ಬೆಂಗಳೂರು: ಹೌದು. ಹಿರಿಯರು ಸೂಚನೆ ನೀಡಿದ್ದಾರೆ. ಇನ್ನು ಮುಂದೆ ಪಕ್ಷದೊಳಗೆ ಯಾರನ್ನೂ ಬಯ್ಯುವುದಿಲ್ಲ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ನೀಡಿದ್ದಾರೆ.
ಯಾರ ವಿರುದ್ಧವೂ ಮಾತಾಡದಂತೆ ವರಿಷ್ಠರು ಹೇಳಿದ್ದಾರಾ ಅನ್ನೋ ಪ್ರಶ್ನೆಗೆ ಉತ್ತರಿಸಿದ ಅವರು, ಹೌದು ಹಿರಿಯರು ಸೂಚನೆ ನೀಡಿದ್ದಾರೆ. ಪಕ್ಷದೊಳಗೆ ಯಾರನ್ನೂ ಬೈಯ್ಯದಂತೆ ಸೂಚಿಸಿದ್ದಾರೆ. ಇನ್ಮುಂದೆ ಕಾಂಗ್ರೆಸ್ ಪಕ್ಷದವರನ್ನು ಮಾತ್ರ ಬೈಯ್ಯುತ್ತೇನೆ. ಪಕ್ಷದ ಒಳಗೆ ಯಾರನ್ನೂ ಬೈಯ್ಯುವುದಿಲ್ಲ ಎಂದರು.
ಇದು ಪಕ್ಷದ ಬೆಳವಣಿಗೆ ಹಾಗೂ ವೈಯಕ್ತಿಕ ಬೆಳವಣಿಗೆಗೂ ಒಳ್ಳೆಯದು. ಯಡಿಯೂರಪ್ಪ ಪಾಪ ಅವರನ್ನ ಯಾಕೆ ಬೈಯ್ಯಲಿ. ಅವರು ರಾಜಕೀಯದಿಂದ ದೂರವಾಗಿದ್ದಾರೆ. ಅವರೇನು ಮುಂದೆ ಮುಖ್ಯಮಂತ್ರಿ ಆಗಲ್ವಲ್ಲ. ಅವರು ಪಾರ್ಲಿಮೆಂಟರಿ ಬೋರ್ಡ್ ಸದಸ್ಯರಾಗಿದ್ದಾರೆ ಎಂದು ಯಡಿಯೂರಪ್ಪ ಮೇಲೆ ಯತ್ನಾಳ್ ಸಾಫ್ಟ್ ಕಾರ್ನರ್ ತೋರಿದರು.
ಅವರು ದೊಡ್ಡತನ ತೋರಿದ್ದಾರೆ. ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ನಮ್ಮ ಜಿಲ್ಲಾ ಅಧ್ಯಕ್ಷರ ಮೂಲಕ ಕರೆ ಮಾಡಿಸಿದ್ದರು. ಯತ್ನಾಳ್ ಬಗ್ಗೆ ಇದ್ದ ತಪ್ಪು ಕಲ್ಪನೆ ಸ್ವಚ್ಚವಾಗಿದೆ. ಇವೆಲ್ಲಾ ರಾಜಕಾರಣದಲ್ಲಿ ಇದ್ದದ್ದೇ. ತಪ್ಪು ಕಲ್ಪನೆ ತಿಳಿ ಮಾಡಿಕೊಂಡು ಮುಂದೆ ನಡೆಯಬೇಕಿದೆ. ಪಂಚಮಸಾಲಿ ಹೋರಾಟ ವಿಚಾರವೂ ತಿಳಿಸಿದ್ದೇನೆ. ನಾನಂತು ಬ್ರಾಹ್ಮಣರನ್ನು ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿಸಲು ಹೇಳಿದ್ದೇನೆ. ಪಾಪ ಅವರು 2% ಮಾತ್ರ ಇದ್ದಾರೆ ಎಂದರು.
ಬ್ರಾಹ್ಮಣರನ್ನ ಅಲ್ಪಸಂಖ್ಯಾತರಿಗೆ ಸೇರಿಸಿದ್ರೆ ವಿರೋಧ ಆಗಲ್ವಾ ಅನ್ನೋ ಪ್ರಶ್ನೆಗೆ ಉತ್ತರಿಸಿದ ಅವರು, ಜೈನ, ಬೌದ್ಧ ಎಲ್ಲರೂ ಹಿಂದೂಗಳೇ. ಅವರು ಈಗ ಅಲ್ಪಸಂಖ್ಯಾತರಾಗಿಲ್ವಾ..? ಹಿಂದೂ ಧರ್ಮದ ರಕ್ಷಣೆಗೆ ಹುಟ್ಟಿದ್ದೇ ಸಿಖ್ ಧರ್ಮ. ಜೈನ, ಬೌದ್ಧ ಧರ್ಮ ಕೂಡ ಹಿಂದೂ ಧರ್ಮದ್ದೆ ಎಂದರು.