Advertisement

ಕಾಲವನ್ನು ತಡೆಯೋರು ಯಾರೂ ಇಲ್ಲ…

06:09 PM Apr 21, 2024 | Team Udayavani |

ಒಂದು ಚೆಂದದ ದಿನ. ಸಿಕ್ಕ ಕಡೆಗಳಲ್ಲೆಲ್ಲಾ ಕೆಲಸ ಹುಡುಕಿ ಹುಡುಕಿ ನಿರಾಶೆಯ ಗೂಡಿನ ಒಳಗೆ ಮುದುಡಿಹೋಗಿದ್ದ ಬದುಕಿಗೆ ಚೇತರಿಕೆ ತುಂಬಿಕೊಂಡಿದೆ. ಬದುಕು ನಿರ್ವಹಣೆಗೆ ಕೈಗೊಂದು ಕೆಲಸ ದೊರಕಿದೆ. ಬದುಕಿನ ನಿರ್ವಹಣೆ ಕುರಿತು ಇದ್ದ ದೊಡ್ಡ ಚಿಂತೆಯೊಂದು ಮನದಿಂದ ಇಳಿದು ಮನಸ್ಸು ನಿಶ್ಚಿಂತವಾಗಿದೆ. ಬದುಕು ಬರಿಯ ತಂಗಾಳಿಯನ್ನೇ ತುಂಬಿಕೊಂಡಿದೆಯೇನೋ ಎಂಬಷ್ಟು ತಣ್ಣನೆಯ ಭಾವ. ಆಹ್‌! ಈ ಆನಂದದ ಸಮಯ ಹೀಗೆಯೇ ಸ್ಥಬ್ಧವಾಗಿ ಇದ್ದುಬಿಡಬಾರದೇ ಎಂದನಿಸಿಬಿಡುತ್ತದೆ.

Advertisement

ಮನಸ್ಸೇ ಹಾಗೆ: ಚಂದವಾಗಿರುವುದಕ್ಕೆ ಬಹಳಷ್ಟು ಬೇಗನೆ ಒಗ್ಗಿಕೊಂಡು ಬಿಡುತ್ತದೆ. ಆದರೆ, ಕಾಲ ಹಾಗಲ್ಲವಲ್ಲ. ನಿಲ್ಲೆಂದಾಗ ನಿಲ್ಲುವಂತೆ, ಹೋಗೆಂದಾಗ ಹೋಗುವಂತೆ ಕಾಲವನ್ನು ಕಟ್ಟಿ ಹಾಕಲು ನಮ್ಮಿಂದಾಗದು. ಅದು ಯಾರ ಮಾತನ್ನೂ ಕೇಳುವುದಿಲ್ಲ. ಉರುಳುತ್ತಾ ಸಾಗುವುದಷ್ಟೇ ಅದರ ಕೆಲಸ. ಯಾರ ಮನಸ್ಸು, ಯಾರ ವಯಸ್ಸು, ಯಾರ ಬಯಕೆಗಳನ್ನೂ ಲೆಕ್ಕಿಸದೆ ತನ್ನದೇ ಹದದಲ್ಲಿ ಮುಂದೆ ಹೋಗುತ್ತಲೇ ಇರುತ್ತದೆ. ಅದು ಯಾರನ್ನೂ ಲೆಕ್ಕಿಸುವುದಿಲ್ಲ, ಯಾರಿಂದಲೂ ಏನನ್ನೂ ದಕ್ಕಿಸಿಕೊಳ್ಳುವುದಿಲ್ಲ. ಬದುಕಿನ ಪ್ರತೀ ಹಂತದಲ್ಲೂ ಬಗೆಬಗೆಯ ಭಾವಗಳನ್ನು, ಬವಣೆಗಳನ್ನು ನೀಡುತ್ತಾ ನಮ್ಮನ್ನು ದಿಗಿಲೆಬ್ಬಿಸಿಬಿಡುತ್ತದೆ. ಬದುಕಿನ ಕಡೆಗಿನ ಭಯ ಮುಂದೆ ಸಾಗುತ್ತಿದ್ದಂತೆ ಕಳಚಿ ಬೀಳುತ್ತಾ, ಕಾಲವೇ ನಮ್ಮನ್ನು ಗಟ್ಟಿಯಾಗಿ ನಿಲ್ಲುವಂತೆ ಮಾಡುತ್ತದೆ.

