ಮಂಗಳೂರು: ಈ ಬಾರಿಯ ದಕ್ಷಿಣ ಕನ್ನಡ ಲೋಕಸಭಾ ಚುನಾವಣಾ ಕಣದಿಂದ ಎಡಪಕ್ಷಗಳು ದೂರ ಉಳಿದಿದ್ದು, ಅಧಿಕೃತವಾಗಿ ಯಾವುದೇ ಪಕ್ಷಕ್ಕೆ ಬಹಿರಂಗ ಬೆಂಬಲ ಘೋಷಿಸಿಲ್ಲ. ಆದರೆ, ಕೋಮುವಾದಿ ಶಕ್ತಿಗಳನ್ನು ಸೋಲಿಸಲು ಪ್ರಬಲ ಜಾತ್ಯಾತೀತ ಪಕ್ಷವನ್ನು ಬೆಂಬಲಿಸುವಂತೆ ಕಾರ್ಯಕರ್ತರಿಗೆ ಕರೆ ನೀಡಿ ಪರೋಕ್ಷವಾಗಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿವೆ.
ಈ ಹಿಂದಿನ ಲೋಕಸಭೆ ಚುನಾವಣೆಗಳಲ್ಲೂ ಪಕ್ಷದ ಅಧಿಕೃತ ಅಭ್ಯರ್ಥಿ ಸ್ಪರ್ಧಿಸದ ಸಂದರ್ಭದಲ್ಲಿ ಉಳಿದ ಒಂದು ಪಕ್ಷಕ್ಕೆ ಅಧಿಕೃತವಾಗಿ ಬೆಂಬಲ ನೀಡಲಾಗುತ್ತಿತ್ತು. ಆದರೆ, ಪ್ರಥಮ ಬಾರಿಗೆ ಯಾವುದೇ ಒಂದು ಪಕ್ಷದ ಪರವಾಗಿ ನಿಂತಿಲ್ಲ.
ಈ ಕ್ಷೇತ್ರದಲ್ಲಿ 2009 ಹಾಗೂ 2014ರ ಚುನಾವಣೆಗಳಲ್ಲಿ ಸಿಪಿಎಂ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿತ್ತು. ಈ ಬಾರಿ ಸ್ಪರ್ಧಿಸಿಲ್ಲ. ಸಿಪಿಐ ಕೂಡ ಸ್ಪರ್ಧೆ ಮಾಡುತ್ತಿಲ್ಲ. ರಾಷ್ಟ್ರ ಹಾಗೂ ರಾಜ್ಯಮಟ್ಟದಲ್ಲಿ ಎಡಪಕ್ಷಗಳು ಯಾವುದೇ ಪಕ್ಷಗಳ ಜತೆಗೆ ಮೈತ್ರಿ ಮಾಡಿಕೊಂಡಿಲ್ಲ. ಈ ಹಿನ್ನೆಲೆಯಲ್ಲಿ ಇಲ್ಲಿಯೂ ಇತರ ರಾಜಕೀಯ ಪಕ್ಷಗಳಿಂದ ಅಂತರ ಕಾಯ್ದುಕೊಳ್ಳಲು ಎಡಪಕ್ಷಗಳು ನಿರ್ಧರಿಸಿವೆ.
ಸಿಪಿಎಂ ನಿಲುವು ಬಗ್ಗೆ ಉದಯವಾಣಿಗೆ ಸ್ಪಷ್ಟಪಡಿಸಿದ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಸಂತ ಆಚಾರಿ, ಪಕ್ಷದ ರಾಷ್ಟ್ರೀಯ ನೀತಿಯಂತೆ ಪಕ್ಷದ ಅಭ್ಯರ್ಥಿಗಳು ಸ್ಪರ್ಧಿಸದಿರುವಲ್ಲಿ ಜಾತ್ಯತೀತ ಪಕ್ಷಗಳನ್ನು ಬೆಂಬಲಿಸಲಾಗುತ್ತಿದೆ. ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಸಿಪಿಎಂ ಸ್ಪರ್ಧಿಸುತ್ತಿಲ್ಲ. ನಮ್ಮ ಉದ್ದೇಶ ಕೋಮುವಾದಿ ಶಕ್ತಿಗಳನ್ನು ಸೋಲಿಸುವುದು. ಈ ಹಿನ್ನೆಲೆಯಲ್ಲಿ ಬಿಜೆಪಿ ವಿರುದ್ಧ ಸ್ಪರ್ಧಿಸಿರುವ ಸುವ ಜಾತ್ಯತೀತ ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸಲಾಗುವುದು. ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿಕೂಟ ಪ್ರಬಲ ಜಾತ್ಯತೀತ ಪಕ್ಷ ಎಂದರು.
