Advertisement
ಚಲೋ ಬೇಟಾ..ಚಲೋ.., ಏಯ್ ಬಾಯ್..ಜರಾ ಸರಕೋ..ದಾರೀ ಬಿಡ್ರೀ, ಎಂದು ಜೋರ್‌ಸೆ ಕೂಗುತ್ತಿದ್ದ ಧ್ವನಿ ಇದೀಗ ಮಂಕಾಗಿದೆ. ಆಟೋ ರಿಕ್ಷಾ (ಟಂ ಟಂ)ಗಳ ಭರಾಟೆಯ ನಡುವೆ. ಟಾಂಗಾಗಳನ್ನು, ಟಾಂಗಾವಾಲಗಳನ್ನು ಕೇಳ್ಳೋರಿಲ್ಲ ಎಂಬಂತಾಗಿದೆ.
Related Articles
Advertisement
ನಗರದ (ಹಳೆಯ ಬಾಗಲಕೋಟೆ) ಫಂಕಾ ಮಸೀದಿ ಬಳಿ ಇರುವ “ಪಾಗಾ’ ಎಂಬಲ್ಲಿ ಟಾಂಗಾವಾಲಾಗಳು ಕುದುರೆಗಳನ್ನು ಕಟ್ಟುತ್ತಾರೆ. ಇದರ ಬಳಿಯೇ ಕುದುರೆಗಳಿಗೆ ಮೇವನ್ನು ಮಾರುವ “ಕರಕಿ ಬಜಾರ್’ ಇದೆ. ಸುತ್ತ-ಮುತ್ತಲಿನ ಹಳ್ಳಿಗಳಿಂದ ಹುಲ್ಲನ್ನು ಹೊತ್ತು ತರುವ ಮಹಿಳೆಯರು 50-60 ರೂಪಾಯಿಗೆ ಹುಲ್ಲಿನ ಗಂಟುಗಳನ್ನು ಟಾಂಗಾವಾಲಾಗಳಿಗೆ ಮಾರುತ್ತಾರೆ. ಈ ಮೂಲಕ ಅವರು ತಮ್ಮ ಬದುಕಿಗೆ ಒಂದು ದಾರಿ ಕಂಡು ಕೊಂಡಿದ್ದಾರೆ.
ಈ ಮೊದ್ಲು ನೂರಾರು ಕುದುರೆ ಗಾಡಿಗಳಿದ್ದವು. ಇದೀಗ ನಲವತ್ತು-ಐವತ್ತಕ್ಕ ಬಂದಿಳಿದ… ಈಗಿನ ಜನಕ್ಕ ಭಾಳ ಅವಸರ, ಹೀಂಗಾಗಿ ಟಾಂಗಾ ಬಿಟ್ಟು ಅಟೋ ರಿûಾಗಳಿಗೆ ಜನ ಹೋಗ್ತಾರ. ಹಿಂಗಾಗಿ ದಿನಾ ನಮಗ ನೂರರಿಂದ ನೂರಾ ಐವತ್ತು ರೂಪಾಯಿ ಗಳಿಕಿ ಆಗ್ತದ, ಅದ್ರಾಗ ಅರ್ಧ ರೊಕ್ಕ ಕುದುರಿ ಮೇದಿಗಾದ್ರ ಮಿಕ್ಕಿದ್ದು ನಮ್ಮ ಮನೀಗಿ ಆಗ್ತದ ಎನ್ನುತ್ತಾರೆ. ಐದು ದಶಕಗಳಿಂದ ಟಾಂಗಾ ವೃತ್ತಿಯಲ್ಲಿಯೇ ಬದುಕುತ್ತಿರುವ ಮೆಹಬೂಬ್ ಸಾಬ್‌ಹಳ್ಳಿ.
ಈ ಹಿಂದೆ 200ಕ್ಕೂ ಹೆಚ್ಚು ಕುಟುಂಬಗಳು ಟಾಂಗಾ ನಂಬಿಯೇ ಬದುಕುತ್ತಿದ್ದವು. ಇದೀಗ ಅದು ಮೂವತ್ತಕ್ಕೆ ಬಂದಿಳಿದಿದೆ. ನಮಗ ಈ ವೃತ್ತಿ ಬಿಟ್ರ ಬೇರೆ ಕೆಲ್ಸ ಗೊತ್ತಿಲ್ಲ.. ಹೀಂಗಾಗಿ ನಾವು ಇನ್ನೂ ಇದರ ಮೇಲೆಯೇ ಅವಲಂಬನೆಗೊಂಡಿದ್ದೇವೆ ಎನ್ನುತ್ತಾರೆ. ಮುಳುಗಡೆ ನಗರಿ ಎಂಬ ಹಣೆ ಪಟ್ಟಿ ಕಟ್ಟಿಕೊಂಡಿರುವ ಬಾಗಲಕೋಟೆಯಲ್ಲ ಈಗಾಗಲೇ ಅನೇಕ ಪರಂಪರೆಗಳು “ಮುಳುಗಡೆ’ಯಾಗಿವೆ. ಮುಂದಿನ ಕೆಲವೇ ದಿನಗಳಲ್ಲಿ ಬಾಗಲಕೋಟೆಯ ನಕ್ಷೆಯಿಂದ ಟಾಂಗಾಗಳ ಚಿತ್ರವೇ ಕಣ್ಮರೆಯಾದರೆ ಅಚ್ಚರಿ ಪಡಬೇಕಿಲ್ಲ.
ಪ್ರವೀಣ ರಾಜು ಸೊನ್ನದ