Advertisement

ತಾಂಡಾ ನಿವಾಸಿಗಳ ಗೋಳು ಕೇಳ್ಳೋರಿಲ್ಲ

01:09 PM May 22, 2018 | |

ಮುದಗಲ್ಲ: ತಲೇಖಾನ್‌ ಗ್ರಾಪಂ ವ್ಯಾಪ್ತಿಯ ವಿವಿಧ ತಾಂಡಾಗಳಲ್ಲಿ ಸರಿಯಾಗಿ ಕುಡಿಯುವ ನೀರಿಲ್ಲ, ವಿದ್ಯುತ್‌ ಇಲ್ಲದೇ ಕತ್ತಲಲ್ಲಿ ಜನರ ವಾಸ, ಎರಡು ತಿಂಗಳಿಂದ ವಸತಿ ಯೋಜನೆ ಅನುದಾನ ಬಿಡುಗಡೆಯಾಗದೆ ಫಲಾನುಭವಿಗಳ ಪರದಾಟ, ಮಳೆ-ಗಾಳಿಗೆ ಹಾನಿ ಅನುಭವಿಸಿದ ಬಡವರ. ಕೂಲಿ ಕಾರ್ಮಿಕರ ಗೋಳು ಕೇಳುವವರಿಲ್ಲದಂತಾಗಿದೆ.

Advertisement

ಮೇ 12ರಂದು ಸುರಿದ ಭಾರೀ ಮಳೆ-ಗಾಳಿಗೆ 8 ಮನೆಗಳ, 16 ಜಾನುವಾರು ಶೆಡ್ಡುಗಳ ತಗಡುಗಳು ಹಾರಿಗೆ ಹೋಗಿ ನೆಲಸಮವಾಗಿವೆ. ದಾದುಡಿ ತಾಂಡಾದ ಅಮರಮ್ಮ ಹಾಗೂ ಕಸ್ತೂರಿ ತಾಂಡಾದ ಗಮ್ಮವ್ವ ಹಾಗೂ ಅವರ ಮೊಮ್ಮಗಳು ಸ್ನೇಹಾ ಅವರಿಗೆ ಗಾಯಗಳಾಗಿವೆ. ಹಡಗಲಿ ತಾಂಡಾ ಹತ್ತಿರ ವಿದ್ಯುತ್‌ ಕಂಬಗಳು ಜಖಂಗೊಂಡು ಹಡಗಲಿ ತಾಂಡಾ, ವೇಣ್ಯಪ್ಪನ ತಾಂಡಾ, ರಾಮಪ್ಪನ ತಾಂಡಾ, ಲಿಂಬೆಪ್ಪನ ತಾಂಡಾ, ಮೀಸೆ ಖೀರೆಪ್ಪನ ತಾಂಡಾ ಸೇರಿದಂತೆ ವಿವಿಧೆಡೆ ನೀರು ಪೂರೈಕೆ ಸ್ಥಗಿತಗೊಂಡು ನಿವಾಸಿಗಳು ನೀರಿಗಾಗಿ ಪರಿತಪಿಸುವಂತಾಗಿದೆ. 

ಆದರೂ ಕಂದಾಯ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್‌ ಇಲಾಖೆ ಅಧಿಕಾರಿಗಳಾಗಲಿ ಸೌಜನ್ಯಕ್ಕೂ ತಾಂಡಾಗಳಿಗೆ ಭೇಟಿ ನೀಡಿ ಜನರ ಸಮಸ್ಯೆ ಆಲಿಸಿಲ್ಲ. ಸದ್ಯ ರಾಮಪ್ಪನ ತಾಂಡಾದಲ್ಲಿ ವಿದ್ಯುತ್‌
ಪರಿವರ್ತಕ ಸುಟ್ಟು 12 ದಿನ ಗತಿಸಿದರೂ ಜೆಸ್ಕಾಂ ಅಧಿಕಾರಿಗಳು ಹಾಗೂ ಪಂಚಾಯತ್‌ ಅಭಿವೃದ್ಧಿ ಅಧಿಕಾರಿಗಳು ಪರಿವರ್ತಕ ದುರಸ್ತಿಗೆ ಮುಂದಾಗಿಲ್ಲ. ಲಿಂಬೆಪ್ಪನ ತಾಂಡಾದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಖಾಸಗಿ ವ್ಯಕ್ತಿಗಳು ಕಲ್ಲು ಹಾಕಿ ಕೈಪಂಪ್‌ ಮುಚ್ಚಿದ್ದರೂ ಗ್ರಾಪಂ ಅಧಿಕಾರಿಗಳು ಗಮನಹರಿಸಿಲ್ಲ, ದಾದುಡಿ ತಾಂಡಾದಲ್ಲಿ
ಕೈಪಂಪ್‌ ದುರಸ್ತಿಗೀಡಾಗಿದೆ. 

