ಹೊಸದಿಲ್ಲಿ : 2019ರಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ದೇಶದ ಪ್ರಧಾನಿಯಾಗುವುದು ನಿಶ್ಚಿತ; ಅವರು ಪ್ರಧಾನಿಯಾಗುವುದನ್ನು ಯಾರೂ ತಡೆಯಲಾರರು ಎಂದು ಕರ್ನಾಟಕದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಇಂದು ಶನಿವಾರ ಕಾಂಗ್ರೆಸ್ ಪೂರ್ಣಾಧಿವೇಶನದಲ್ಲಿ ಹೇಳಿದ್ದಾರೆ.
2019ರಲ್ಲಿ ಬಿಜೆಪಿ – ಆರ್‌ಎಸ್‌ಎಸ್ ಅನ್ನು ಸೋಲಿಸಲು ಸಮಾನ ಮನಸ್ಕ ರಾಜಕೀಯ ಪಕ್ಷಗಳೊಂದಿಗೆ ಸಹಕರಿಸುವ ಪ್ರಗತಿಪರ ತಂತ್ರೋಪಾಯವನ್ನು ರೂಪಿಸುವ ನಿರ್ಧಾರವನ್ನು ಕಾಂಗ್ರೆಸ್ ಪೂರ್ಣಾಧಿವೇಶನದಲ್ಲಿ ಕೈಗೊಳ್ಳಲಾಯಿತು.
2019ರ ಮಹಾ ಚುನಾವಣೆಗೆ ಮುನ್ನವೇ ವಿವಿಧ ರಾಜಕೀಯ ಪಕ್ಷಗಳೊಂದಿಗೆ ಮೈತ್ರಿ ಹೊಂದುವ ಸಾಧ್ಯತೆಯ ಬಗ್ಗೆಯೂ ಕಾಂಗ್ರೆಸ್ ಈ ಅಧಿವೇಶನದಲ್ಲಿ ಚಿಂತನೆ ನಡೆಸಿತು.
ರಾಷ್ಟ್ರ ಪಿತರ ದೂರದರ್ಶಿತ್ವವನ್ನು ಸಾಕಾರಗೊಳಿಸಲು ಪುನರುಜ್ಜೀವನ ಪಡೆದ ಕಾಂಗ್ರೆಸ್‌ನಿಂದ ಮಾತ್ರವೇ ಸಾಧ್ಯ ಎಂಬ ಕರಡು ನಿರ್ಣಯವನ್ನು ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಮಂಡಿಸಿದರು.
ಮೂರು ದಿನಗಳ ಕಾಂಗ್ರೆಸ್ ಪೂರ್ಣಾಧಿವೇಶನದಲ್ಲಿ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ಅವರು ಪಕ್ಷದ ಮುಂದಿರುವ ಸವಾಲುಗಳನ್ನು ಹಾಗೂ ಸಾಧಿಸಬೇಕಾದ ಗುರಿಗಳನ್ನು ಪಟ್ಟಿ ಮಾಡಿದರು.
ಕಾಂಗ್ರೆಸ್ ಪಕ್ಷದ ಭವಿಷ್ಯವನ್ನು ಉಜ್ವಲಗೊಳಿಸುವ ಪ್ರಯತ್ನದಲ್ಲಿ ಎಲ್ಲ ಕಾರ್ಯಕರ್ತರು ನಿಷ್ಠೆಯಿಂದ ಕೈಜೋಡಿಸಿ ಪರಿಶ್ರಮಿಸಬೇಕು ಎಂದು ರಾಹುಲ್ ಕರೆ ನೀಡಿದರು.
ಕೇಂದ್ರದಲ್ಲಿನ ದುರಾಡಳಿತೆಗಾಗಿ ರಾಹುಲ್ ಗಾಂಧಿ, ಮೋದಿ ನೇತೃತ್ವದ ಬಿಜೆಪಿ ಸರಕಾರದ ವಿರುದ್ಧ ಕಟುವಾದ ವಾಕ್ ದಾಳಿ ನಡೆಸಿದರು.