Advertisement

ಕುಡಿಯುವ ನೀರು ಚರಂಡಿ ಪಾಲಾದರೂ ಕೇಳ್ಳೋರಿಲ್ಲ!

01:36 PM May 17, 2019 | Team Udayavani |

ಚಿಕ್ಕಬಳ್ಳಾಪುರ: ನಗರದ 26ನೇ ವಾರ್ಡ್‌ನಲ್ಲಿ ಹಾದು ಹೋಗಿರುವ ಜಕ್ಕಲ ಮಡುಗು ಜಲಾಶಯದ ಪೈಪ್‌ಲೈನ್‌ ಒಡೆದು ಕೊಳಚೆ ನೀರು ಮಿಶ್ರಣಗೊಂಡು ಮನೆಗಳಿಗೆ ಕೊಳಚೆ ನೀರು ಪೂರೈಕೆಗೊಳ್ಳುತ್ತಿದ್ದರೂ ನಗರಸಭೆ ಅಧಿಕಾರಿಗಳು ಜಾಣಕುರುಡಂತೆ ವರ್ತಿಸುತ್ತಿದ್ದಾರೆ ಎಂದು ಸ್ಥಳೀಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ಕೊಳಚೆ ನೀರು ಸರಬರಾಜು: ಶುದ್ಧ ಕುಡಿಯುವ ನೀರು ಚರಂಡಿ ಪಾಲಾಗುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ತಲೆ ಕೆಡಿಸಿಕೊಳ್ಳದೇ ಇಲ್ಲಿನ ನಿವಾಸಿಗಳಿಗೆ ಅದೇ ಕೊಳಚೆ ನೀರನ್ನು ಸರಬರಾಜು ಮಾಡುತ್ತಿದ್ದಾರೆ ಎಂದು ನಗರಸಭೆ ಅಧಿಕಾರಿಗಳ ಕಾರ್ಯವೈಖರಿ ವಿರುದ್ಧ ಬಡಾವಣೆ ನಾಗರಿಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ನೀರು ಪೋಲಾಗುವುದು ತಡೆಗೆ ವಿಫ‌ಲ: ಜಿಲ್ಲೆಯಲ್ಲಿ ಸತತ ಬರದಿಂದಾಗಿ ಕುಡಿಯುವ ನೀರಿನ ಸಮಸ್ಯೆ ಮುಗಿಲು ಮುಟ್ಟಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ಹನಿ ನೀರಿಗೂ ತತ್ವಾರ ಏರ್ಪಟ್ಟಿದೆ. ಆದರೆ ನಗರದ ಜನತೆಗೆ ವರದಾನವಾಗಿರುವ ಜಕ್ಕಲಮಡುಗು ಜಲಾಶಯದ ನೀರು ಪೋಲಾಗುವುದನ್ನು ತಡೆಯುವಲ್ಲಿ ನಗರಸಭೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ.

ನಿವಾಸಿಗಳ ಅಳಲು: ಒಡೆದ ಪೈಪ್‌ಲೈನ್‌ಗೆ ಚರಂಡಿಯ ನೀರಿಗೆ ಮಿಶ್ರಣಗೊಳ್ಳುತ್ತಿದ್ದರೂ, ದುರಸ್ತಿಯ ಕಾರ್ಯಕ್ಕೆ ಮುಂದಾಗುತ್ತಿಲ್ಲ. ಇದರಿಂದ ಅಪಾರ ಪ್ರಮಾಣದ ಶುದ್ಧ ನೀರು ಚರಂಡಿ ಪಾಲಾಗುತ್ತಿದೆ. ಚರಂಡಿಯ ಕೊಳಚೆ ನೀರು ಶುದ್ಧ ಕುಡಿಯುವ ನೀರು ಪೂರೈಸುವ ಪೈಪ್‌ಲೈನ್‌ಗೆ ಸೇರಿ ಮನೆಗಳಿಗೆ ಗಬ್ಬುನಾಥ ಬೀರುವ ಕೊಳಚೆ ನೀರು ಬರುತ್ತಿವೆ. ಇದರಿಂದ ಮನೆಗಳ ಸಂಪುಗಳು ಅನೈರ್ಮಲ್ಯಕ್ಕೆ ತುತ್ತಾಗಿವೆ ಎಂದು ಬಡಾವಣೆಯ ನಿವಾಸಿಗಳು ತಮ್ಮ ಅಳಲು ತೋಡಿಕೊಂಡಿದ್ದಾರೆ.

ಸದ್ಯ ಬಡಾವಣೆಗೆ ನಾಲ್ಕೈದು ದಿನಗಳಿಗೊಮ್ಮೆ ನೀರು ಸರಬರಾಜು ಮಾಡುವುದರಿಂದ ಇಲ್ಲಿನ ನಿವಾಸಿಗಳು ವಿಧಿಯಿಲ್ಲದೆ ಕೊಳಚೆ ನೀರನ್ನು ಹಿಡಿದು ಕುದಿಸಿ ಕುಡಿಯುವ ದುಸ್ಥಿತಿ ನಿರ್ಮಾಣವಾಗಿದೆ. ಆದರೆ ಕೊಳಚೆ ನೀರು ಪೂರೈಕೆಯ ಕುರಿತು ಮಾಹಿತಿಯಿಲ್ಲದ ಕೆಲವರು ಹಲವು ಸಾಂಕ್ರಾಮಿಕ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ ಎಂದು ಬಡಾವಣೆಯ ನಿವಾಸಿ ಮಂಜುನಾಥ ತಮ್ಮ ಅಸಹಾಯಕತೆ ವ್ಯಕ್ತಪಡಿಸಿದರು.

Advertisement

•ಜಕ್ಕಲಮಡುಗು ಜಲಾಶಯದ ಪೈಪ್‌ಲೈನ್‌ ಒಡೆದು ಕೊಳಚೆ ನೀರು ಮಿಶ್ರಣ
•ನಗರಸಭೆ ಅಧಿಕಾರಿಗಳು ಜಾಣಕುರುಡಂತೆ ವರ್ತನೆ
•ನಿವಾಸಿಗಳಿಗೆ ಇದೇ ಕೊಳಚೆ ನೀರು ಸರಬರಾಜು
•ನೀರು ಪೋಲಾಗುವುದನ್ನು ತಡೆಯುವಲ್ಲಿ ನಗರಸಭೆ ಅಧಿಕಾರಿಗಳು ನಿರ್ಲಕ್ಷ್ಯ

Advertisement

Udayavani is now on Telegram. Click here to join our channel and stay updated with the latest news.

Next