Advertisement

ಅನಗತ್ಯ ಯಾರನ್ನೂ ಬಂಧಿಸುವುದಿಲ್ಲ: ಎಡಿಜಿಪಿ ಆಲೋಕ್‌ ಕುಮಾರ್‌

01:26 AM Jul 31, 2022 | Team Udayavani |

ಮಂಗಳೂರು: ಯಾವುದೇ ಪ್ರಕರಣದಲ್ಲಿ ವಿನಾಕಾರಣ ಯಾರನ್ನೂ ವಶಕ್ಕೆ ಪಡೆದು ವಿಚಾರಿಸುವುದಾಗಲಿ, ಬಂಧಿಸುವುದಾಗಲಿ ಮಾಡುವುದಿಲ್ಲ. ಶಂಕಿತರನ್ನು ಮಾತ್ರವೇ ವಶಕ್ಕೆ ಪಡೆದು ವಿಚಾರಣೆಗೊಳಪಡಿಸಲಾಗುತ್ತಿದೆ ಎಂದು ರಾಜ್ಯ ಪೊಲೀಸ್‌ ಉಪ ಮಹಾನಿರ್ದೇಶಕ ಆಲೋಕ್‌ ಕುಮಾರ್‌ ತಿಳಿಸಿದ್ದಾರೆ.

Advertisement

ಅವರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ನಡೆದ ಶಾಂತಿ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಈ ಕುರಿತು ಶಾಂತಿಸಭೆಯಲ್ಲಿ ಹಲವರಿಂದ ಅನುಮಾನಗಳು ಬಂದಿದ್ದು, ಅವರಿಗೆ ಸ್ಪಷ್ಟಪಡಿಸಲಾಗಿದೆ ಎಂದರು.

ಬೀಟ್‌ ಕಮಿಟಿ, ಮೊಹಲ್ಲಾ ಕಮಿಟಿ ಹಾಗೂ ಠಾಣಾ ಮಟ್ಟದಲ್ಲಿ ಶಾಂತಿ ಸಭೆಗಳನ್ನು ನಡೆಸಬೇಕು. ಆ ಮೂಲಕ ಇಂತಹ ಘಟನೆಗಳಿಗೆ ಕಡಿವಾಣ ಹಾಕಲು ಸಾಧ್ಯ ಎಂಬ ಸಲಹೆ ವ್ಯಕ್ತವಾಗಿದೆ. ಸಭೆಯನ್ನು ಪರಿಣಾಮಕಾರಿ ಯಾಗಿ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇವೆ. ಗಾಂಜಾ ಮತ್ತು ಮದ್ಯ ಸೇವಿಸಿದವರಿಂದ ಇಂತಹ ಪ್ರಕರಣಗಳು ನಡೆಯುತ್ತಿವೆ ಎಂಬ ಆತಂಕ ವ್ಯಕ್ತವಾಗಿದ್ದು, ಆ ಬಗ್ಗೆಯೂ ಅಧಿಕಾರಿ ಗಳಿಗೆ ನಿರ್ದೇಶನ ನೀಡಲಾಗುವುದು. ಕೆಲವೆಡೆ 12 ಗಂಟೆ ವರೆಗೂ ಬಾರ್‌,ಪಬ್‌ಗಳು ಧ್ವನಿವರ್ಧಕ ಹಾಕಿಕೊಂಡಿ ರುವ ಬಗ್ಗೆಯೂ ಚರ್ಚೆಯಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಬಿತ್ತರಿಸುವವರ ವಿರುದ್ಧವೂ ಕ್ರಮ ಜರಗಿಸುವಂತೆ ಆಗ್ರಹಿಸಿದ್ದಾರೆ ಎಂದು ವಿವರಿಸಿದರು.

