Advertisement

ಜಾತಿಯಿಂದ ಯಾರೂ ದೊಡ್ಡವರಾಗಲ್ಲ

12:42 PM Nov 27, 2017 | Team Udayavani |

ಬೆಂಗಳೂರು: ಜಾತಿಯಿಂದ ಯಾರು ದೊಡ್ಡವರಾಗಲು ಸಾಧ್ಯವಿಲ್ಲ. ನಡವಳಿಕೆ, ಗುಣ ಹಾಗೂ ಮಾನವೀಯತೆಯಿಂದ
ಮಾತ್ರ ಮನುಷ್ಯ ದೊಡ್ಡವನಾಗಲು ಸಾಧ್ಯವಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

Advertisement

ಭಾನುವಾರ ಕೃಷ್ಣರಾಜಪುರದಲ್ಲಿ ಆಯೋಜಿಸಿದ್ದ “530ನೇ ಕನಕ ಜಯಂತಿ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ
ಅವರು, ಸಮಾಜದಲ್ಲಿನ ಮತೀಯತೆ, ಜಾತಿಯ ಅಹಂಗಳು ದೂರವಾಗಿ ಸಮ ಸಮಾಜ ನಿರ್ಮಾಣವಾಗಬೇಕೆಂಬುದು
ಕನಕದಾಸರ ಆಶಯವಾಗಿತ್ತು. ಜಾತಿಯಿಂದ ಯಾರು ದೊಡ್ಡವರಾಗುವುದಿಲ್ಲ ಹಾಗೂ ಜಾತಿ ಅಹಂ ಬಿಡಿ ಎನ್ನುವ
ಉದ್ದೇಶದಿಂದಲೇ ಅವರು “ಕುಲ ಕುಲ ಕುಲ ಎಂದು ಹೊಡೆದಾಡದಿರಿ…’ ಎಂದು ಹೇಳಿರುವುದೆಂದು ತಿಳಿಸಿದರು.

ದಾಸರಲ್ಲಿ ಕನಕದಾಸರು ಅತ್ಯಂತ ಶ್ರೇಷ್ಠರಾಗಿದ್ದು, ಅವರು ಕೇವಲ ಭಕ್ತಗೀತೆಗಳನ್ನು ಮಾತ್ರ ರಚಿಸಿ ಹಾಡುತ್ತಿರಲಿಲ್ಲ. ಸಮಾಜ ಸುಧಾರಣೆಯ ಹಲವಾರು ಅಂಶಗಳು ಅವರ ಸಾಹಿತ್ಯದಲ್ಲಿದ್ದು, ಸಮಾಜದಲ್ಲಿ ಮೇಲು-ಕೀಳು ಭಾವನೆಗಳು ಹೋಗಲಾಡಿಸಿ ಸಮ ಸಮಾಜ ನಿರ್ಮಾಣ ಮಾಡುವ ಕುರಿತ ಅಂಶಗಳನ್ನು ಅವರ ಕೃತಿಗಳು ಒಳಗೊಂಡಿವೆ ಎಂದು ಹೇಳಿ ದರು. ಈ ಮೊದಲು ಸಾಹಿತ್ಯ ಸಂಸ್ಕೃತದಲ್ಲಿ ಇರುತ್ತಿದ್ದರಿಂದ ಸಂಸ್ಕೃತ ಕಲಿಯದೆ ಇರುವ ಜನಸಾಮಾನ್ಯರಿಗೆ ಅವು ಅರ್ಥವಾಗುತ್ತಿ ರಲಿಲ್ಲ. ಅಂತಹ ಸಂದರ್ಭದಲ್ಲಿ ಬಸವಾದಿ ಶರಣರು ಹಾಗೂ ಕನಕದಾಸರು ಜನರಿಗೆ ಸುಲಭವಾಗಿ ಅರ್ಥವಾಗುವ ಭಾಷೆ ಯಲ್ಲಿ ಸಾಹಿತ್ಯ ರಚಿಸಿದ್ದು, ಅವುಗಳ ಸಾರಾಂಶ ಪ್ರತಿಯೊಬ್ಬರಿಗೂ ಸುಲಭವಾಗಿ ತಿಳಿಯಲಿದೆ ಎಂದು ನುಡಿದರು.

ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠ ಶಾಖಾ ಮಠದ ಈಶ್ವರಾನಂದಪುರಿ ಸ್ವಾಮೀಜಿ ಕಾರ್ಯಕ್ರಮದಲ್ಲಿ
ಮಾತನಾಡಿ ಸುಮಾರು 600 ವರ್ಷಗಳ ಕಾಲ ಶೋಷಣೆಗೆ ಒಳಗಾಗಿದ್ದ ಸಮುದಾಯಗಳಲ್ಲಿ ಧಾರ್ಮಿಕ ಜಾಗೃತಿ
ಮೂಡಿಸಿದ ಕೀರ್ತಿ ಕನಕದಾಸರಿಗೆ ಸಲ್ಲುತ್ತದೆ. ದೇವರು, ಧರ್ಮ ಎಂಬುದು ಕೇವಲ ಒಂದು ವರ್ಗಕ್ಕೆ ಮಾತ್ರ
ಸೀಮಿತವಲ್ಲ ಎಂಬುದನ್ನು ಪ್ರತಿಪಾದಿಸಿ, ಜನರಿಗೆ ಸುಲಭವಾಗಿ ಅರ್ಥವಾಗುವ ಭಾಷೆಯಲ್ಲಿ ಸಾಹಿತ್ಯ ರಚಿಸುವ
ಮೂಲಕ ಜನರಿಗೆ ತಲುಪಿಸಿದರು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚು ಅಂಕಗಳಿಸಿದ ಸಮುದಾಯದ ವಿದ್ಯಾರ್ಥಿಗಳಿಗೆ
ಸನ್ಮಾನಿಸಲಾಯಿತು. ಈ ವೇಳೆ ಸಚಿವ ಎಚ್‌.ಎಂ.ರೇವಣ್ಣ, ಶಾಸಕ ಬಿ.ಎ.ಬಸವರಾಜು, ಪಾಲಿಕೆ ಸದಸ್ಯರಾದ ಜಯ
ಪ್ರಕಾಶ್‌, ಶ್ರೀಕಾಂತ್‌ ಸೇರಿದಂತೆ ಪ್ರಮುಖರು ಹಾಜರಿದ್ದರು.

