲ್ಲ ಎಂದು ಹೇಳಿದ್ದಾರೆ.

ಪಾದಯಾತ್ರೆ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಯಾವ ಕಲಾವಿದರ ಜತೆ ಏನು ಮಾತನಾಡಿದ್ದರು ಎಂಬುದನ್ನು ಈ ಸಂದರ್ಭದಲ್ಲಿ ಹೇಳುವುದಿಲ್ಲ. ಆದರೆ ಅವರು ಪುನೀತ್ ವಿಚಾರದಲ್ಲಿ ಕೊಟ್ಟ ಮಾತು ಉಳಿಸಿಕೊಳ್ಳಲಿಲ್ಲ’ ಎಂದರು.

ಪರಪ್ಪನ ಅಗ್ರಹಾರ ಜೈಲಲ್ಲಿ ವಿಶೇಷ ಸೌಲಭ್ಯ ವಿಚಾರವಾಗಿ ಕೇಳಿದ ಪ್ರಶ್ನೆಗೆ, ‘ಗೃಹ ಸಚಿವರು ಇದ್ದಾರೆ, ಅವರು ಏನು ಹೇಳುತ್ತಾರೋ ಕಾದು ನೋಡೋಣ’ ಎಂದರು.

ಇದಕ್ಕೂ ಮುನ್ನ ಮಾಧ್ಯಮಗಳ ಜತೆ ಪ್ರತ್ಯೇಕವಾಗಿ ಮಾತನಾಡಿದ ಶಿವಕುಮಾರ್ ಅವರು, 16 ಬಿಜೆಪಿ ನಾಯಕರು ತಮ್ಮ ಸಂಪರ್ಕದಲ್ಲಿದ್ದಾರೆ ಎಂಬ ಯತ್ನಾಳ್ ಅವರ ಹೇಳಿಕೆ ಕುರಿತ ಪ್ರಶ್ನೆಗೆ, ‘ನಿಮ್ಹಾನ್ಸ್ ನಲ್ಲಿ ಅಡ್ಮಿಟ್ ಮಾಡಬೇಕಾದವವರ ಹೇಳಿಕೆ ಬಗ್ಗೆ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಅವರ ಪಕ್ಷದವರಿಗೆ ಪಟ್ಟಿ ನೀಡಿ, ಅವರಿಗೆ ಏನು ಬೇಕೋ ಮಾಡಿಕೊಳ್ಳಲಿ’ ಎಂದರು.

Advertisement

ಕಾಂಗ್ರೆಸ್ ಸೇರಲು ಬಿಜೆಪಿ ನಾಯಕರು ಸಿದ್ಧರಿದ್ದಾರೆ ಎಂಬ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಹೇಳಿಕೆ ಹಾಗೂ ಅದು ಸತ್ಯ ಎಂಬ ಯತ್ನಾಳ್ ಅವರು ಹೇಳಿಕೆ ಬಗ್ಗೆ ಕೇಳಿದಾಗ, ‘ಸಚಿವರೊಬ್ಬರು ತಾವು ಸಿದ್ದರಾಮಯ್ಯ ಅವರ ಜತೆ ಮಾತನಾಡಿರುವುದು ನಿಜ ಎಂದು ಒಪ್ಪಿಕೊಂಡಿದ್ದಾರೆ. ಆದರೆ ನಾನು ಆ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಈಗಾಗಲೇ ಕೇಂದ್ರದಲ್ಲಿ ಮಾಜಿ ಸಚಿವರಾಗಿದ್ದ ಹಾಗೂ ಮುಖ್ಯಮಂತ್ರಿ ಆಗಲು ಬಯಸುತ್ತಿರುವವರು ತಮ್ಮ ಪಕ್ಷದವರು ಕಾಂಗ್ರೆಸ್ ಜತೆ ಸಂಪರ್ಕದಲ್ಲಿದ್ದಾರೆ ಎಂದು ಹೇಳಿರುವಾಗ ನಾನು ಏನನ್ನೂ ಹೇಳುವ ಅಗತ್ಯವಿಲ್ಲ. ಸಮಯವೇ ಎಲ್ಲದಕ್ಕೂ ಉತ್ತರ ನೀಡಲಿದೆ’ ಎಂದು ಪ್ರತಿಕ್ರಿಯಿಸಿದರು.

ಇದನ್ನೂ ಓದಿ:ಕ್ರಿಸ್ ಗೇಲ್ ಗೆ ಸಂದೇಶ ಕಳುಹಿಸಿದ ಪ್ರಧಾನಿ ನರೇಂದ್ರ ಮೋದಿ: ಯುನಿವರ್ಸಲ್ ಬಾಸ್ ಹೇಳಿದ್ದೇನು?

ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ, ಸಂಪುಟ ವಿಸ್ತರಣೆ ವಿಚಾರವಾಗಿ ಗೊಂದಲ ಎದ್ದಿರುವ ಬಗ್ಗೆ ಕೇಳಿದಾಗ, ‘ಅವರ ಪಕ್ಷದ ವ್ಯವಹಾರದಲ್ಲಿ ನಾವು ಹಸ್ತಕ್ಷೇಪ ಮಾಡ ಬಯಸುವುದಿಲ್ಲ. ಈಗಿನ ಸರ್ಕಾರದ ಆಡಳಿತದಲ್ಲಿ ರಾಜ್ಯ 20 ವರ್ಷ ಹಿಂದಕ್ಕೆ ಹೋಗಿದ್ದು, ಉತ್ತಮ ಆಡಳಿತ ನೀಡಲು ಅವರಿಂದ ಸಾಧ್ಯವಾಗಿಲ್ಲ. ಹೀಗಾಗಿ ನಾವು ರಾಜ್ಯದ ಜನರ ಹಿತದ ಬಗ್ಗೆ ಚಿಂತನೆ ನಡೆಸಿದ್ದು, ಜನರಿಗೆ ಬದಲಾವಣೆ ಹಾಗೂ ಉತ್ತಮ ಆಡಳಿತದ ಬಗ್ಗೆ ಅರಿವು ಮೂಡಿಸುವತ್ತ ಗಮನಹರಿಸುತ್ತಿದ್ದೇವೆ’ ಎಂದರು.

‘ಗಣರಾಜ್ಯೋತ್ಸವದಂದು ದೆಹಲಿಯ ರಾಜಪಥ್ ನಲ್ಲಿ ದೇಶದ ಎಲ್ಲ ಭಾಗದ ಜಾತಿ, ಧರ್ಮ, ಭಾಷೆ, ಸಂಸ್ಕೃತಿ, ರಾಷ್ಟ್ರೀಯತೆ, ಐಕ್ಯತೆ ಹಾಗೂ ದೇಶಕ್ಕಾಗಿ ಬಲಿದಾನ ಮಾಡಿದವರನ್ನು ಸ್ಮರಿಸಿ, ಪ್ರತಿಕೃತಿಯನ್ನು ಬಿಂಬಿಸಲಾಗುತ್ತದೆ.  ಆದರೆ ಈಗ ದಕ್ಷಿಣ ಭಾರತದಲ್ಲಿ ಎಲ್ಲ ವರ್ಗದ ಜನರಿಗೆ ಬಹಳ ನೋವಾಗಿದೆ. ಸಮಾಜದ ಎಲ್ಲ ವರ್ಗದವರನ್ನು ಒಂದುಗೂಡಿಸಲು ಎಲ್ಲ ಧರ್ಮದ ನಾಯಕರು ಪ್ರಯತ್ನಿಸಿದ್ದಾರೆ. ಅವರಲ್ಲಿ ನಮ್ಮ ನಾರಾಯಣ ಗುರುಗಳೂ ಪ್ರಮುಖರು. ಅವರ ಸ್ಥಬ್ದಚಿತ್ರಕ್ಕೆ ಗಣರಾಜ್ಯೋತ್ಸವ ಪೆರೇಡ್ ನಲ್ಲಿ ಅವಕಾಶ ನಿರಾಕರಿಸುವ ಮೂಲಕ ನಾರಾಯಣ ಗುರುಗಳು ಪ್ರತಿಪಾತಿಸಿದ ಮಾನವತಾವಾದಕ್ಕೆ ಅಪಮಾನ ಮಾಡಲಾಗಿದೆ.  ಒಂದೇ ಧರ್ಮ, ಒಂದೇ ದೇವರು, ಮನುಷ್ಯರೆಲ್ಲ ಒಂದೇ ಜಾತಿ. ಮಾನವೀಯತೆ ಎಲ್ಲಕ್ಕಿಂತ ಮಿಗಿಲಾದುದು ಎಂದೂ ನಾರಾಯಣ ಗುರುಗಳು ಹೇಳಿದ್ದರು. ಅಂತಹ ಮಹಾನುಭಾವರನ್ನು ಕಡೆಗಣಿಸಿರುವುದನ್ನು ಕಾಂಗ್ರೆಸ್ ಪಕ್ಷ ತೀವ್ರವಾಗಿ ಖಂಡಿಸುತ್ತದೆ. ವೈಯಕ್ತಿಕವಾಗಿ ನಾನೂ ಉಗ್ರವಾಗಿ ಖಂಡಿಸುತ್ತೇನೆ ಎಂದರು.

