Advertisement

ನಾಗಾಲ್ಯಾಂಡ್‌ನ‌ಲ್ಲಿ ಪ್ರತಿಪಕ್ಷವೇ ಇಲ್ಲ; ಎಲ್ಲಾ ಪಕ್ಷಗಳೂ ಸೇರಿ ಸರ್ಕಾರ ರಚನೆ

10:41 PM Mar 06, 2023 | Team Udayavani |

ಅಗರ್ತಲಾ/ನವದೆಹಲಿ/ಕೊಹಿಮಾ:ನಾಗಾಲ್ಯಾಂಡ್‌ನ‌ ನೂತನ ವಿಧಾನಸಭೆಯಲ್ಲಿ ಪ್ರತಿಪಕ್ಷವೇ ಇಲ್ಲ. ಅಚ್ಚರಿಯಾದರೂ, ಈ ಅಂಶ ಸತ್ಯ. ಇತ್ತೀಚೆಗೆ ಮುಕ್ತಾಯವಾದ ಚುನಾವಣೆಯಲ್ಲಿ ನ್ಯಾಷನಲಿಸ್ಟ್‌ ಡೆಮಾಕ್ರಾಟಿಕ್‌ ಪ್ರೊಗ್ರೆಸಿವ್‌ ಪಾರ್ಟಿ (ಎನ್‌ಡಿಪಿಪಿ) ಮತ್ತು ಬಿಜೆಪಿ ಮೈತ್ರಿ ಕೂಟ 37 ಕ್ಷೇತ್ರಗಳಲ್ಲಿ ಗೆದ್ದು ಅಧಿಕಾರದ ಚುಕ್ಕಾಣಿಯನ್ನು ಮತ್ತೆ ಪಡೆದುಕೊಂಡಿದೆ.

Advertisement

ಎನ್‌ಸಿಪಿ 7, ಎನ್‌ಪಿಪಿ 5, ಎಲ್‌ಜೆಪಿ (ರಾಮ್‌ವಿಲಾಸ್‌ ಪಾಸ್ವಾನ್‌) ನಾಗಾ ಪೀಪಲ್ಸ್‌ ಫ್ರಂಟ್‌, ಆರ್‌ಪಿಐ (ಅಥಾವಳೆ) ತಲಾ 2, ಜೆಡಿಯು 1, ಸ್ವತಂತ್ರರು 4 ಕ್ಷೇತ್ರಗಳಲ್ಲಿ ಗೆದ್ದಿದ್ದರು. ಈಗ ಅವರೆಲ್ಲರೂ ಎನ್‌ಡಿಪಿಪಿ ಮತ್ತು ಬಿಜೆಪಿ ಮೈತ್ರಿಕೂಟಕ್ಕೆ ಬೆಂಬಲ ನೀಡುವ ಬಗ್ಗೆ ಪತ್ರ ನೀಡಿದ್ದಾರೆ. ನಾಗಾಲ್ಯಾಂಡ್‌ನ‌ಲ್ಲಿ ಎನ್‌ಡಿಪಿಪಿ ಶಾಸಕಾಂಗ ಪಕ್ಷದ ನಾಯಕ ನೈಫಿಯೂ ರಿಯೊ ಮುಖ್ಯಮಂತ್ರಿಯಾಗಿ ಮಂಗಳವಾರ ಪ್ರಮಾಣ ಸ್ವೀಕರಿಸಲಿದ್ದಾರೆ.

ಗಮನಾರ್ಹವೆಂದರೆ, ಮಹಾರಾಷ್ಟ್ರದಲ್ಲಿ ಬಿಜೆಪಿಯನ್ನು ವಿರೋಧಿಸುವ ಶರದ್‌ ಪವಾರ್‌ ನೇತೃತ್ವದ ಎನ್‌ಸಿಪಿ ಈಶಾನ್ಯ ರಾಜ್ಯದಲ್ಲಿ ಬಿಜೆಪಿಗೆ ಬೆಂಬಲ ನೀಡುತ್ತಿದೆ. 2015 ಮತ್ತು 2021ರಲ್ಲಿಯೂ ಕೂಡ ನಾಗಾಲ್ಯಾಂಡ್‌ನ‌ಲ್ಲಿ ಪ್ರತಿಪಕ್ಷಗಳು ಇಲ್ಲದ ಸರ್ಕಾರ ರಚನೆಯಾಗಿತ್ತು.