ಹಾಗೆಂದು ಮೈತ್ರಿಕೂಟದ ಚುನಾವಣಾ ಪ್ರಚಾರ ಸಭೆಯಿಂದ ಸಿಪಿಎಂ ಅಂತರ ಕಾಯ್ದುಕೊಳ್ಳಲಿದೆ. ತಮ್ಮ ಪಕ್ಷದ ಕಾರ್ಯಕರ್ತರು ಸ್ವತಂತ್ರವಾಗಿ ಜಾತ್ಯತೀತ ಪಕ್ಷವನ್ನು ಬೆಂಬಲಿಸಲು ಮತದಾರರನ್ನು ಕೋರಲಿದ್ದಾರೆ. ಕ್ಷೇತ್ರದ ಎಲ್ಲ 8 ವಿಧಾನಸಭಾ ಕ್ಷೇತ್ರಗಳಲ್ಲಿ ಸಮಾವೇಶಗಳನ್ನು ಆಯೋಜಿಸಲಿದ್ದು, ಅದರ ನಾಯಕರು ಜಾತ್ಯತೀತ ಪಕ್ಷವನ್ನು ಬೆಂಬಲಿಸುವಂತೆ ಮನವಿ ಮಾಡುವರು.
ಸಿಪಿಐ ಕೂಡ ಇದೇ ನಿಲುವನ್ನು ತಳೆದಿದ್ದು, ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಆಹ್ವಾನಿಸಿದರೆ ಪ್ರಚಾರ ಸಭೆಗಳಲ್ಲಿ ಭಾಗವಹಿಸಲು ನಿರ್ಧರಿಸಿತ್ತು. ಆದರೆ ರಾಹುಲ್ ಗಾಂಧಿಯವರು ವಯನಾಡ್‌ನಲ್ಲಿ ಸಿಪಿಐ ಅಭ್ಯರ್ಥಿ ವಿರುದ್ಧ ಸ್ಪರ್ಧಿಸುತ್ತಿರುವ ಹಿನ್ನೆಲೆಯಲ್ಲಿ ಸಿಪಿಐ ತನ್ನ ನಿರ್ಧಾರದಿಂದ ಹಿಂದಕ್ಕೆ ಸರಿದಿದೆ.
16 ಚುನಾವಣೆಗಳಲ್ಲಿ ಸ್ಪರ್ಧಿಸಿದ್ದ ಘಟಾನುಘಟಿಗಳು
ಮಂಗಳೂರು ಲೋಕಸಭಾ ಕ್ಷೇತ್ರ , ಪುನರ್‌ವಿಂಗಡನೆಯ ಬಳಿಕ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರವಾಗಿ ರೂಪುಗೊಂಡವರೆಗಿನ 1957 ರಿಂದ 2014ರ ವರೆಗಿನ 16 ಚುನಾವಣೆಗಳಲ್ಲಿ ಸಿಪಿಐ 2 ಬಾರಿ ಹಾಗೂ ಸಿಪಿಎಂ 6 ಬಾರಿ ಸೇರಿ ಒಟ್ಟು 8 ಬಾರಿ ಸ್ಪರ್ಧೆ ಮಾಡಿವೆ. ಸಿಪಿಐಯಿಂದ ಕೃಷ್ಣ ಶೆಟ್ಟಿ, ಬಿ.ವಿ. ಕಕ್ಕಿಲ್ಲಾಯ, ಸಿಪಿಎಂನಿಂದ ಬಿ.ಎನ್. ಕುಟ್ಟಪ್ಪ, ಎಂ.ಎಚ್. ಕೃಷ್ಣಪ್ಪ, ಮಹಾಬಲೇಶ್ವರ ಭಟ್, ಪಿ. ರಾಮಚಂದ್ರ ರಾವ್, ಬಿ. ಮಾಧವ , ಯಾದವ ಶೆಟ್ಟಿ ಸ್ಪರ್ಧಿಸಿದ್ದರು. 1957ರ ಚುನಾವಣೆಯಲ್ಲಿ ಸಿಪಿಐಯ ಕೃಷ್ಣ ಶೆಟ್ಟಿ ಅವರು ಕಾಂಗ್ರೆಸ್‌ಗೆ
ನಿಕಟ ಸ್ಪರ್ಧೆ ನೀಡಿದ್ದರು.
ಕೇಶವ ಕುಂದರ್