Advertisement

ಬಿಎಸ್‌ಪಿ ಬಿಟ್ಟು ಬೇರೆ ಪಕ್ಷ ಸೇರುವುದಿಲ್ಲ

09:38 PM Aug 04, 2019 | Lakshmi GovindaRaj |

ಕೊಳ್ಳೇಗಾಲ: ಬಿಎಸ್‌ಪಿಯಲ್ಲೇ ಇರುತ್ತೇನೆ. ಸದ್ಯದ ಸಂದರ್ಭದಲ್ಲಿ ಬೇರೆ ಯಾವ ಪಕ್ಷವನ್ನು ಸೇರುವುದಿಲ್ಲ. ಅಲ್ಲದೆ ತಾತ್ಕಾಲಿಕ ಅಮಾನತ್ತಿನ ಕುರಿತು ಪಕ್ಷದ ವರಿಷ್ಠೆ ಮಾಯಾವತಿಯವರೊಂದಿಗೆ ಚರ್ಚಿಸಿದ್ದೇನೆ. ವಾರದಲ್ಲಿ ಉಚ್ಛಾಟನೆ ತೆರವುಗೊಳ್ಳಲಿದೆ ಎಂದು ಶಾಸಕ ಮಹೇಶ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Advertisement

ಪಟ್ಟಣದ ಆದರ್ಶ ನಗರದಲ್ಲಿರುವ ಶಾಸಕರ ನಿವಾಸದಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅದ್ಯಕ್ಷ ಡಿ.ನಟರಾಜು ಅಧ್ಯಕ್ಷತೆಯಲ್ಲಿ ಸಂಘದ ಪದಾಧಿಕಾರಿಗಳು, ಸದಸ್ಯರು ಪತ್ರಕರ್ತರ ವಿವಿಧ ಬೇಡಿಕೆಗಳ ಈಡೇರಿಕೆಗೆ ಮನವಿ ಪತ್ರ ಸಲ್ಲಿಸಿದ ಬಳಿಕ ಸುದ್ದಿ ಗಾರರೊಂದಿಗೆ ಮಾತನಾಡಿದರು.

ವರಿಷ್ಠೆ ಮಾಯಾವತಿಯೊಂದಿಗೆ ಚರ್ಚೆ: ರಾಜ್ಯದಲ್ಲಿ ಉಂಟಾಗಿದ್ದ ರಾಜಕೀಯ ಬಿಕ್ಕಟ್ಟು ಪರಿಹಾರವಾಗುವವರೆಗೆ ಯಾವ ಪಕ್ಷಕ್ಕೂ ಬೆಂಬಲ ನೀಡುವುದಿಲ್ಲ. ತಟಸ್ಥವಾಗಿರುತ್ತೇನೆ ಎಂದು ಮಾಯಾವತಿಗೆ ತಿಳಿಸಿದ್ದೆ. ಆದರೆ ಅವರು ನನಗೆ ಟ್ವೀಟ್‌ ಮೂಲಕ ಜೆಡಿಎಸ್‌ಗೆ ಬೆಂಬಲ ಸೂಚಿಸಲು ತಿಳಿಸಿರುವುದನ್ನು ನಾನು ಗಮನಿಸಲಿಲ್ಲ. ಈ ಸಂವಹನದ ಕೊರತೆಯಿಂದಾಗಿ ವರಿಷ್ಠೆ ನನ್ನನ್ನು ಪಕ್ಷದಿಂದ ಉಚ್ಛಾಟನೆ ಮಾಡಿದ್ದಾರೆ. ತಟಸ್ಥವಾಗಿರುವ ಬಗ್ಗೆ ಸವಿವರವಾದ ವರದಿಯೊಂದನ್ನು ವರಿಷ್ಠರ ಗಮನಕ್ಕೆ ತಂದಿದ್ದು, ಒಂದು ವಾರದಲ್ಲಿ ಇತ್ಯರ್ಥವಾಗಲಿದೆ ಎಂದು ಹೇಳಿದರು.