ಮಾಧ್ಯಮಗಳು ಟಿಆರ್‌ಪಿಗಾಗಿ ಒಂದು ವಿಷಯವನ್ನೇ ಮೇಲಿಂದ ಮೇಲೆ ತೋರಿಸಿ ಜನರಲ್ಲಿ ಭಯದ ವಾತಾವರಣ ಸೃಷ್ಟಿಸಿ, ಜಿಲ್ಲೆಯ ಬಗ್ಗೆ ಋಣಾತ್ಮಕ ಭಾವ ಮೂಡುವಂತೆ ಮಾಡಲಾಗುತ್ತಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಸಾಮಾಜಿಕ ಜಾಲತಾಣ ಗಳಲ್ಲಿ ಅಪಪ್ರಚಾರ, ಪ್ರಚೋದನಕಾರಿ ಹೇಳಿಕೆ ನೀಡುವವರ ಬಗ್ಗೆ ಕ್ರಮ ಜರಗಿಸಲು ಬಂದ ಸೂಚನೆಯನ್ನೂ ಪರಿಗಣಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಎಡಿಜಿಪಿ ತಿಳಿಸಿದರು.

ಪ್ರಚೋದನಕಾರಿ ಭಾಷಣಗಳು ಅಶಾಂತಿಗೆ ಕಾರಣ ಎಂಬ ಸಭೆಯ ಅಭಿಪ್ರಾಯದ ಕುರಿತು ಪ್ರತಿಕ್ರಿಯಿಸಿದ ಎಡಿಜಿಪಿ, ಪ್ರಚೋದನಕಾರಿ ಭಾಷಣಗಳ ಕುರಿತು ದೂರು ಬಂದಲ್ಲಿ ಹಿಂದೆಯೂ ಕ್ರಮ ಕೈಗೊಂಡಿದ್ದೇವೆ. ಮುಂದೆಯೂ ದೂರು ಬಂದರೆ ಕೈಗೊಳ್ಳಲಾಗುವುದು ಎಂದರು.

Advertisement

ನಿರಂತರವಾಗಿ ಶಾಂತಿ ಸಭೆ
ಉಸ್ತುವಾರಿ ಸಚಿವರು, ಶಾಸಕರು ಹಾಗೂ ಸ್ಥಳೀಯ ಎಲ್ಲ ಜನಪ್ರತಿನಿಧಿ ಗಳನ್ನು ಒಳಗೊಂಡ ಶಾಂತಿ ಸಭೆ ಯನ್ನು ಮುಂದಿನ ವಾರವೇ ನಡೆಸಲಾಗುವುದು. ಶಾಂತಿ ನೆಲೆಯಾಗುವ ವರೆಗೆ ಆಗಾಗ ಶಾಂತಿ ಸಭೆ ನಡೆಸ ಲಾಗುವುದು ಎಂದು ಡಿಸಿ ತಿಳಿಸಿದರು.

ಶಾಂತಿಸಭೆಯ ಮುಖ್ಯಾಂಶ
ಬೆಳ್ಳಾರೆಯಲ್ಲಿ ಹತ್ಯೆಗೀಡಾದ ಪ್ರವೀಣ್‌ ನೆಟ್ಟಾರು ಅವರ ಮನೆಗೆ ಭೇಟಿ ನೀಡಿದ್ದ ಮುಖ್ಯಮಂತ್ರಿಗಳು ಅದಕ್ಕಿಂದ ಕೆಲವು ದಿನಗಳ ಹಿಂದೆ ಮೃತ ಪಟ್ಟ ಮಸೂದ್‌ ಮಾತ್ರವಲ್ಲದೆ, ಸಿಎಂ ನಗರದಲ್ಲಿರುವಾಗಲೇ ಮೃತಪಟ್ಟ ಫಾಝಿಲ್‌ ಮನೆಗೂ ಭೇಟಿ ನೀಡಿ ಸಾಂತ್ವನ ಹೇಳಬೇಕಾಗಿತ್ತು ಎಂಬ ಅಭಿಪ್ರಾಯ ಶಾಂತಿಸಭೆಯಲ್ಲಿ ವ್ಯಕ್ತವಾಯಿತು.

