ಗುಳೇದಗುಡ್ಡ: ಗುಳೇದಗುಡ್ಡ ತಾಲೂಕು ಕೇಂದ್ರವಾಗಿ ವರ್ಷ ಕಳೆಯುತ್ತ ಬಂದಿದೆ. ಆದರೆ ಇದುವರೆಗೂ ತಾಲೂಕು ಕಚೇರಿಗಳು ಆರಂಭವಾಗುವ ಲಕ್ಷಣಗಳೇ ಕಾಣುತ್ತಿಲ್ಲ. ಅಧಿಕಾರಿಗಳು ತಾಲೂಕು ಕಚೇರಿಗಳ ಆರಂಭಕ್ಕೆ ಮಹೂರ್ತ ಫಿಕ್ಸ್ ಮಾಡುತ್ತಿಲ್ಲ.
ಗುಳೇದಗುಡ್ಡ ನೂತನ ತಾಲೂಕು ಬಾದಾಮಿ ಕ್ಷೇತ್ರದ ಶಾಸಕರಾಗಿರುವ ಸಿದ್ದರಾಮಯ್ಯನವರ ವ್ಯಾಪ್ತಿಗೆ ಬರುತ್ತದೆ. ಆದರೆ ತಾಲೂಕು ಘೋಷಣೆಯಾಗಿ ವರ್ಷ ಕಳೆಯುತ್ತ ಬಂದರೂ ಇದುವರೆಗೂ ತಾಲೂಕು ಕಚೇರಿಗಳು ಕಾರ್ಯಾರಂಭ ಮಾಡಿಲ್ಲ. ಇದರಿಂದ ನಿತ್ಯವು ಗುಳೇದಗುಡ್ಡ ಸೇರಿದಂತೆ 38 ಹಳ್ಳಿಗಳ ಜನರು ತಾಲೂಕು ಕೇಂದ್ರವಿದ್ದರೂ ಬಾದಾಮಿಗೆ ಅಲೆದಾಡುವಂತಾಗಿದೆ.
ಕಟ್ಟಡ ಹಸ್ತಾಂತರ ಸಮಸ್ಯೆ ಇತ್ಯರ್ಥ: ತಾಲೂಕು ಕಚೇರಿಗಳ ಆರಂಭಕ್ಕೆ ನೀರಾವರಿ ಇಲಾಖೆ ಕಟ್ಟಡ ಹಸ್ತಾಂತರಿಸಲು ನಿಗಮದ ಅಧಿಕಾರಿಗಳು ತಕರಾರು ತೆಗೆದಿದ್ದರು, ಆದರೆ ಈಗ ನೀರಾವರಿ ಇಲಾಖೆ ಅಧಿಕಾರಿಗಳು ಸಹ ಕಟ್ಟಡ ಹಸ್ತಾಂತರಿಸಲು ಒಪ್ಪಿಗೆ ಸೂಚಿಸಿ, ಅದಕ್ಕೆ ಬಾಡಿಗೆಯನ್ನು ನಿಗದಿಪಡಿಸಿ ಎರಡು ತಿಂಗಳು ಕಳೆದಿವೆ. ಆದರೆ ಇದುವರೆಗೂ ನೂತನ ತಾಲೂಕಿನ ಕಚೇರಿಗಳು ಆರಂಭಗೊಳ್ಳದಿರುವುದಕ್ಕೆ ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದಾರೆ. ಕಳೆದ ತಿಂಗಳು ಕಟ್ಟಡ ವೀಕ್ಷಣೆಗೆ ಬಂದಿದ್ದ ಬಾದಾಮಿ ತಹಶೀಲ್ದಾರ್ ಎಸ್.ಎಸ್.ಇಂಗಳೆ ಅವರು ಭೇಟಿ ನೀಡಿ, ಕಚೇರಿಗಳನ್ನು ಪರಿಶೀಲಿಸಿದ್ದರು. ನೀರಾವರಿ ಇಲಾಖೆಗೆ ಬೇರೆ ಕಚೇರಿ ವ್ಯವಸ್ಥೆ ಮಾಡಿ, ಹದಿನೈದು ದಿನಗಳಲ್ಲಿ ಕಚೇರಿ ಆರಂಭಿಸಲಾಗುವುದು ಎಂದು ಹೇಳಿದ್ದರು, ಆದರೆ ತಿಂಗಳು ಕಳೆದರೂ ಕಚೇರಿ ಆರಂಭದ ಲಕ್ಷಣಗಳು ಕಾಣುತ್ತಿಲ್ಲ. ನೂತನ ತಾಲೂಕು ಕಚೇರಿಗಳ ಕಾರ್ಯಾರಂಭ ನ.26ರಂದು ಆರಂಭಗೊಳಿಸಲು ಶಾಸಕರು ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎನ್ನಲಾಗಿದೆ. ಆದರೆ ಇದುವರೆಗೂ ಕಚೇರಿ ಆರಂಭಕ್ಕೆ ಕಟ್ಟಡಗಳಲ್ಲಿ ಇನ್ನೂ ಸಮರ್ಪಕ ಸೌಲಭ್ಯಗಳಿಲ್ಲ.