ಮಾಧ್ಯಮಗಳ ವಿರುದ್ಧ ಅಸಮಾಧಾನ: ರಾಜ್ಯದಲ್ಲಿ ಹಲವು ದಿಢೀರ್‌ ರಾಜಕೀಯ ಬೆಳೆವಣಿಗೆಗಳ ಸಂಭವಿಸಿದವು. ಈಗಲೂ ರಾಜಕೀಯವಾಗಿ ಬೇರೆ ಬೆಳವಣಿಗೆಗಳು ನಡೆಯುತ್ತಿವೆ. ಆದರೆ ಮಾಧ್ಯಮಗಳಲ್ಲಿ ಅದನ್ನು ತಿರುಚಿ ಬಳಸಲಾಗುತ್ತಿದೆ. ಇದು ಜನರನ್ನು ದಾರಿ ತಪ್ಪಿಸುತ್ತಿದೆ ಎಂದು ಅಸಮಧಾನ ವ್ಯಕ್ತಪಡಿಸಿದರು.

ಕ್ಷೇತ್ರದ ಅಭಿವೃದ್ಧಿಗೆ ಹಣ ನೀಡದಿದ್ದರಿಂದ ನಿರ್ಧಾರ: ಜೆಡಿಎಸ್‌ ಬೆಂಬಲದಿಂದ ಗೆದ್ದ ನನಗೆ ಕ್ಷೇತ್ರ ಅಭಿವೃದ್ಧಿಗಾಗಿ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿಯವರಿಗೆ 25 ಕೋಟಿ ಮಂಜೂರು ಮಾಡುವಂತೆ ಮನವಿ ಮಾಡಿದ್ದೆ. ಆದರೆ ಸಿಎಂ ಕೇವಲ 4 ಕೋಟಿ ಮಂಜೂರು ಮಾಡಿದರು. ಈ ಹಣದಿಂದ ಕ್ಷೇತ್ರ ಅಭಿವೃದ್ಧಿ ಸಾಧ್ಯವೇ? ಎಂದು ಕುಮಾರಸ್ವಾಮಿಯವರನ್ನು ಪ್ರಶ್ನಿಸಿದ್ದೆ. ಆದರೂ ಪ್ರಯೋಜನವಾಗಲಿಲ್ಲ ಎಂದು ಅಸಮಾಧಾನ ತೊಡಿಕೊಂಡರು.

Advertisement

ಪತ್ರಕರ್ತರಿಂದ ಮನವಿ: ರಾಜಕೀಯವಾಗಿ ಏನೇ ಬದಲಾವಣೆಯಾದರು ನಾನು ಯಾವುದೇ ಕಾರಣಕ್ಕೂ ಬೇರೆ ಪಕ್ಷ ಸೇರದೆ ತಟಸ್ಥ ನಿಲುವು ತಾಳಿದ್ದೇನೆ. ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಸುಮಾರು 8 ಬೇಡಿಕೆಗಳ ಮನವಿ ಸಲ್ಲಿಸಲಾಗಿದೆ. ಕೂಡಲೇ ಬೇಡಿಕೆಗಳನ್ನು ಪೂರೈಸಿಕೊಡುವ ಭರವಸೆ ನೀಡಿದರು.

ಸರ್ಕಾರದಿಂದ ಪತ್ರಕರ್ತರ ಭವನ ನಿರ್ಮಾಣ ಮಾಡಲು ಈಗಾಗಲೇ 10 ಸೆಂಟ್‌ ನಿವೇಶನ ನೀಡಲಾಗಿದೆ. ನಿವೇಶನಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಬೇಲಿ ಹಾಕಿದ್ದಾರೆ. ಕೂಡಲೇ ತಹಶೀಲ್ದಾರ್‌ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು, ಪತ್ರಕರ್ತರ ನೇತೃತ್ವದಲ್ಲಿ ಸಭೆ ನಡೆಸಿ, ಬೇಲಿ ತೆರವು ಮಾಡಿ ಕೂಡಲೇ ಭವನ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡುವುದಾಗಿ ಹೇಳಿದರು.

ಸಂಘದ ಉಪಾದ್ಯಕ್ಷ ಮರಿಸ್ವಾಮಿ, ಪ್ರಧಾನ ಕಾರ್ಯದರ್ಶಿ ಎನ್‌.ರಾಜೇಶ್‌, ಖಜಾಂಚಿ ಮಲ್ಲಪ್ಪ, ನಿರ್ದೇಶಕರಾದ ಎ.ಎಚ್‌.ಗೋವಿಂದ, ಬಸಂತ್‌ ಮೋಟಾಯ್‌, ಅವಿನ್‌ ಪ್ರಕಾಶ್‌, ಮರಿಸ್ವಾಮಿ(ಸೋಮು), ಸದಸ್ಯರಾದ ಯೂನಸ್‌, ಸಾಗರ್‌, ಗಿರಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next