Advertisement

ಖಾಸಗಿ ವಾಹನ ಚಾಲಕ-ಮಾಲಕರ ಸಂಕಷ್ಟ ಕೇಳ್ಳೋರಿಲ್ಲ

04:05 PM May 10, 2020 | Suhan S |

ಹೊನ್ನಾವರ: ಮುಂಗಡವಾಗಿ ತೆರಿಗೆ ತುಂಬುತ್ತ ಮಳೆಗಾಲದಲ್ಲಿ ಹಾನಿಯಾದರೂ ಸರಕು ಸಾಗಾಣಿಕೆ ಮತ್ತು ಪ್ರಯಾಣಿಕರನ್ನು ಸಾಗಿಸುತ್ತ ಗುಡ್ಡಗಾಡು ಪ್ರದೇಶವಾದ ಉತ್ತರ ಕನ್ನಡಕ್ಕೆ ಸೇವೆ ನೀಡುತ್ತಿರುವ ಖಾಸಗಿ ಲಾರಿ, ಬಸ್‌, ಟೆಂಪೋ, ಟ್ಯಾಕ್ಸಿಗಳನ್ನು ಸಾಲಮಾಡಿ ಖರೀದಿಸುವ ವ್ಯವಹಾರಸ್ಥರು ಲಾಕ್‌ ಡೌನ್‌ನಿಂದ ಸಂಪೂರ್ಣ ಹಾನಿಯಲ್ಲಿದ್ದಾರೆ.

Advertisement

ರೈತ, ಉದ್ಯಮಿ ಇತರ ವರ್ಗಗಳಿಗೆ ರಿಯಾಯಿತಿ ನೀಡಿದಂತೆ ತಮಗೂ ಏನಾದರೂ ಸರ್ಕಾರಗಳ ನೆರವು ದೊರೆಯಬಹುದು ಎಂದು ನಿರೀಕ್ಷಿಸಿದವರಿಗೆ ನಿರಾಸೆ ಉಂಟಾಗಿದೆ. ಈ ಕುರಿತು ಜಿಲ್ಲೆಯ ಸಾರಿಗೆ ಉದ್ಯಮಿ ವೆಂಕಟ್ರಮಣ ಹೆಗಡೆ ಮಾತನಾಡಿ, ಕೋವಿಡ್‌ ಭಯ ಇದ್ದರೂ ಸರ್ಕಾರ ಹೇಳಿದಂತೆ ತರಕಾರಿ, ಕಿರಾಣಿ, ಸಾಮಾನು, ಗ್ಯಾಸ್‌, ಔಷಧ ಮೊದಲಾದವನ್ನು ನಮ್ಮಲ್ಲಿ ಕೆಲವರು ಸಾಗಿಸುತ್ತ ಲಾಕ್‌ಡೌನ್‌ಗೆ ಸಹಕಾರ ನೀಡಿದ್ದಾರೆ. ನಾವು ಎಷ್ಟೇ ಕಷ್ಟವಾದರೂ ವಾಹನವನ್ನು ನಿಲ್ಲಿಸಿ ಲಾಕ್‌ ಡೌನ್‌ಗೆ ಸಹಕಾರ ನೀಡಿದ್ದೇವೆ. ವಾಹನಗಳ ಚಕ್ರ ತಿರುಗದಿದ್ದರೆ ಕಾರ್ಮಿಕರ ಸಂಬಳವೂ ಗಿಟ್ಟುವುದಿಲ್ಲ. ಲಾಕ್‌ಡೌನ್‌ ಮುಗಿದರೂ ಸಾರಿಗೆ ಆರಂಭಕ್ಕೆ ಸರ್ಕಾರ ಅನುಮತಿ ನೀಡಿಲ್ಲ. ಕಡಿಮೆ ಸೀಟ್‌ ಹಾಕಿಕೊಂಡು, ಸಾಮಾಜಿಕ ಅಂತರ ಕಾಯ್ದುಕೊಂಡು ಪ್ರಯಾಣಿಕರನ್ನು ಸಾಗಿಸಲು ಹೊರಟರೆ ಟಿಕೆಟ್‌ ದರವನ್ನು ಎರಡುಪಟ್ಟು ಹೆಚ್ಚಿಸಬೇಕಾಗುತ್ತದೆ. ಇದರಿಂದ ಜನರ ಸುಲಿಗೆ ಮಾಡಿದಂತಾಗುತ್ತದೆ. ಬರುವುದು ಮಳೆಗಾಲ, ದೀಪಾವಳಿಯವರೆಗೆ ಶೇ. 50ರಷ್ಟು ವ್ಯವಹಾರ ಕುಸಿಯುತ್ತದೆ. ಆದ್ದರಿಂದ ಎಲ್ಲ ಚಟುವಟಿಕೆಗಳೊಂದಿಗೆ ವಾಹನ ಚಟುವಟಿಕೆಗಳು ಆರಂಭವಾಗದಿದ್ದರೆ ಪ್ರಗತಿ ಅಸಾಧ್ಯ. ಸರ್ಕಾರ ಇದನ್ನು ಗಮನದಲ್ಲಿಟ್ಟುಕೊಂಡು ರಸ್ತೆ ತೆರಿಗೆ ಮನ್ನಾದಂತಹ ಕ್ರಮ ಕೈಗೊಳ್ಳಬೇಕೆಂದು ಅವರು ವಿನಂತಿಸಿದ್ದಾರೆ.

ಅಂಕೋಲೆಯ ವಂದನಾ, ಗೋಕರ್ಣದ ಗೌರಿ, ಕುಮಟಾದ ವಿಎಂಪಿ ಮತ್ತು ಟೆಂಪೋ ಚಾಲಕ, ಮಾಲಕ ಸಂಘಟನೆ ಅಧ್ಯಕ್ಷರು ಇವರ ಹೇಳಿಕೆಗೆ ಧ್ವನಿಗೂಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next