Advertisement

ಮೂವರು ಕಾಂಗ್ರೆಸ್‌ ಶಾಸಕರನ್ನು ಕೊಟ್ಟರೂ ಉತ್ತರ ಕನ್ನಡ ಜಿಲ್ಲೆಗೆ ಮಂತ್ರಿ ಪದವಿ ನೀಡಿಲ್ಲ

04:02 PM May 21, 2023 | Team Udayavani |

ಹೊನ್ನಾವರ: ಮೂವರು ಕಾಂಗ್ರೆಸ್‌ ಶಾಸಕರನ್ನು ಕೊಟ್ಟರೂ ಜಿಲ್ಲೆಗೆ ಒಂದೂ ಮಂತ್ರಿ ಪದವಿಯಿಲ್ಲ. ಪ್ರಥಮ ಸುತ್ತಿನಲ್ಲಿ ಮಂತ್ರಿಗಳಾದವರಿಗೆ ಪ್ರಮುಖ ಖಾತೆಗಳನ್ನು ಹಂಚಿಕೊಟ್ಟ ಮೇಲೆ ಸಣ್ಣಪುಟ್ಟ ಖಾತೆಗಳನ್ನು ಯಾವ ಶಾಸಕರಿಗಾದರೂ ಕೊಡಬಹುದು.

Advertisement

ಜಿಲ್ಲೆಯ ತುರ್ತು ಮತ್ತು ದೀರ್ಘ‌ಕಾಲೀನ ಸಮಸ್ಯೆಗಳಿಗೆ ಉತ್ತರಿಸುವವರು, ಪರಿಹಾರ ಕೊಡಿಸುವವರು ಯಾರು? ಕರ್ನಾಟಕ ರಾಜ್ಯಕ್ಕೆ ರಾಮಕೃಷ್ಣ ಹೆಗಡೆಯಂತಹ ಮುಖ್ಯಮಂತ್ರಿಗಳನ್ನು, ಯಾಹ್ಯಾರಂತಹಅರ್ಥಮಂತ್ರಿಗಳನ್ನು, ಶಿಕ್ಷಣ ಮಂತ್ರಿಗಳನ್ನು ಮಾತ್ರವಲ್ಲ ಆರ್‌ .ವಿ. ದೇಶಪಾಂಡೆಯವರಂಥ ಉದ್ಯಮ, ಮಾಹಿತಿ ತಂತ್ರಜ್ಞಾನ ಸಚಿವರನ್ನು ಬಹುಕಾಲ ಕೊಟ್ಟ ಜಿಲ್ಲೆಯಿದು. ರಾಣೆ, ಶಿವಾನಂದ ನಾಯ್ಕ, ಆರ್‌.ಎನ್‌. ನಾಯ್ಕ ಇವರೆಲ್ಲ ಮಂತ್ರಿಗಳಾಗಿದ್ದರು. ಯಡಿಯೂರಪ್ಪ ಹಿಂದಿನಬಾರಿ ಮುಖ್ಯಮಂತ್ರಿಗಳಾಗಿದ್ದಾಗ ಇಬ್ಬರು ಮಂತ್ರಿಗಳನ್ನು ಕೊಟ್ಟಿದ್ದರು. ನಾಲ್ವರು ನಿಗಮಮಂಡಳಿ ಅಧ್ಯಕ್ಷರನ್ನು ಕೊಟ್ಟಿದ್ದರು. ಕಳೆದ ಬಾರಿ ಶಿವರಾಮ ಹೆಬ್ಬಾರ್
ಮಂತ್ರಿಗಳಾಗಿ, ಕಾಗೇರಿ ಸಭಾಪತಿಗಳಾಗಿ ಕೆಲಸಮಾಡಿದ್ದಾರೆ.

ಬಿಜೆಪಿಯ ಗಂಡುಮೆಟ್ಟಿನ ಜಿಲ್ಲೆಯಾಗಿದ್ದ ಉತ್ತರಕನ್ನಡದಲ್ಲಿ ಮೂವರು ಕಾಂಗ್ರೆಸ್‌ ಶಾಸಕರು ಆಯ್ಕೆಯಾಗಿದ್ದು ವಿಶೇಷ. ಬಿಜೆಪಿಯವರು ಅಲ್ಪಮತದಿಂದ ಗೆದ್ದಿದ್ದಾರೆ. ಹೀಗಿರುವಾಗ ಸಿದ್ಧರಾಮಯ್ಯನವರಿಗೆ, ಡಿಕೆಶಿಯವರಿಗೆ ಉತ್ತರಕನ್ನಡ ನೆನಪಿಗೆ ಬರಲಿಲ್ಲವೇಕೇ? ಮುಂದೆ ಯಾವಾಗಲಾದರೂ ಕೊಟ್ಟರಾಯಿತು ಅಂದುಕೊಂಡಿರಬೇಕು. ಆರು ಬಾರಿ ಸಂಸದರಾಗಿದ್ದ ಅನಂತಕುಮಾರ ಹೆಗಡೆಯವರಿಗೆ ಮೋದಿಯವರು ಒಮ್ಮೆ ರಾಜ್ಯ ಸಚಿವ ಸ್ಥಾನ ಕೊಟ್ಟು ಕಿತ್ತುಕೊಂಡರು. ಉತ್ತರಕನ್ನಡ ಜಿಲ್ಲೆ ಕೇಂದ್ರ, ರಾಜ್ಯ ಸರ್ಕಾರಗಳ ಯಾವ ಪಕ್ಷದ ರಾಜಕಾರಣಿಗಳಿಗೂ
ಮಹತ್ವದ್ದಲ್ಲ ಅನಿಸಿದರೆ ತಪ್ಪೇನಿಲ್ಲ.

