ಮುಂಬಯಿ: “ಭಾರತ ಅದ್ಭುತವೆನಿಸಿದ 15 ಸದಸ್ಯರ ತಂಡವನ್ನು ಹೊಂದಿದೆ. ಆದರೆ ಈ ವಿಶ್ವಕಪ್‌ನಲ್ಲಿ ಯಾವ ತಂಡವೂ ಫೇವರಿಟ್ ಇಲ್ಲ. ಬದಲಾದ ಮಾದರಿಯಿಂದಾಗಿ ಇಲ್ಲಿ ಎಲ್ಲರಿಗೂ ಮುಕ್ತ ಅವಕಾಶವಿದೆ’ ಎಂದು ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ, ಮೈದಾನದ ತಡೆಗೋಡೆ ಎಂದೇ ಖ್ಯಾತಿ ಪಡೆದಿದ್ದ ಜಾಂಟಿ ರೋಡ್ಸ್ ಅಭಿಪ್ರಾಯಪಟ್ಟಿದ್ದಾರೆ.
“ಭಾರತ ಬಲಿಷ್ಠ ತಂಡವನ್ನು ಹೊಂದಿರು ವುದು ನಿಜ. ಬಹುತೇಕ 6 ತಂಡಗಳು ಸಮಾನ ಬಲವನ್ನು ಹೊಂದಿವೆ. ಕೆಲವು ತಂಡಗಳು ಹೆಚ್ಚು ಬಲಿಷ್ಠವಾಗಿವೆ. ಇವುಗಳ ಹನ್ನೊಂದರ ಬಳಗ ಹಾಗೂ ಪಂದ್ಯದ ವಾತಾವರಣವನ್ನು ಗಮನಿಸಬೇಕಾಗುತ್ತದೆ’ ಎಂದು ರೋಡ್ಸ್ ಹೇಳಿದರು.
“ಭಾರತ ತಂಡ ಸಾಕಷ್ಟು ಅನು ಭವಿಗಳನ್ನು ಹೊಂದಿದೆ. ಬುಮ್ರಾ ಅವರಂಥ ಯುವ ಆಟಗಾರರೂ ಇದ್ದಾರೆ. ಡೆತ್ ಓವರ್‌ಗಳಲ್ಲಿ ಅಪಾಯ ಕಾರಿಯಾಗಬಲ್ಲ ಬೌಲರ್‌ಗಳಲ್ಲಿ ಬುಮ್ರಾ ಕೂಡ ಒಬ್ಬರು. ಭಾರತದ ಯಶಸ್ಸಿನಲ್ಲಿ ಬುಮ್ರಾ ಮಹತ್ವದ ಪಾತ್ರ ವಹಿಸಬಲ್ಲರು. ಹಾಗೆಯೇ ಹಾರ್ದಿಕ್ ಪಾಂಡ್ಯ ಆಟವೂ ಭಾರತದ ಪಾಲಿಗೆ ನಿರ್ಣಾಯಕ. ಆದರೆ ಒಟ್ಟು 6 ತಂಡಗಳು ಅಗ್ರ ನಾಲ್ಕರ ಪೈಪೋಟಿಯಲ್ಲಿರುವುದನ್ನು ಮರೆಯಬಾರದು’ ಎಂದು ರೋಡ್ಸ್ ಹೇಳಿದರು.
ಟಿ20 ಮುಂಬೈ ಲೀಗ್‌ನಲ್ಲಿ “ನಮೋ ಬಾಂದ್ರಾ ಬ್ಲಾಸ್ಟರ್’ ತಂಡಕ್ಕೆ ಫೀಲ್ಡಿಂಗ್ ಮಾರ್ಗದರ್ಶನ ನೀಡುತ್ತಿದ್ದ ಸಂದರ್ಭದಲ್ಲಿ ರೋಡ್ಸ್ ಮಾಧ್ಯಮದವ ರೊಂದಿಗೆ ಮಾತಾಡಿದರು.
ರೌಂಡ್ ರಾಬಿನ್ ಲೀಗ್
10 ತಂಡಗಳು ಪಾಲ್ಗೊಳ್ಳಲಿರುವ 2019ರ ವಿಶ್ವಕಪ್ ಪಂದ್ಯಾವಳಿ ರೌಂಡ್ ರಾಬಿನ್ ಮಾದರಿಯಲ್ಲಿ ನಡೆಯಲಿದ್ದು, ಇಲ್ಲಿ ಎಲ್ಲ ತಂಡಗಳೂ ಉಳಿದ ತಂಡಗಳ ವಿರುದ್ಧ ಒಂದೊಂದು ಪಂದ್ಯವನ್ನು ಆಡಲಿವೆ. ಅಗ್ರ 4 ತಂಡಗಳು ಸೆಮಿಫೈನಲ್ ಪ್ರವೇಶಿಸಲಿವೆ.
1992ರಲ್ಲೂ ರೌಂಡ್ ರಾಬಿನ್ ಲೀಗ್ ಮಾದರಿಯಲ್ಲಿ ವಿಶ್ವಕಪ್ ನಡೆದಿತ್ತು. ಇದರಲ್ಲಿ ಪಾಕಿಸ್ಥಾನ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಅಂದಿನ ಲೀಗ್ ಪಂದ್ಯದಲ್ಲಿ ಇಂಝಮಾಮ್ ಉಲ್ ಹಕ್ ಅವರನ್ನು ರನೌಟ್ ಮಾಡಿದ್ದನ್ನು ರೋಡ್ಸ್ ನೆನಪಿಸಿಕೊಂಡರು.