ಕರೆದಾಗ ಬರುವ ಅತಿಥಿಯಲ್ಲ…

ಕಾಲ ಬರಿಯ ಸಕ್ಕರೆಯ ಸವಿಯನ್ನಷ್ಟೇ ನೀಡುವುದಲ್ಲ. ಅದು ಕಟು ವಾಸ್ತವದ ದರ್ಶನವನ್ನು ನಮ್ಮ ಮುಂದೆ ತೆರೆದಿಡುತ್ತದೆ. ಅದು ಎಲ್ಲವನ್ನೂ ಅನಿರೀಕ್ಷಿತವಾಗಿಯೇ ನೀಡುತ್ತದೆ. ಅದು ಕರೆದಾಗ ಬರುವ ಅತಿಥಿಯಲ್ಲ. ನಮ್ಮ ಕರೆಗೆ ಕಾಲನ ಕಡೆಯಿಂದ ಬೆಲೆಯಿಲ್ಲ. ಕಾಲದ ಮುಂದೆ ನಾವೆಲ್ಲಾ ಅತಿಥಿಗಳು. ನಾವೆಷ್ಟೇ ಬುದ್ದಿವಂತರಾಗಿರಲಿ, ನಮ್ಮ ಭವಿಷ್ಯ ನಾವು ಊಹಿಸದ ತಿರುವುಗಳಿಂದ ಕೂಡಿರುತ್ತದೆ. ಹೀಗಾಗಿ, ಕೆಲವೊಮ್ಮೆ ಕಾಲದ ಹೊಡೆತಕ್ಕೆ ತತ್ತರಿಸಿಬಿಡುತ್ತೇವೆ.

ಇದೇ ಕಾಲ, ಕೊಟ್ಟಿದ್ದನ್ನು ಕಿತ್ತುಕೊಂಡು ಮುಂದೊಂದು ದಿನ ಬರಿಗೈಯಲ್ಲೂ ನಮ್ಮನ್ನು ನಿಲ್ಲಿಸಬಹುದು. ಈಗಿರುವ ಐಶ್ವರ್ಯಕ್ಕೆ ಅಹಂಕಾರ ಪಟ್ಟುಕೊಂಡರೆ ಮುಂದೊಂದು ದಿನ ಪಶ್ಚಾತ್ತಾಪ ಪಡಬಹುದಾದ ಸ್ಥಿತಿಯನ್ನೂ ಕಾಲ ನಮ್ಮ ಮುಂದೆ ತಂದು ನಿಲ್ಲಿಸಬಹುದು. ಹಾಗಾಗಿ, ಇದ್ದಾಗ ಹಿಗ್ಗದೆ, ಬಿದ್ದಾಗ ಕುಗ್ಗದೆ ಸ್ಥಿತಪ್ರಜ್ಞರಾಗಿದ್ದು ಬದುಕಬೇಕೆಂದು ಬಲ್ಲವರು ಹೇಳುತ್ತಾರೆ.

Advertisement

ಏರಿಳಿತಗಳ ಜೊತೆ ಪಯಣ

ಬದುಕಿನ ವಿವಿಧ ಹಂತಗಳೊಂದಿಗೆ ನಾವು ಕಾಲದ ಜೊತೆಗೆ ಚಲಿಸುತ್ತಿರುತ್ತೇವೆ. ಬಾಲ್ಯ ಎಂದರೆ ಸಾಕು ನಮ್ಮೊಳಗೆ ನಲಿದಾಡುವಷ್ಟು ಖುಷಿ. ಅಲ್ಲಿ ಜವಾಬ್ದಾರಿಗಳಿರುವುದಿಲ್ಲ, ಯಾವುದೇ ಚಿಂತೆಗಳಿರುವುದಿಲ್ಲ. ಅದೇ ನಿರ್ಮಲ ಭಾವದ ಬದುಕನ್ನು ನಾವು ನಂತರದ ಹಂತಗಳಲ್ಲಿ ಕಂಡುಕೊಳ್ಳಲು ಸಾಧ್ಯವಾಗುವುದಿಲ್ಲ. ನಾವು ಬೆಳೆದಂತೆಲ್ಲಾ ನಮ್ಮೊಳಗಿನ ಚಿಂತೆಗಳೂ ಅಷ್ಟೇ ದೊಡ್ಡದಾಗಿ ಬೆಳೆಯುತ್ತಾ ಹೋಗುತ್ತದೆ. ಬದುಕಿಗೆ ವಿವಿಧ ಮುಖಗಳು, ಏರಿಳಿತಗಳು ಜೊತೆಯಾಗಿ ಅದರ ಜೊತೆಗೆ ಸಾಗುತ್ತಿರುತ್ತೇವೆ.