ನೌಕಾನೆಲೆ, ಅಣುಸ್ಥಾವರ ಮತ್ತು ಜಲವಿದ್ಯುತ್‌ ಯೋಜನೆಗಳಂಥ ರಾಷ್ಟ್ರೀಯ ಯೋಜನೆಗಳನ್ನು ಕೊಡುವಾಗ ಭೂ ಸ್ವಾಧಿನ ಮಾಡಿಕೊಟ್ಟ ರಾಜ್ಯಸರ್ಕಾರಕ್ಕಾಗಲಿ, ಕೇಂದ್ರಸರ್ಕಾರಕ್ಕಾಗಲಿ ಈ ಜಿಲ್ಲೆಗೆ ಏನಾದರೂ ದೊಡ್ಡ ಯೋಜನೆ ಕೊಡೋಣ ಎಂದು ಅನಿಸಲೇ ಇಲ್ಲವೇ. ನಾವು ಆಯ್ಕೆಮಾಡಿದವರು ಅಷ್ಟಕ್ಕೇ ತೃಪ್ತರಾದರು. ಜಿಲ್ಲೆಗಾಗಿ ಏನನ್ನೂ ಕೇಳಲಿಲ್ಲ. ನಿಂತುಹೋದ ರೇಲ್ವೆ ಯೋಜನೆಗಳು, ಬಂದರು ಯೋಜನೆಗಳು, ಅರಣ್ಯ ಸಮಸ್ಯೆ, ಕುಡಿಯುವ ನೀರಿಗಾಗಿ ರೋದನ, ಆಸ್ಪತ್ರೆಗಾಗಿ ಕೂಗು, ಯಾವುದೂ ಸರ್ಕಾರಗಳಿಗೆ ಕೇಳಿಸುವುದಿಲ್ಲವೇ?
ಉತ್ತರದಲ್ಲಿ ಒಂದು ರಾಜ್ಯಕ್ಕೆ 2-3 ಅಖೀಲ ಭಾರತ ವೈದ್ಯಕೀಯ ವಿಜ್ಞಾನ ಕೇಂದ್ರ ಕೊಟ್ಟ ಕೇಂದ್ರ ಸರ್ಕಾರಕ್ಕೆ ಉತ್ತರಕನ್ನಡ ಕಾಣಲೇ ಇಲ್ಲ. ಪ್ರವಾಸೋದ್ಯಮ ಬೆಳೆಸೋಣ ಎಂದರೆ ಕೇಂದ್ರ ಪ್ರವಾಸೋದ್ಯಮ ನಕ್ಷೆಯಲ್ಲಿ ಉತ್ತರಕನ್ನಡವಿಲ್ಲ. ಕೇಂದ್ರ ರಾಜ್ಯ ಯೋಜನೆಗಳಿರುವುದರಿಂದ ಉನ್ನತ ವಿದ್ಯಾಸಂಸ್ಥೆಗಳು ಬರಲಿ ಎಂದರೆ ಅದೂ
ಇಲ್ಲ. ಮತ್ತೆ ಕೊಟ್ಟಿದ್ದೇನು? ರಸ್ತೆ, ಕಾಲುಸಂಕ, ಬೀದಿದೀಪ, ಕುಡಿಯುವ ನೀರು ಇಷ್ಟೇ. ಅರಣ್ಯ ಹಾಗೂ ಖನಿಜ ಉತ್ಪನ್ನ,  ರಾಜ್ಯ ಬೊಕ್ಕಸಕ್ಕೆ ಆದಾಯ ತಂದುಕೊಡುತ್ತಿರುವಾಗ ಕೇಂದ್ರದ ಮತ್ತು ರಾಜ್ಯದ ಆಯವ್ಯಯ ಮಂಡಿಸಿದಾಗ ಜಿಲ್ಲೆಯ ಜನಕ್ಕೆ ಉಪಯೋಗವಾಗುವ ಒಂದೂ ಯೋಜನೆ ಇರುವುದಿಲ್ಲ. ಕಾಡೂ ಉಳಿದಿಲ್ಲ,
ನಾಡು ಬೆಳೆದಿಲ್ಲ. ಲೋಕಸಭೆ, ವಿಧಾನಸಭೆಗಳಲ್ಲಿ ಜಿಲ್ಲೆಯ ಬೇಕುಬೇಡಗಳ ಕುರಿತು ಧ್ವನಿ ಎತ್ತುವ ಶಕ್ತಿ ನಮ್ಮ ಜನಪ್ರತಿನಿಧಿ ಗಳಿಗೆ ಬರಬೇಕಾಗಿದ್ದು, ಇಲ್ಲವಾದರೆ ಕೊಟ್ಟ ಮಂತ್ರಿ ಸ್ಥಾನ ಒಪ್ಪಿಕೊಂಡು ಗೂಟದ ಕಾರಿನಲ್ಲಿ ಜಿಲ್ಲೆಗೆ ಸುತ್ತಬಂದು ಹೋಗುವುದೇ ಸಾಧನೆಯಾಗುತ್ತದೆ.

-ಜೀಯು

Advertisement
Advertisement

Udayavani is now on Telegram. Click here to join our channel and stay updated with the latest news.

Next