Advertisement

ನಿದ್ದೆಯಲ್ಲಿದ್ದ ಸಮುದಾಯಗಳಎಚ್ಚರಿಸಿದವರು ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯ ಅವರನ್ನು ಕೆಲವರು ನಿದ್ದೆರಾಮಯ್ಯ ಎಂದು ಟೀಕಿಸುವುದು ಸರಿಯಲ್ಲ. ನಿದ್ದೆಯಲ್ಲಿದ್ದ ಶೋಷಿತ ಸಮುದಾಯಗಳನ್ನು ಎಚ್ಚರಿಸಿ ಅವರಿಗಾಗಿ ನೂರಾರು ಕಲ್ಯಾಣ ಕಾರ್ಯಕ್ರಮಗಳನ್ನು ರೂಪಿಸುತ್ತಿರುವ ಸಿದ್ದರಾಮಯ್ಯ ಅವರು ಹಾಲುಮತ ಸಮುದಾಯದಲ್ಲಿ ಹುಟ್ಟಿರುವುದು ನಮ್ಮ ಸೌಭಾಗ್ಯ. ಸಿದ್ದರಾಮಯ್ಯ ಅವರಿಗೆ ಆರೋಗ್ಯ ಸಮಸ್ಯೆಯಿರುವುದರಿಂದ ಆಗಾಗ ನಿದ್ದೆ ಮಾಡುತ್ತಾರೆ. ಅದನ್ನೇ ಕೆಟ್ಟದಾಗಿ ಬಿಂಬಿಸುವುದು ಸರಿಯಲ್ಲ ಎಂದು ಈಶ್ವರಾನಂದಪುರಿ ಸ್ವಾಮೀಜಿ ತಿಳಿಸಿದರು.

ಸೇತುವೆಗೆ ಕನಕದಾಸರ ಹೆಸರಿಡಿ ಕನಕದಾಸರು 
ಕೃಷ್ಣರಾಜಪುರ ಮಾರ್ಗವಾಗಿ ತಿರುಪತಿಗೆ ಹೋಗಿರುವ ದಾಖಲೆಗಳಿವೆ. ಹೀಗಾಗಿ ಈ ಭಾಗದಲ್ಲಿನ ಕೃಷ್ಣರಾಜಪುರ
ತೂಗು ಮೇಲ್ಸೇತುವೆಗೆ “ಭಕ್ತ ಕನಕದಾಸರ ತೂಗು ಮೇಲ್ಸೇತುವೆ’ ಎಂದು ನಾಮಕರಣ ಮಾಡಬೇಕು ಎಂದು ಹಲವು ಮುಖಂಡರು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು. 

ಕೆಂಪೇಗೌಡರ ಜಯಂತಿ ಆಚರಿಸಿದ್ದುನಮ್ಮ  ಸರ್ಕಾರ: ಸಿಎಂ
ಸಮಾಜ ಸುಧಾರಣೆಗೆ ಪ್ರಯತ್ನಿಸಿದವರಿಗೆ ಗೌರವ ಸೂಚಿಸುವ ಸಲುವಾಗಿ ಸರ್ಕಾರದಿಂದ ಹಲವಾರು ಮಹನೀಯರು ಹಾಗೂ ಮಹಾ ಮಾತೆಯರ ಜಯಂತಿ ಆಚರಿಸಲಾಗುತ್ತಿದೆ. ಅದೇ ರೀತಿ ಟಿಪ್ಪು ಸುಲ್ತಾನ್‌ ಜಯಂತಿಯನ್ನೂ ಆಚರಿಸಲಾಗಿದೆ. ಮೊದಲ ಬಾರಿಗೆ ಕೆಂಪೇಗೌಡ ಜಯಂತಿ ಆಚರಿಸಿದ್ದು ನಮ್ಮ ಸರ್ಕಾರ, ಅಂತಾ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೆಂಪೇಗೌಡ ಹೆಸರಿಟ್ಟಿದ್ದು, ಅವರ ಹೆಸರಿನಲ್ಲಿ ಅಭಿವೃದ್ಧಿ ಪ್ರಾಧಿಕಾರ ಹಾಗೂ ಸಂಶೋಧನಾ ಕೇಂದ್ರ ಮಾಡಿದ್ದು ನಮ್ಮ ಸರ್ಕಾರ. ಆದರೆ, ಕೆಲವರು ಕೆಂಪೇಗೌಡರ ಹೆಸರು ಹೇಳಿಕೊಂಡು ಓಟು ಕೇಳುತ್ತಿದ್ದಾರೆ ಎಂದು ಸಿಎಂ ಟೀಕಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next