ತಾಲೂಕು ಕಚೇರಿಗಳನ್ನು ಆರಂಭಿಸುವ ಕುರಿತು ಪಟ್ಟಣದ ನೀರಾವರಿ ಕಟ್ಟಡ ವೀಕ್ಷಣೆ ಮಾಡಲು ಉಪವಿಭಾಗಾಧಿ ಕಾರಿಗಳು ಶೀಘ್ರವೇ ಭೇಟಿ ನೀಡಲಿದ್ದಾರೆ. ತಾಲೂಕು ಕಚೇರಿಗೆ ಖಜಾನೆ-2 ಕೋಡ್ ಬಂದಿಲ್ಲ. ಕಾರಣ ಸ್ವಲ್ಪ ವಿಳಂಬವಾಗಿದೆ.
ಎಸ್.ಎಸ್.ಇಂಗಳೆ , ತಹಶೀಲ್ದಾರ್, ಬಾದಾಮಿ
ಮಾಜಿ ಮುಖ್ಯಮಂತ್ರಿ, ಶಾಸಕ ಸಿದ್ದರಾಮಯ್ಯನವರು ನೂತನ ತಾಲೂಕು ಕಚೇರಿಗಳನ್ನು ನ. 26ರೊಳಗೆ ಆರಂಭಿಸಲು ಉಪವಿಭಾಗಾಧಿಕಾರಿಗಳಿಗೆ ಸೂಚಿಸಿದ್ದಾರೆ. ಉಪವಿಭಾಗಾಧಿಕಾರಿಗಳು ತಹಶೀಲ್ದಾರ್‌ಗೆ ಸೂಚಿಸಿದ್ದು, ತಾಲೂಕು ಕಚೇರಿಗಳನ್ನು ಆರಂಭಿಸಿ, ಜನರಿಗೆ ಅನುಕೂಲ ಮಾಡಿಕೊಡಲಾಗುವುದು.
ಹೊಳಬಸು ಶೆಟ್ಟರ,
ಕಾಂಗ್ರೆಸ್ ಮುಖಂಡ
ತಾಲೂಕಾ ಕಚೇರಿಗಳನ್ನು ನೀರಾವರಿ ಇಲಾಖೆ ಕಟ್ಟಡದಲ್ಲಿ ಆರಂಭಿಸಬೇಕು. ತಾಲೂಕು ಕಚೇರಿಗೆ ಬೇಕಾದ ಮೂಲಭೂತ ಸೌಕರ್ಯ ಒದಗಿಸಬೇಕು.
ಅಶೋಕ ಹೆಗಡೆ, ಕಾರ್ಯದರ್ಶಿ,
ನಾಗರಿಕ ಹಿತರಕ್ಷಣಾ ವೇದಿಕೆ ಗುಳೇದಗುಡ್ಡ.
ಮಲ್ಲಿಕಾರ್ಜುನ ಕಲಕೇರಿ