ಕೆ.ಆರ್.ನಗರ: ರಾಜ್ಯದಲ್ಲಿ ಸದ್ಯದ ಪರಿಸ್ಥಿತಿಯಲ್ಲಿ ಯಾರೊಬ್ಬರಿಗೂ ಮಧ್ಯಂತರ ಚುನಾವಣೆ ನಡೆಯುವುದು ಬೇಕಾಗಿಲ್ಲ ಎಂದು ಶಾಸಕ ಸಾ.ರಾ.ಮಹೇಶ್ ತಿಳಿಸಿದರು. ಪಟ್ಟಣದ ರಾಜ್ಯ ರಸ್ತೆ ಸಾರಿಗೆ ಸಾರಿಗೆ ಸಂಸ್ಥೆ ಬಸ್ ನಿಲ್ದಾಣದಲ್ಲಿ ಶನಿವಾರ ಶುದ್ಧ ಕುಡಿಯುವ ನೀರಿನ ಘಟಕವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬಿಜೆಪಿ ಸರ್ಕಾರಕ್ಕೆ ಜೆಡಿಎಸ್ ಬೆಂಬಲ ನೀಡುತ್ತದೆ ಎಂಬ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿಕೆಯನ್ನು ಸಮರ್ಥಿಸಿಕೊಂಡ ಅವರು, ಸರ್ಕಾರದ ಅವಧಿ ಇನ್ನೂ ಮೂರೂವರೆ ವರ್ಷಗಳಿದ್ದು, ಅವಧಿ ಪೂರ್ಣಗೊಳಿಸಲಿ ಎಂಬುದು ಸಾರ್ವಜನಿಕರು ಮತ್ತು ಎಲ್ಲಾ ಶಾಸಕರ ಅಭಿಪ್ರಾಯವಾಗಿದೆ ಎಂದರು.
ರಾಜ್ಯದಲ್ಲಿ ಭೀಕರ ನೆರೆ ಸಂಭವಿಸಿದ್ದು, ಜನತೆ ಸಂಕಷ್ಟದ ಪರಿಸ್ಥಿಯನ್ನು ಎದುರಿಸುತ್ತಿದ್ದಾರೆ. ಸಂತ್ರಸ್ತರು ಈಗ ತಾನೇ ಚೇತರಿಸಿಕೊಳ್ಳುತ್ತಿದ್ದು, ಸರ್ಕಾರ ಮತ್ತು ಚುನಾಯಿತ ಜನಪ್ರತಿನಿಧಿಗಳು ಅವರ ನೆರವಿಗೆ ಧಾವಿಸಬೇಕಿದೆ. ಆದ್ದರಿಂದ ಸದ್ಯದ ಪರಿಸ್ಥಿತಿಯಲ್ಲಿ ಚುನಾವಣೆ ನಡೆಯುವ ಯಾವುದೇ ಮುನ್ಸೂಚನೆ ಕಂಡು ಬರುತ್ತಿಲ್ಲ. ಈ ಉದ್ದೇಶದಿಂದ ನಮ್ಮ ರಾಜ್ಯ ನಾಯಕರು ಬಿಜೆಪಿ ಸರ್ಕಾರ ಬೀಳಲು ಬಿಡುವುದಿಲ್ಲವೆಂದು ಹೇಳಿದ್ದಾರೆ ಎಂದು ತಿಳಿಸಿದರು.
ಯಾರೂ ಜೆಡಿಎಸ್ ಬಿಡಲ್ಲ: ಜೆಡಿಎಸ್ ಪಕ್ಷದ ಯಾವುದೇ ವಿಧಾನ ಪರಿಷತ್ ಸದಸ್ಯರು ಮತ್ತು ಶಾಸಕರು ಬಿಜೆಪಿಗೆ ಸೇರುವುದಿಲ್ಲ. ಆದರೆ, ಕೆಲವು ದೃಶ್ಯ ಮಾಧ್ಯಮಗಳು ಉಹಾಪೋಹಗಳ ಸುದ್ದಿಯನ್ನು ಹಬ್ಬಿಸುವುದರ ಮೂಲಕ ಜನರ ಗಮನವನ್ನು ಬೇರೆಡೆಗೆ ಸೆಳೆಯುವ ಕೆಲಸ ಮಾಡುತ್ತಿವೆ. ನೆರೆಗೆ ತತ್ತರಿಸಿರುವ ಜನ ಸಾಮಾನ್ಯರಿಗೆ ತಲಪಬೇಕಾದ ಪರಿಹಾರದ ಬಗ್ಗೆ ಪ್ರಚಾರ ಮಾಡಿ ಗಮನ ಸೆಳೆಯಬೇಕಾದ ದೃಶ್ಯ ಮಾಧ್ಯಮಗಳು ರಾಜಕೀಯ ಸುದ್ದಿಯನ್ನು ಬಿತ್ತರಿಸುವಲ್ಲಿ ಕಾರ್ಯೋನ್ಮುಖರಾಗಿರುವುದು ವಿಷಾದನೀಯ ಎಂದರು.
ಟಿಪ್ಪು ಪಠ್ಯ ಕೈಬಿಡುವುದು ಸರಿಯಲ್ಲ: ಟಿಪ್ಪುಸುಲ್ತಾನ್ ಸೇರಿದಂತೆ ಯಾವುದೇ ಮಹನೀಯರ ಜೀವನ ಚರಿತ್ರೆಯನ್ನು ಪಠ್ಯ ಪುಸ್ತಕದಿಂದ ರದ್ದುಪಡಿಸುವುದು ಸರಿಯಲ್ಲ. ಇದಕ್ಕಾಗಿ ಒಂದು ತಜ್ಞರ ಸಮಿತಿ ರಚಿಸಿ, ವರದಿ ಬಂದ ನಂತರ ಸೂಕ್ಷ್ಮವಾಗಿ ಸೂಕ್ತ ನಿರ್ಧಾರ ಕೈಗೊಳ್ಳಬೇಕು. ಮೈಸೂರು ಹುಲಿ ಎಂಬ ಖ್ಯಾತಿ ಪಡೆದಿರುವ ಟಿಪ್ಪು ಸುಲ್ತಾನ್ ಇತಿಹಾಸವನ್ನು ಪಠ್ಯಪುಸ್ತಕದಿಂದ ತೆಗೆದು ಹಾಕಲು ಮುಂದಾಗಿರುವ ಬಿಜೆಪಿ ಸರ್ಕಾರದ ತೀರ್ಮಾನ ಒಂದು ಸಮುದಾಯದವರಿಗೆ ನೋವುಂಟು ಮಾಡಲಿದೆ.
ಇದು ಒಳ್ಳೆಯ ಬೆಳವಣಿಗೆಯಲ್ಲ ಎಂದರು. ಪ್ರಯಾಣಿಕರು ಕಲುಷಿತ ನೀರು ಕುಡಿದು ರೋಗ ರುಜಿನಗಳಿಗೆ ತುತ್ತಾಗುವುದನ್ನು ತಪ್ಪಿಸುವ ಉದ್ದೇಶದಿಂದ ಬಸ್ ನಿಲ್ದಾಣ ಮತ್ತು ರೈಲು ನಿಲ್ದಾಣದಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಆರಂಭಿಸಲಾಗಿದೆ. ಸಾರ್ವಜನಿಕರು ನೀರಿನ ಘಟಕವನ್ನು ಹಾಳು ಮಾಡದಂತೆ ಎಚ್ಚರಿಕೆಯಿಂದ ಉಪಯೋಗಿಸಬೇಕು ಎಂದು ಮನವಿ ಮಾಡಿದರು.
ಈ ವೇಳೆ ನವನಗರ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಕೆ.ಎನ್.ಬಸಂತ್, ಜೆಡಿಎಸ್ ಮುಖಂಡರಾದ ಮುಬಾರಕ್ ಉಲ್ಲಾಖಾನ್, ಮೂರ್ತಿ, ಕೇಶವ, ಅತಿಕ್, ವಿಷ್ಣುವರ್ಧನ, ನಾಗೇಶ, ಘಟಕ ವ್ಯವಸ್ಥಾಪಕ ಪಾಪನಾಯಕ, ಸಂಚಾರ ನಿಯಂತ್ರಕ ರಮೇಶ್ ಇತರರಿದ್ದರು.