ನೂರಾರು ಭಾಷೆ, ಸಾವಿರಾರು ಜಾತಿಗಳು ಸೇರಿ ಭವ್ಯ ಭಾರತ ರೂಪುಗೊಂಡಿದೆ. ಎಲ್ಲರೂ ಸೇರಿ ಇಂದು ಗಣರಾಜ್ಯೋತ್ಸವ ಆಚರಿಸುತ್ತಿದ್ದೇವೆ.  ಎಲ್ಲ ಧರ್ಮಗಳಲ್ಲೂ ಅದರದ್ದೇ ಆದ ಪವಿತ್ರ ಗ್ರಂಥಗಳಿದ್ದರೂ ನಮಗೆ ನಮ್ಮ ಸಂವಿಧಾನವೇ ದೇಶದ ಶ್ರೇಷ್ಠ ಗ್ರಂಥ. ಸ್ವಾತಂತ್ರ್ಯಕ್ಕೂ ಮುನ್ನ ದಕ್ಷಿಣ ಭಾರತದಲ್ಲಿ ನಡೆಯುತ್ತಿದ್ದ ಹಿಂದುಳಿದ ವರ್ಗಗಳು ಹಾಗೂ ಶೋಷಿತ ಸಮುದಾಯದ ಮೇಲಿನ ದೌರ್ಜನ್ಯದ ವಿರುದ್ಧ ನಾರಾಯಣ ಗುರುಗಳು ಬಹುದೊಡ್ಡ ಸಾಮಾಜಿಕ ಚಳುವಳಿ ಆರಂಭಿಸಿದರು. 12 ನೇ ಶತಮಾನದಲ್ಲಿ ಬಸವಣ್ಣನವರು ಕರ್ನಾಟಕದಲ್ಲಿ ಮಾಡಿದಂತೆ ನಾರಾಯಣ ಗುರುಗಳು ಕೂಡ ಸಮಾಜ ಸುಧಾರಣೆಗೆ ಕೇರಳದಿಂದ ಹೋರಾಟ ಶುರು ಮಾಡಿದರು. ಅವರು ಯಾವುದೋ ಒಂದು ಜಾತಿ, ಧರ್ಮ ಹಾಗೂ ದೇವರಿಗೆ ಮಾತ್ರ ಸೀಮಿತರಾಗಲಿಲ್ಲ. ಅವರು ಮಾನವಧರ್ಮದ ಪರವಾಗಿ ಹೋರಾಡಿದರು. ಒಂದು ರಾಜ್ಯ ಸರ್ಕಾರ ತನಗಿರುವ ಅಧಿಕಾರ ವ್ಯಾಪ್ತಿಯಲ್ಲಿ ರಾಜಪಥ್ ನಲ್ಲಿ ಗಣರಾಜ್ಯೋತ್ಸವದಂದು ಆ ಮಹಾತ್ಮರಿಗೆ ಗೌರವ ಸಲ್ಲಿಸಲು ಸ್ತಬ್ಧಚಿತ್ರ ಪ್ರದರ್ಶನಕ್ಕೆ ತೀರ್ಮಾನಿಸಿದರೆ, ಕೇಂದ್ರ ಸರ್ಕಾರ ಅದನ್ನು ನಿರಾಕರಿಸಿ ಬೇರೆಯವರ ಹೆಸರು ಸೂಚಿಸಿ, ನಾರಾಯಣ ಗುರುಗಳಿಗೆ ಅಪಮಾನ ಮಾಡಿದೆ.  ಇದು ಕೇರಳ ಸರ್ಕಾರ, ನಮ್ಮ ಸರ್ಕಾರ ಅಥವಾ ನಾರಾಯಣ ಗುರುಗಳ ಅನುಯಾಯಿಗಳಿಗೆ ಮಾತ್ರ ಸೀಮಿತವಾದ ವಿಚಾರವಲ್ಲ. ಇದು ಇಡೀ ಮನುಕುಲ, ಮಾನವೀಯತೆಗೆ ಆಗಿರುವ ಅಪಮಾನ ಎಂದರು.

