‘ಯಾರೋ ಬಂದು ನನ್ನನ್ನು ಸೋಲಿಸಬೇಕು ಅಥವಾ ನನ್ನ ಚಿತ್ರವನ್ನು ಫ್ಲಾಪ್ ಮಾಡಿಬಿಡಬೇಕು ಅಂತ ಬರೋದಿಲ್ಲ. ಇಲ್ಲಿ ಎಲ್ಲರೂ ಗೆಲ್ಲಲೇಬೇಕು, ಒಳ್ಳೆಯ ಸಿನಿಮಾ ಮಾಡಬೇಕು ಅಂತಾನೇ ಬರುತ್ತಾರೆ. ಆದರೆ, ಏನು ಮಾಡೋದು, ಒಂದೊಂದು ಸಲ ನಾವು ಅಂದುಕೊಂಡಂತೆ ಯಾವುದೂ ನಡೆಯಲ್ಲ…’
Advertisement
– ಹೀಗೆ ಹೇಳುವ ಮೂಲಕ ತಮಗೆ ಸಿಗದ ಗೆಲುವು, ಹುಡುಕಿ ಬಾರದ ಅದೃಷ್ಟ ಕುರಿತು ಹೇಳುತ್ತಾ ಹೋದರು ನಟ ವಿಜಯರಾಘವೇಂದ್ರ. ಅವರೀಗ ಮೊದಲಿನಂತಿಲ್ಲ. ತುಂಬಾ ಎಚ್ಚರದಿಂದಲೇ ಕಥೆ ಆಯ್ಕೆ ಮಾಡಿಕೊಳ್ಳಬೇಕೆಂಬ ನಿರ್ಧಾರ ಮಾಡಿದ್ದಾರೆ. ವರ್ಷಕ್ಕೊಂದೇ ಚಿತ್ರ ಮಾಡಿದರೂ ಅದು ನೋಡುಗರ ಮನದಲ್ಲಿ ಅಚ್ಚಳಿಯದೆ ಉಳಿಯಬೇಕು. ಅಂತಹ ಚಿತ್ರ ಕೊಡಬೇಕೆಂಬ ಯೋಚನೆಯಲ್ಲಿದ್ದಾರೆ. ಅವರ ಈ ನಿರ್ಧಾರ, ಯೋಚನೆಗಳಿಗೆಲ್ಲಾ ಕಾರಣ, ಅವರ ಸಾಲು ಸಾಲು ಚಿತ್ರಗಳ ಸೋಲು. ಇದನ್ನು ಒಪ್ಪಿಕೊಳ್ಳುವ ವಿಜಯರಾಘವೇಂದ್ರ, ಹೇಳುವುದಿಷ್ಟು.
Related Articles
Advertisement
ವಿಜಯರಾಘವೇಂದ್ರ ‘ಕಿಸ್ಮತ್’ ಮೂಲಕ ನಿರ್ದೇಶಕ ಎನಿಸಿಕೊಂಡರು. ಆದರೆ ಆ ಚಿತ್ರ ಅವರ ನಿರೀಕ್ಷೆ ತಲುಪಲೂ ಇಲ್ಲ. ಅವರ ಬದುಕಲ್ಲೊಂದು ಹೊಸ ಕಿಸ್ಮತ್ ಬರುತ್ತೆ ಅಂದುಕೊಂಡರೆ, ಹತ್ತಿರವೂ ಸುಳಿಯಲಿಲ್ಲ. ಹಾಗಂತ, ಅವರಿಗೆ ಬೇಸರವೂ ಇಲ್ಲ. ಆ ಕುರಿತು ಹೇಳುವ ಅವರು, ‘ನನಗೆ ನಿರ್ದೇಶನ ಮಾಡಬೇಕೆಂಬ ಆಸೆ ಇತ್ತು. ನಿರ್ದೇಶನ ಮಾಡಿದ್ದು ಖುಷಿ ಕೊಟ್ಟಿದೆ. ಒಂದೇ ಮಾತಲ್ಲಿ ಹೇಳುವುದಾದರೆ, ಅದು ಕಮರ್ಷಿಯಲ್ ಆಗಿ ಸಕ್ಸಸ್ ಆಯ್ತೋ ಇಲ್ಲವೋ ಗೊತ್ತಿಲ್ಲ. ನನ್ನ ಮಟ್ಟಿಗೆ ದೊಡ್ಡ ಮಟ್ಟದ ಸಮಾಧಾನ ತಂದಿದ್ದಂತೂ ಸುಳ್ಳಲ್ಲ. ‘ಕಿಸ್ಮತ್’ ನನ್ನ ಪ್ರಕಾರ ಒಳ್ಳೆಯ ಚಿತ್ರ. ನಿರ್ದೇಶಿಸಿದ್ದಕ್ಕೆ ತೃಪ್ತಿ ಇದೆ. ಮುಂದೆ ಇನ್ನೂ ಒಳ್ಳೆಯ ಚಿತ್ರ ಕೊಡ್ತೀನಿ ಎಂಬ ನಂಬಿಕೆ ನನಗಿದೆ. ಅದಕ್ಕೆ ಈಗಾಗಲೇ ತಯಾರಿಯೂ ನಡೆಯುತ್ತಿದೆ. 2020 ರಲ್ಲಿ ಒಂದೊಳ್ಳೆಯ ಚಿತ್ರ ಮಾಡ್ತೀನಿ. ಸಮಯ ಬಂದಾಗ ನಾನೇ ಆ ಬಗ್ಗೆ ಅನೌನ್ಸ್ ಮಾಡ್ತೀನಿ. ಪಕ್ಕಾ ನಮ್ಮತನದ ಚಿತ್ರ ಅದಾಗಿರುತ್ತೆ. ಅದು ಇಲ್ಲೇ ನಡೆದಂತಹ ಒಂದು ನೈಜ ಘಟನೆ ಸುತ್ತ ನಡೆದ ಕಥೆ’ ಎನ್ನುತ್ತಾರೆ ವಿಜಯ್.
ಸದ್ಯಕ್ಕೆ ಅವರು ‘ಮಾಲ್ಗುಡಿ ಡೇಸ್’ ಚಿತ್ರ ಬಿಟ್ಟು ಬೇರೆ ಬಗ್ಗೆ ಗಮನಹರಿಸಿಲ್ಲ. ಕಾರಣ, ಈಗಾಗಲೇ ಒಂದರ ಮೇಲೊಂದು ಸಿನಿಮಾ ಒಪ್ಪಿಕೊಂಡು ಸಾಕಷ್ಟು ‘ಅನುಭವ’ ಆಗಿದೆಯಂತೆ. ಹಾಗಾಗಿ, ‘ಮಾಲ್ಗುಡಿ ಡೇಸ್’ ಚಿತ್ರಕ್ಕೆ ಫುಲ್ ಟೈಮ್ ಮೀಸಲಿಟ್ಟಿದ್ದಾರಂತೆ. ‘ಮಾಲ್ಗುಡಿ ಡೇಸ್’ ಅಂದಾಕ್ಷಣ, ಶಂಕರ್‌ನಾಗ್ ನೆನಪಾಗುತ್ತಾರೆ. ಅವರು ‘ಮಾಲ್ಗುಡಿ ಡೇಸ್’ ಎಂಬ ಅದ್ಭುತ ಧಾರಾವಾಹಿ ಕಟ್ಟಿಕೊಟ್ಟವರು. ಹಾಗಂತ, ಅದಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ಇಲ್ಲಿ ಶೀರ್ಷಿಕೆಯೊಂದೇ ಬಳಕೆ ಮಾಡಲಾಗಿದೆ. ಈ ಸಿನಿಮಾ ಬಳಿಕ ಮತ್ತೂಂದು ಸಿನಿಮಾ ಕಡೆ ಗಮನಹರಿಸುತ್ತೇನೆ’ ಎನ್ನುತ್ತಲೇ ಮಾತು ಮುಗಿಸುತ್ತಾರೆ.