ಮುಂಬೈ: ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿಯ ಕಳಪೆ ಫಾರ್ಮ್ ಮತ್ತು ಅವರನ್ನು ತಂಡದಿಂದ ಕೈಬಿಡಬೇಕು ಎನ್ನುವವರ ವಿರುದ್ಧ ಸಿಎಸ್ ಕೆ ಬ್ಯಾಟರ್ ರಾಬಿನ್ ಉತ್ತಪ್ಪ ಕಿಡಿಕಾರಿದ್ದಾರೆ. ಟೀಂ ಇಂಡಿಯಾದಲ್ಲಿ ವಿರಾಟ್ ಕೊಹ್ಲಿಯ ಸ್ಥಾನವನ್ನು ಮತ್ತು ಮಹತ್ವದ ಸರಣಿಗಳ ನಡುವೆ ಅವರು ತೆಗೆದುಕೊಳ್ಳುವ ವಿಶ್ರಾಂತಿಯ ಬಗ್ಗೆ ಪ್ರಶ್ನಿಸುವುದು ತಪ್ಪು ಎಂದು ಉತ್ತಪ್ಪ ಹೇಳಿದರು.
ವಿರಾಟ್ ಕೊಹ್ಲಿ ಒಂದರ ನಂತರ ಒಂದು ಶತಕ ಸಿಡಿಸಿದಾಗ ಹೇಗೆ ಆಡಬೇಕು ಎಂದು ಯಾರೂ ಹೇಳಲಿಲ್ಲ. ತನ್ನ ಸಮಸ್ಯೆಗಳನ್ನು ಪರಿಹರಿಸಿಕೊಂಡ ಬಳಿಕ ವಿರಾಟ್ ಮತ್ತೆ ತನ್ನ ಉತ್ತುಂಗವನ್ನು ತಲುಪುತ್ತಾರೆ ಎಂದು ಉತ್ತಪ್ಪ ಹೇಳಿದರು.
ಶೇರ್ ಚಾಟ್ ನ ಆಡಿಯೋ ಚಾಟ್ ರೂಮ್ ಸೆಶನ್ ನಲ್ಲಿ ಮಾತನಾಡಿದ ಉತ್ತಪ್ಪ, ವಿರಾಟ್ ಕೊಹ್ಲಿ ಇನ್ನೂ 30-35 ಅಂತಾರಾಷ್ಟ್ರೀಯ ಶತಕಗಳನ್ನು ಗಳಿಸುತ್ತಾರೆ. ಟೀಂ ಇಂಡಿಯಾಕ್ಕಾಗಿ ಪಂದ್ಯ ಗೆಲ್ಲಿಸಿಕೊಡುವ ಅವರ ಸಾಮರ್ಥ್ಯ ಪ್ರಶ್ನಾತೀತ. ವಿರಾಟ್ ಕೊಹ್ಲಿ ಏನು ಮಾಡಬೇಕು, ಹೇಗೆ ಆಡಬೇಕು ಎಂದು ಹೇಳುವ ಹಕ್ಕು ಯಾರಿಗೂ ಇಲ್ಲ ಎಂದು ಅಭಿಪ್ರಾಯ ಪಟ್ಟರು.
ಇದನ್ನೂ ಓದಿ:ಕಬಡ್ಡಿ ಆಟವಾಡುತ್ತಿರುವ ವೇಳೆ ಹೃದಯಾಘಾತದಿಂದ ಆಟಗಾರ ಸಾವು: ಟ್ರೋಫಿಯೊಂದಿಗೆ ಅಂತ್ಯಸಂಸ್ಕಾರ
ವಿರಾಟ್ ಕೊಹ್ಲಿ ರನ್ ಗಳಿಸುತ್ತಿದ್ದಾಗ, ಶತಕ ಸಿಡಿಸುತ್ತಿದ್ದಾಗ ಯಾರೂ ಹೀಗೆ ಆಡಬೇಕು ಅಥವಾ ಹಾಗೆ ಆಡಬೇಕು ಎಂದು ಹೇಳಲಿಲ್ಲ. ಹಾಗೆಯೇ ಈಗಲೂ ವಿರಾಟ್ ಗೆ ಹೇಗೆ ಆಡಬೇಕೆಂದು ಹೇಳುವ ಹಕ್ಕು ನಮಗಿಲ್ಲ ಎಂದು ನಾನು ಭಾವಿಸುತ್ತೇನೆ. ಅವರು ಸ್ಕೋರ್ ಮಾಡಿದ್ದಾರೆ. ಅವರ ಸ್ವಂತ ಸಾಮರ್ಥ್ಯದಿಂದ 70 ಶತಕ ಸಿಡಿಸಿದ್ದಾರೆ. ಅವರು ಇನ್ನೂ 30 ಅಥವಾ 35 ಶತಕಗಳನ್ನು ಗಳಿಸುತ್ತಾರೆ” ಎಂದು ರಾಬಿನ್ ಉತ್ತಪ್ಪ ಹೇಳಿದರು.