ಈ ಬಗ್ಗೆ ಪಿಡಿಒ ಗಮನಕ್ಕೆ ತಂದರೂ ರಿಪೇರಿಗೆ ಮುಂದಾಗಿಲ್ಲ, ಯರದೊಡ್ಡಿ ಹಾಗೂ ಹಡಗಲಿ ತಾಂಡಾದಲ್ಲಿ ನೀರಿನ ತೊಂದರೆ ಉಂಟಾಗಿದೆ. ಚುನಾವಣೆ ನೆಪದಲ್ಲಿ ಸಾರ್ವಜನಿಕ ಕೆಲಸಗಳನ್ನು ಮುಂದೆ ಹಾಕುತ್ತ ಬಂದ ಪಿಡಿಒ ಖಾಜಾಬೇಗಂ ಖಾತ್ರಿ ಯೋಜನೆ, ಸ್ವತ್ಛ ಭಾರತ ಮಿಷನ್‌ ಹಾಗೂ ವಸತಿ ಯೋಜನೆಗಳನ್ನು ಪರಿಶೀಲಿಸಿ ಅನುಷ್ಠಾನಗೊಳಿಸುವಲ್ಲಿ ವಿಫಲರಾಗಿದ್ದಾರೆ.  ಖಾತ್ರಿ ಯೋಜನೆಯಡಿ ವೈಯಕ್ತಿಕ ಕೆಲಸಗಳಾದ ಜಾನುವಾರು ಶೆಡ್‌ಗಳನ್ನು ನಿರ್ಮಿಸಿಕೊಂಡ ಫಲಾನುಭವಿಗಳಿಗೆ ಎನ್‌ಎಂಆರ್‌ ಅಳವಡಿಸಿಲ್ಲ, ಈಗಾಗಲೇ ಕೂಲಿ ಪಾವತಿಸಿದ ಶೆಡ್‌ಗಳ ಬಿಒಸಿ ತಂತ್ರಾಂಶದಲ್ಲಿ ಉಳಿಸಿ ಖರ್ಚು ಹಾಕಬೇಕು. ಆದರೆ ಮಾರ್ಚ್‌ ಮುಗಿದು ಎರಡು ತಿಂಗಳಾದರೂ 2017-18ರ ಸಾಲಿನ ಕಾಮಗಾರಿಗಳು ಕೊನೆ ಹಂತ ತಲುಪಿಲ್ಲ. ಹೀಗೆ ಹತ್ತು ಹಲವು ಸಮಸ್ಯೆಗಳು ತಲೇಖಾನ್‌ ಗ್ರಾಪಂ ವ್ಯಾಪ್ತಿಯಲ್ಲಿವೆ. ಕೂಡಲೇ ಅಧಿಕಾರಿಗಳು ಇತ್ತ ಗಮನಹರಿಸಿ ಸಮಸ್ಯೆ ಪರಿಹರಿಸಲು ಮುಂದಾಗಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಸಣ್ಣಪುಟ್ಟ ಸಮಸ್ಯೆಗಳನ್ನು ಸಾಮಾನ್ಯ ಸಭೆಯಲ್ಲಿ ಚರ್ಚಿಸಿದರೂ ಅಧಿಕಾರಿಗಳು ಅನುಷ್ಠಾನಗೊಳಿಸುವಲ್ಲಿ ತಾರತಮ್ಯ ಅನುಸರಿಸುತ್ತಿದ್ದಾರೆ. ಮತನೀಡಿ ಗೆಲ್ಲಿಸಿದ ಜನರಿಗೆ ಉತ್ತರ ಕೊಡಲು ಕಷ್ಟವಾಗಿದೆ.
 ಗ್ಯಾನಪ್ಪ ಸಗರಪ್ಪ ರಾಠೊಡ, ಗ್ರಾಪಂ ಸದಸ್ಯ

Advertisement

ತಲೇಖಾನ್‌ ಗ್ರಾಪಂ ಅಭಿವೃದ್ಧಿ ಅಧಿಕಾರಿ ಅನಾರೋಗ್ಯ ಕಾರಣ ನಾಲ್ಕೈದು ದಿನ ರಜೆ ಮೇಲಿದ್ದಾರೆ. ಅವರು ಕರ್ತವ್ಯಕ್ಕೆ ಮರಳಿದ ಮೇಲೆ ಸಮಸ್ಯೆಗಳು ಬಗೆಹರಿಯಲಿವೆ.
ಪುಷ್ಪಾ ಎಂ. ಕಮ್ಮಾರ, ತಾಪಂ ಇಒ, ಲಿಂಗಸುಗೂರ

„ದೇವಪ್ಪ ರಾಠೊಡ

Advertisement

Udayavani is now on Telegram. Click here to join our channel and stay updated with the latest news.

Next