ಈ ವಿಚಾರ ರಾಜಕೀಯಕ್ಕೆ ಬಳಕೆ ಆಗುತ್ತಿಲ್ಲವೇ ಎಂಬ ಪ್ರಶ್ನೆಗೆ, ‘ಈ ಘಟನೆ ನಂತರ ಈ ಸಮುದಾಯಕ್ಕೆ ಸೇರಿದ ಇಬ್ಬರು ರಾಜ್ಯದ ಸಚಿವರು ಸ್ವಯಿಚ್ಛೆಯಿಂದ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆ ಎಂದು ನಿರೀಕ್ಷಿಸಿದ್ದೆ. ಆ ಸಮುದಾಯಕ್ಕೆ ಸೇರಿದವರೇ ರಾಜ್ಯದ ಕನ್ನಡ ಮತ್ತು ಸಂಸ್ಕೃತಿ ಸಚಿವರು. ಅವರು ಸಂಪುಟದಲ್ಲಿ ಒತ್ತಡ ಹೇರಿ, ಪ್ರಧಾನಿಗಳ ಮನವೊಲಿಸಿ ಸ್ವಾಭಿಮಾನದ ಸಂಕೇತವಾಗಿರುವ ನಾರಾಯಣ ಗುರುಗಳ ಸ್ತಬ್ಧಚಿತ್ರವನ್ನು ಪ್ರದರ್ಶನದಲ್ಲಿ ಉಳಿಸಿಕೊಳ್ಳುತ್ತಾರೆ ಎಂದು ಭಾವಿಸಿದ್ದೆ. ನಿನ್ನೆ ಸಂಜೆವರೆಗೂ ಅವರ ಸ್ತಬ್ಧಚಿತ್ರ ದಿಲ್ಲಿಯಲ್ಲೇ ಇತ್ತು. ಕೇಂದ್ರ ಸರ್ಕಾರ ಅದರ ಪ್ರದರ್ಶನಕ್ಕೆ ಅವಕಾಶ ನೀಡಲಿದೆ ಎಂದು ನಿರೀಕ್ಷೆ ಇಟ್ಟುಕೊಂಡಿದ್ದೆ. ಕೊನೆಗೂ ಇವತ್ತು ಮೆರವಣಿಗೆಯಲ್ಲಿ ಅದಕ್ಕೆ ಅವಕಾಶ ನೀಡದೇ ಹೋದ ಕಾರಣ ಈಗ ಮಾತನಾಡುತ್ತಿದ್ದೇನೆ’ ಎಂದು ಉತ್ತರಿಸಿದರು.

ದಕ್ಷಿಣ ಕನ್ನಡದಲ್ಲಿನ ಸ್ವಾಭಿಮಾನ ನಡಿಗೆಯಲ್ಲಿ ಭಾಗವಹಿಸುವುದಿಲ್ಲವೇ ಎಂಬ ಪ್ರಶ್ನೆಗೆ, ‘ಕರಾವಳಿ ಭಾಗದಲ್ಲಿ ಪಕ್ಷಾತೀತವಾಗಿ ಸ್ವಾಭಿಮಾನದ ನಡಿಗೆ ಮಾಡಲಾಗುತ್ತಿದೆ. ಸರಕಾರಕ್ಕೆ ಸೆಡ್ಡು ಹೊಡೆದು ನಾರಾಯಣಗುರುಗಳ ಸ್ತಬ್ಧಚಿತ್ರ ಮೆರವಣಿಗೆ ಮಾಡಲಾಗುತ್ತಿದೆ. ನಾನು ಅದರಲ್ಲಿ ಭಾಗವಹಿಸಿದರೆ ಅದಕ್ಕೆ ರಾಜಕೀಯ ಬಣ್ಣ ಬರುತ್ತದೆ ಎಂಬ ಕಾರಣಕ್ಕೆ ಕಾರ್ಯಕ್ರಮದಿಂದ ಹಿಂದೆ ಸರಿದೆ. ನನಗೆ ಈ ವಿಚಾರದಲ್ಲಿ ರಾಜಕೀಯ ಮಾಡಲು ಇಷ್ಟವಿಲ್ಲ. ನಮ್ಮ ಸರ್ಕಾರ ಅಧಿಕಾರದಲ್ಲಿದ್ದಾಗ ನಾರಾಯಣ ಗುರುಗಳ ಜಯಂತಿ ಆಚರಣೆ ಆರಂಭಿಸಿತು. ನಾವು ಆರಂಭಿಸಿದ ನಂತರ ಕೇರಳ ಸರಕಾರ ಶಿಫಾರಸ್ಸು ಮಾಡಿತ್ತು. ಇದನ್ನು ರಾಜ್ಯ ಬಿಜೆಪಿ ಸರ್ಕಾರ ಬೆಂಬಲಿಸುತ್ತದೆ ಎಂದು ಭಾವಿಸಿದ್ದೆ. ಆದರೆ ಸರಕಾರದ ಪ್ರತಿನಿಧಿಗಳು ಹೆದರಿ ಪ್ರಧಾನಿಗಳನ್ನು ಭೇಟಿ ಮಾಡಲಿಲ್ಲ. ಈ ಮಧ್ಯೆ ಇಬ್ಬರು ಸಚಿವರು ರಾಜೀನಾಮೆ ನೀಡುತ್ತಾರೆ ಎಂಬ ಸುದ್ದಿ ಬಂತು. ಕಾದು ನೋಡಿದೆ, ಆದರೆ ಅವರು ನೀಡಲಿಲ್ಲ’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next