ಮಾಣಿಕ್‌ ಸಹಾ ಸಿಎಂ:
ಅನಿಶ್ಚಿತತೆಗಳ ನಡುವೆ ಎರಡನೇ ಬಾರಿಗೆ ತ್ರಿಪುರಾ ಮುಖ್ಯಮಂತ್ರಿಯಾಗಿ ಮಾಣಿಕ್‌ ಸಹಾ ಅವರು ಆಯ್ಕೆಯಾಗಿದ್ದಾರೆ. ಅಗರ್ತಲಾದಲ್ಲಿ ಸೋಮವಾರ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಅವಿರೋಧವಾಗಿ ಅವರ ಆಯ್ಕೆ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ. ಕೆಲ ದಿನಗಳಿಂದ ಕೇಂದ್ರ ಸಚಿವೆ ಪ್ರತಿಮಾ ಭೌಮಿಕ್‌ ಅವರೇ ಮುಖ್ಯಮಂತ್ರಿಯಾಗಲಿದ್ದಾರೆ ಎಂಬ ಬಗ್ಗೆ ಹಲವು ವದಂತಿಗಳು ಚಾಲ್ತಿಯಲ್ಲಿ ಇದ್ದವು. ಅವರು ಮಾ.8ರಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇತ್ತೀಚೆಗೆ ಮುಕ್ತಾಯಗೊಂಡ ಚುನಾವಣೆಯಲ್ಲಿ 60 ಸದಸ್ಯ ಬಲದ ವಿಧಾನಸಭೆಯಲ್ಲಿ ಬಿಜೆಪಿ 32 ಕ್ಷೇತ್ರಗಳಲ್ಲಿ ಗೆದ್ದಿದೆ.

58 ಶಾಸಕರ ಪ್ರಮಾಣ:
ಮೇಘಾಲಯದ ಮುಖ್ಯಮಂತ್ರಿಯಾಗಿ ಎನ್‌ಪಿಪಿಯ ಕೊನ್ರಾಡ್‌ ಸಂಗ್ಮಾ ಅವರು ಎರಡನೇ ಬಾರಿಗೆ ಮಾ.8ರಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಎನ್‌ಪಿಪಿ ವತಿಯಿಂದ 8 ಮಂದಿ ಸಚಿವರಾಗಲಿದ್ದಾರೆ. ಬಿಜೆಪಿ, ಹಿಲ್‌ ಸ್ಟೇಟ್‌ ಡೆಮಾಕ್ರಾಟಿಕ್‌ ಪಾರ್ಟಿಯಿಂದ ಒಬ್ಬೊಬ್ಬ ಶಾಸಕರು ಸಚಿವರಾಗಲಿದ್ದಾರೆ ಎಂದು ನಿಯೋಜಿತ ಮುಖ್ಯಮಂತ್ರಿ ಕೊನ್ರಾಡ್‌ ಸಂಗ್ಮಾ ಹೇಳಿದ್ದಾರೆ.

Advertisement

ಇದೇ ವೇಳೆ, ಸೋಮವಾರ ನೂತನವಾಗಿ ಆಯ್ಕೆಯಾದ 58 ಮಂದಿ ಶಾಸಕರು ವಿಧಾನಸಭೆಯಲ್ಲಿ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಎನ್‌ಪಿಸಿ 26, ಬಿಜೆಪಿ 2, ಎಚ್‌ಎಸ್‌ಡಿಪಿಯ 2, ಇಬ್ಬರು ಪಕ್ಷೇತರ ಶಾಸಕರು ಸರ್ಕಾರಕ್ಕೆ ಬೆಂಬಲ ನೀಡಿದ್ದಾರೆ. ಮಾ.5ರಂದು ನಡೆದಿದ್ದ ಬೆಳವಣಿಗೆಯಲ್ಲಿ ಯುನೈಟೆಡ್‌ ಡೆಮಾಕ್ರಾಟಿಕ್‌ ಪಾರ್ಟಿ ಮತ್ತು ಪೀಪಲ್ಸ್‌ ಡೆಮಾಕ್ರಾಟಿಕ್‌ ಫ್ರಂಟ್‌ನ ಶಾಸಕರು ಬೆಂಬಲ ನೀಡುವ ವಾಗ್ಧಾನ ಮಾಡಿದ್ದರು. ಇದರಿಂದಾಗಿ ಸಗ್ಮಾ ನೇತೃತ್ವದ ಸರ್ಕಾರಕ್ಕೆ ಸದ್ಯ 45 ಶಾಸಕರ ಬೆಂಬಲ ಇದೆ.

ಇಂದಿನಿಂದ 2 ದಿನ ಪ್ರಧಾನಿ ಈಶಾನ್ಯ ಪ್ರವಾಸ
ಪ್ರಧಾನಿ ನರೇಂದ್ರ ಮೋದಿಯವರು ಮಂಗಳವಾರದಿಂದ ಎರಡು ದಿನಗಳ ಕಾಲ ಈಶಾನ್ಯ ರಾಜ್ಯಗಳ ಪ್ರವಾಸ ಕೈಗೊಳ್ಳಲಿದ್ದಾರೆ. ತ್ರಿಪುರಾ, ನಾಗಾಲ್ಯಾಂಡ್‌ ಮತ್ತು ಮೇಘಾಲಯಗಳಲ್ಲಿ ಬಿಜೆಪಿ ಮತ್ತು ಎನ್‌ಡಿಎ ಸರ್ಕಾರಗಳ ನೂತನ ಮುಖ್ಯಮಂತ್ರಿಗಳ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಮಂಗಳವಾರ ರಾತ್ರಿ ಅವರು ಗುವಾಹಟಿಯಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಈ ಸಂದರ್ಭದಲ್ಲಿ ಅಸ್ಸಾಂನ ಸಚಿವ ಸಂಪುಟ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಆರೋಗ್ಯ ಸಚಿವ ಕೇಶವ್‌ ಮಹಾಂತ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next