ಕೊಲೆಗೀಡಾದ ಎಲ್ಲರ ಕುಟುಂಬಕ್ಕೂ ಸಮಾನ ಪರಿಹಾರ ಒದಗಿಸಬೇಕು. ಪ್ರಚೋದನಕಾರಿ ಭಾಷಣ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಮಾಧ್ಯಮದಲ್ಲಿ ಅಪಪ್ರಚಾರ, ಸುಳ್ಳು ಸುದ್ದಿಗಳನ್ನು ನಿಯಂತ್ರಿಸಬೇಕು ಎಂಬ ಸಲಹೆಗಳ ಜತೆಯಲ್ಲೇ ಸಭೆಯಲ್ಲಿ ಹೆಚ್ಚಿನ ಸಂಖ್ಯೆಯ ಮುಸ್ಲಿಂ ಸಂಘಟನೆಗಳು ಹಾಗೂ ಸಮುದಾಯದ ನಾಯಕರು ಭಾಗವಹಿಸಿರದ ಕಾರಣ ಅವರೆಲ್ಲರನ್ನೂ ಸೇರಿಸಿ ಮತ್ತೊಂದು ಸಭೆ ನಡೆಸಬೇಕೆಂಬ ಅಭಿಪ್ರಾಯವೂ ವ್ಯಕ್ತವಾಗಿದೆ.

ಪೊಲೀಸ್‌ ನೇಮಕಾತಿಯಲ್ಲಿ ಉತ್ತರ ಕರ್ನಾಟಕ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಿಂದ ಹೊರಗಿನವರು ಆಯ್ಕೆಯಾಗುತ್ತಿದ್ದಾರೆ.

ತುಳು, ಬ್ಯಾರಿ, ಕೊಂಕಣಿ ಮತ್ತು ಇತರ ಭಾಷೆಗಳನ್ನು ತಿಳಿದುಕೊಳ್ಳದಿರುವುದು ಸಮಾಜದಲ್ಲಿನ ಸೂಕ್ಷ್ಮ ಬೆಳವಣಿಗೆಗಳ ಬಗ್ಗೆ ಮಾಹಿತಿ ಪಡೆಯಲು ಅಡ್ಡಿಯಾಗಿದೆ. ಇಂತಹ ಪ್ರಕರಣಗಳಲ್ಲಿ ಆರೋಪಿಗಳಲ್ಲದೆ, ಪಿತೂರಿ ಮತ್ತು ಆರೋಪಿಗಳಿಗೆ ಬೆಂಬಲ ನೀಡುವವರನ್ನು ಸಹ ಶಿಕ್ಷೆಗೆ ಗುರಿಪಡಿಸಬೇಕು ಎಂಬ ಬೇಡಿಕೆ ಕೇಳಿಬಂತು.

ಪಶ್ಚಿಮ ವಲಯ ಐಜಿಪಿ ದೇವಜ್ಯೋತಿ ರೇ, ಪೊಲೀಸ್‌ ಆಯುಕ್ತ ಎನ್‌. ಶಶಿಕುಮಾರ್‌, ಎಸ್‌ಪಿ ಹೃಷಿಕೇಶ್‌ ಸೊನಾವಣೆ, ಎಡಿಸಿ ಡಾ| ಕೃಷ್ಣಮೂರ್ತಿ, ಪಾಲಿಕೆ ಆಯುಕ್ತ ಅಕ್ಷಯ್‌ ಶ್ರೀಧರ್‌ ಮೊದಲಾದವರು ಭಾಗವಹಿಸಿದ್ದರು.

ಪ್ರಮುಖರು ಗೈರು: ಬಹುತೇಕ ಹಿಂದೂ ಸಂಘಟನೆ ಪ್ರಮುಖರು ಹಾಗೂ ಮುಸ್ಲಿಂ ಸಮುದಾಯದ ಪ್ರಮುಖರು ಶಾಂತಿಸಭೆಗೆ ಗೈರು ಹಾಜರಾಗಿದ್ದರು.

ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಪಾಲ್ಗೊಂಡಿರಲಿಲ್ಲ. ಕಾಂಗ್ರೆಸ್‌, ಜೆಡಿಎಸ್‌ ಸೇರಿದಂತೆ ಕೆಲವು ಪಕ್ಷಗಳ ನಾಯಕರು ಹಾಗೂ ಇತರ ಸಾಮಾಜಿಕ ಸಂಘಟನೆಗಳ ಕೆಲವರಷ್ಟೇ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next