ಕಾಲ ನಮ್ಮೊಳಗೊಂದು ಕುತೂಹಲವನ್ನಿಟ್ಟು ಸಾಗುತ್ತಿರುತ್ತದೆ. ಇವತ್ತಿನ ಸಂಭ್ರಮ ನಾಳೆಗೆ ಮುಂದುವರಿಯದಿರಬಹುದು. ಇವತ್ತಿನ ನೋವು ನಾಳೆಯ ಯಾವುದೋ ಶುಭ ಗಳಿಗೆಯ ಮುಂದೆ ಮಂಜಿನಂತೆ ಕರಗಿ ಹೋಗಬಹುದು. ಎದೆಯ ಬೇಗುದಿಗೆ ತಂಪೆರೆಯಲು ಯಾರದೋ ಸಾಂತ್ವನ ಹತ್ತಿರವಾಗಬಹುದು. ಖುಷಿಯು ತುಂಬಿದ ಜೋಳಿಗೆಗೆ ಇನ್ನಷ್ಟು ಕಾರಣಗಳು ಸೇರಿಕೊಳ್ಳಬಹುದು. ಯಾವುದೋ ಮೂಲೆ ಹಿಡಿದ ಕನಸಿಗೆ ಮತ್ತೆ ರೆಕ್ಕೆ ಮೂಡಬಹುದು.

ಏನಾದೀತೋ… ಯಾರು ಬಲ್ಲರು?

ವಿಚಿತ್ರವೆಂದರೆ ನಾವು ಕಾಲದೊಂದಿಗೆ ನಿಧಾನವಾಗಿ ನಮ್ಮ ಬದುಕನ್ನು ಕರಗಿಸುತ್ತಾ ಹೋಗುತ್ತಿದ್ದೇವೆ ಎಂದು ತಿಳಿದರೂ ಅದನ್ನು ಅರಿತುಕೊಳ್ಳುವ ವ್ಯವದಾನ ನಮ್ಮೊಳಗಿರುವುದಿಲ್ಲ. ಇನ್ನಷ್ಟು, ಮತ್ತಷ್ಟು ಎಂಬ ಹಂಬಲ ನಮ್ಮೊಳಗೆ ಶಾಶ್ವತವಾಗಿ ಬೇರೂರಿ ಬಿಡುತ್ತದೆ. ಮತ್ತು ಅದರಲ್ಲಿಯೇ ನೆಮ್ಮದಿಯನ್ನು ಕಾಣುತ್ತೇವೆ. ಆದರೆ, ಇದನ್ನು ಶಾಶ್ವತ ನೆಮ್ಮದಿಯಾಗಿ ಕಾಲ ನಮ್ಮ ಮುಂದೆ ತಂದು ನಿಲ್ಲಿಸುವುದಿಲ್ಲ. ನೀಡಿದ್ದನ್ನು ಕಸಿದುಕೊಳ್ಳುವ ಕಟು ಮನಸ್ಸಿನ ಕಾಲನ ನಿರ್ಧಾರಗಳಿಗೆ ಒಂದೊಮ್ಮೆ ತಲೆಬಾಗಲೇ ಬೇಕಾಗುತ್ತದೆ. ಕಾಲನ ಜೋಳಿಗೆಯೊಳಗೆ ಏನಿದೆ ಎಂದು ಬಲ್ಲವರಾರು? ಅದು ತೋರಿಸಿದ ದಿಕ್ಕಿನಲ್ಲಿ ಸಾಗುವುದಷ್ಟೇ ನಮ್ಮ ಕೆಲಸ.

ಅನುರಾಧಾ ತೆಳ್ಳಾರ್‌

Advertisement

Udayavani is now on Telegram. Click here to join our channel and stay updated with the latest news.

Next