ಪಾವಗಡ: ಸೋಲಾರ್ ಕಂಪನಿಯಲ್ಲಿ ಸ್ಥಳೀಯರಿಗೆ ಉದ್ಯೋಗ ನೀಡದೇ, ಪ್ರಭಾವಿಗಳಿಂದ ಪತ್ರ ತರುವವರಿಗೆ ಅವಕಾಶ ನೀಡಲಾಗುತ್ತಿದೆ ಎಂದು ರಾಚರ್ಲ ಗ್ರಾಮಸ್ಥರು ಆರೋಪಿಸಿದರು. ಭೂಮಿ ಕೊಟ್ಟ ರೈತರಿಗೆ ಕೆಲಸ ನೀಡದಿದ್ದಲ್ಲಿ ಸೋಲಾರ್ ಕಂಪನಿ ಮುಂದೆ ಉಗ್ರ ಹೋರಾಟ ಮಾಡುತ್ತೇವೆ ಎಂದು ಗ್ರಾಮದ ರಾಮಾಂಜಿ ಎಚ್ಚರಿಸಿದರು.
ಸೋಲಾರ್ ಹಿತ ರಕ್ಷಣೆ ಸಮಿತಿಯ ಅಕ್ಕಲಪ್ಪ ಮಾತನಾಡಿ, ಕಾಂಗ್ರೆಸ್ ಸರ್ಕಾರ ಇದ್ದಾಗ ಮಾಜಿ ಸಚಿವ ಡಿ.ಕೆ. ಶಿವಕುಮಾರ್ “ಭೂಮಿ ಕೊಟ್ಟವರಿಗೆ ಉದ್ಯೋಗ ನೀಡುತ್ತೇವೆ ಎಂದು ಹೇಳಿದ್ದರು. ಅವರ ಮಾತು ನಂಬಿ ಕಡಿಮೆ ದರಕ್ಕೆ ಗುತ್ತಿಗೆ ನೀಡಿದ್ದೇವು. ಆದರೆ ಅಧಿಕಾರಿಗಳು, ಕಂಪನಿ ಮುಖ್ಯಸ್ಥರು ರೈತರಿಗೆ ಮೋಸ ಮಾಡಿದ್ದಾರೆ ಎಂದು ಹೇಳಿದರು. ಮುಖಂಡ ಮಾರುತಿ ಮಾತನಾಡಿ, ಸರ್ಕಾರದ ನಿಯಮ ಗಾಳಿಗೆ ತೂರಿ ಭೂಮಾಲೀಕರನ್ನು ವಂಚಿಸುತ್ತಿರುವ ಸೋಲಾರ್ ಕಂಪನಿಗಳ ವಿರುದ್ಧ ದೂರು ನೀಡಿದರೂ ಕೆಎಸ್‌ಪಿಡಿಸಿಎಲ್ ಕ್ರಮ ಕೈಗೊಂಡಿಲ್ಲ ಎಂದರು.
ರೈತರು, ಅಧಿಕಾರಿಗಳು, ಕಂಪನಿ ನೌಕರರ ಮಧ್ಯೆ ಮಾತಿನ ಚಕಮಕಿ ನಡೆಯಿತು. ತಿರುಮಣಿ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದರು. ನ್
ಸರ್ಕಾರದ ನಿಯಮದನ್ವಯ ಭೂಮಾಲೀಕರಿಗೆ ಉದ್ಯೋಗ ನೀಡುವುದು ಕಡ್ಡಾಯ. ಎಲ್ಲಾ ಕಂಪನಿಗಳಿಗೂ ನೋಟಿಸ್ ನೀಡಲಾಗುವುದು. ಕೆಲಸದ ಸಮಯ 12ರಿಂದ 8 ನಿಗದಿ ಮಾಡುವಂತೆ ತಿಳಿಸಲಾಗುವುದು.
–ಮಹೇಶ್, ಕೆಎಸ್‌ಪಿಡಿಸಿಎಲ್ ಎಇಇ
ರೈತರು ಪ್ರತಿಭಟನೆ ನಡೆಸಿರುವ ಕುರಿತು ಕಂಪನಿ ಮೇಲಧಿಕಾರಿಗಳೊಂದಿಗೆ ಮಾತನಾಡಿದ್ದು, ಆದೇಶ ನೀಡಿದಲ್ಲಿ ಕೆಲಸಕ್ಕೆ ನೇಮಿಸಿ ಕೊಳ್ಳಲಾಗುವುದು.
–ನಂದೀಶ್, ರಿನ್ಯೂ ಸೋಲಾರ್ ಕಂಪನಿ ಅಡ್ಮಿನ್