Advertisement
ಎಪಿಎಂಸಿಗೆ ನಿತ್ಯ 2-3 ಸಾವಿರ ಕ್ವಿಂಟಲ್ ವರೆಗೂ ಈರುಳ್ಳಿ ಬರುತ್ತಿದೆ. 1,800ರಿಂದ 3,900 ರೂ. ವರೆಗೆ ಈರುಳ್ಳಿ ಗುಣಮಟ್ಟ ಹಾಗೂ ಗಡ್ಡೆಗಳ ಗಾತ್ರದ ಮೇಲೆ ದರ ನಿಗದಿಯಾಗುತ್ತಿತ್ತು. ಆದರೆ ಎರಡು ದಿನಗಳ ಹಿಂದೆ ಮಾರುಕಟ್ಟೆಗೆ ಹೆಚ್ಚು ಉತ್ಪನ್ನ ಬಂದಿದ್ದು, ಖರೀದಿದಾರರು ಟೆಂಡರ್‌ನಲ್ಲಿ ಭಾಗಿಯಾಗಿಯೇ ಇಲ್ಲ. ಹೀಗಾಗಿ ಅಧಿ ಕಾರಿಗಳು ವರ್ತಕರ ಮನವೊಲಿಸಿ ಅಂದಿನ ಉತ್ಪನ್ನವನ್ನಷ್ಟೇ ಖರೀದಿಸಿದ್ದು, ಮರುದಿನವೇ ಮಾರುಕಟ್ಟೆಗೆ ಈರುಳ್ಳಿ ತರದಂತೆ ಪ್ರಕಟನೆ ಹೊರಡಿಸಿದ್ದಾರೆ.
ರಾಯಚೂರು, ದೇವದುರ್ಗ, ಲಿಂಗಸೂಗೂರು ತಾಲೂಕು ಭಾಗದಲ್ಲಿ ಹೆಚ್ಚಾಗಿ ಈರುಳ್ಳಿ ಬೆಳೆಯಲಾಗಿದೆ. ಸ್ಥಳೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಿದರೆ ರೈತರಿಗೆ ಸಾಗಣೆ ವೆಚ್ಚ ಉಳಿಯುತ್ತಿತ್ತು. ಜಿಲ್ಲೆಯಿಂದ ಮಾತ್ರವಲ್ಲ, ಅಕ್ಕಪಕ್ಕದ ಆಂಧ್ರ ಪ್ರದೇಶ ಹಾಗೂ ತೆಲಂಗಾಣದಿಂದಲೂ ರೈತರು ಈರುಳ್ಳಿ ತರುತ್ತಿದ್ದರು. ಈಗ ಖರೀದಿ ದಾರರೇ ಇಲ್ಲದ ಕಾರಣಕ್ಕೆ ದೂರದ ಹೈದರಾಬಾದ್, ಕರ್ನೂಲ್ ಸೇರಿ ಬೇರೆ ಕಡೆಗೆ ಸಾಗಣೆ ಮಾಡಬೇಕಿದ್ದು, ರೈತರಿಗೆ ಹೊರೆಯಾಗಲಿದೆ. ಹೀಗಾಗಿ ಕೆಲ ರೈತರು ಎರಡು ದಿನಗಳಿಂದ ಇಲ್ಲಿನ ತರಕಾರಿ ಮಾರುಕಟ್ಟೆಯಲ್ಲೇ ಈರುಳ್ಳಿ ಮಾರಾಟ ಮಾಡಿದ್ದಾರೆ. ಆದರೆ ಇಲ್ಲಿ ಹೆಚ್ಚಿನ ಕಮಿಷನ್ ಪಡೆಯುತ್ತಿದ್ದು, ಇಲ್ಲೂ ನಷ್ಟ ಉಂಟಾಗುತ್ತಿದೆ.
Related Articles
ರಾಯಚೂರಿನ ರಾಜೇಂದ್ರ ಗಂಜ್ ಇಡೀ ರಾಜ್ಯದಲ್ಲಿಯೇ ದೊಡ್ಡ ಮಾರುಕಟ್ಟೆ ಎಂಬ ಹಿರಿಮೆ ಹೊಂದಿತ್ತು. ಆದರೆ ಇಂಥ ಎಪಿಎಂಸಿಯಲ್ಲಿ ಈರುಳ್ಳಿ ಖರೀದಿಸುವ ವರ್ತಕರು ಕೇವಲ ಮೂವರೇ ಇದ್ದಾರೆ. ಇದರಿಂದ ಅವರು ಮನಬಂದಂತೆ ದರ ನಿಗದಿ ಮಾಡುತ್ತಾರೆಂಬ ಆರೋಪಗಳಿವೆ. ಮಾರುಕಟ್ಟೆಗೆ ಎಷ್ಟೇ ಉತ್ಪನ್ನ ಬಂದರೂ ಈ ಮೂವರೇ ಖರೀದಿಸಬೇಕಿದೆ. ನಮಗೆ ಬೇಡಿಕೆ ಬಂದಿಲ್ಲ. ಹೀಗಾಗಿ ನಾವು ಖರೀದಿಸುವುದಿಲ್ಲ. ರೈತರು ಬೇರೆ ಎಲ್ಲಿಯಾದರೂ ಮಾರಿಕೊಳ್ಳಬಹುದು ಎನ್ನುತ್ತಿದ್ದಾರೆ.
Advertisement
ಸರಕಾರ ಈರುಳ್ಳಿ ಬೆಳೆಗಾರರ ನೆರವಿಗೆ ಧಾವಿಸಬೇಕಿದೆ. ಎಪಿಎಂಸಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವರ್ತಕರಿಗೆ ಲೈಸನ್ಸ್ ನೀಡಬೇಕು. ಇಲ್ಲವಾದರೆ ಈರುಳ್ಳಿ ಬೆಳೆಗಾರರು ನಷ್ಟ ಎದುರಿಸಬೇಕಾಗುತ್ತದೆ.-ಲಕ್ಷ್ಮಣಗೌಡ ಕಡಗಂದಿನ್ನಿ, ರೈತ ಮುಖಂಡ ಸಿದ್ಧಯ್ಯಸ್ವಾಮಿ ಕುಕನೂರು