Advertisement

ಹೊಸ ವಾಹನ ಬಂದಿಲ್ಲ; ಹಳೆಯದನ್ನು ಓಡಿಸುವಂತಿಲ್ಲ !

05:29 PM Feb 11, 2022 | Team Udayavani |

ಮಹಾನಗರ: ಮಂಗಳೂರು ಪೊಲೀಸರು ಇಲಾಖೆಯ ಹೊಸ ವಾಹನಗಳ ನಿರೀಕ್ಷೆಯಲ್ಲಿ ಹಳೆಯ ವಾಹನ ಗಳಲ್ಲಿಯೇ ಕರ್ತವ್ಯ ನಿರ್ವಹಿಸುತ್ತಿದ್ದಾರೆ!

Advertisement

ಅಲ್ಲಲ್ಲಿ ತುಕ್ಕು ಹಿಡಿದ, ನಿಗದಿತ ಪ್ರಮಾಣಕ್ಕಿಂತ ಅಧಿಕ ಹೊಗೆ ಉಗುಳುವ, ಪಿಕ್‌ಅಪ್‌ ಇಲ್ಲದ, ನಿರೀಕ್ಷಿತ ವೇಗದಲ್ಲಿ ಸಂಚರಿಸದ, 8-10 ಕಿ.ಮೀ. ಸಂಚರಿಸಿದಾಗಲೇ ಚಾಲಕರು, ಅಧಿಕಾರಿ, ಸಿಬಂದಿಯನ್ನು ಸುಸ್ತಾಗಿಸುವ ವಾಹನಗಳಲ್ಲೇ ಕೆಲವು ಪೊಲೀಸ್‌ ಅಧಿಕಾರಿ, ಸಿಬಂದಿ ಓಡಾಟ ನಡೆಸುತ್ತಿದ್ದಾರೆ. ಆರೋಪಿಗಳನ್ನು ಕರೆದೊಯ್ಯಲು ಕೂಡ ಇಂತಹುದೇ ವಾಹನಗಳನ್ನು ಬಳಸುವ ಅನಿವಾರ್ಯ ಎದುರಿಸುತ್ತಿದ್ದಾರೆ. ತಮಗಾಗುತ್ತಿರುವ ಅನಾನುಕೂಲವನ್ನು ಹೇಳಿಕೊಳ್ಳಲಾಗದೆ ಹಳೆಯ ವಾಹನಗಳಲ್ಲೇ ಅನಿವಾರ್ಯವಾಗಿ ಕರ್ತವ್ಯ ಮುಂದುವರಿಸಿದ್ದಾರೆ.

ಪೊಲೀಸ್‌ ಇಲಾಖೆಯ ನಿಯಮಾವಳಿ ಪ್ರಕಾರ, ನಿರ್ದಿಷ್ಟ ಕಿ.ಮೀ. ಕ್ರಮಿಸಿರುವ ಅಥವಾ ದೊಡ್ಡ ರಿಪೇರಿ ಬಂದಿರುವ ಅಥವಾ ಹಲವು ವರ್ಷಗಳ ಕಾಲ ಸಂಚರಿಸಿ ದ ವಾಹನಗಳನ್ನು ಬಳಸಬಾರದು. ಅವುಗಳನ್ನು ಅನುಪಯುಕ್ತ ವಾಹನ ಗಳೆಂದು (ಕಂಡಮ್‌°ಡ್‌ ವೆಹಿಕಲ್‌) ಗುರುತಿಸಬೇಕು. ದೊಡ್ಡ ರಿಪೇರಿ ಬಂದರೆ ಅದನ್ನು ತುಂಬಾ ವೆಚ್ಚದ ದೃಷ್ಟಿಯಿಂದ ದುರಸ್ತಿ ಪಡಿಸಬಾರದು. ಹೊಸ ವಾಹನಕ್ಕೆ ಬೇಡಿಕೆ ಸಲ್ಲಿಸಬೇಕು. ಅನುಪಯುಕ್ತವಾಗುವ ವಾಹನಗಳ ಹರಾಜು ಅಥವಾ ಗುಜರಿಗೆ ನೀಡಲು ಕ್ರಮ ಕೈಗೊಳ್ಳಲಾಗುತ್ತದೆ. ವಾಹನಗಳ ಬಳಕೆ ವಿಚಾರದಲ್ಲಿ ಇತರ ಇಲಾಖೆಗಳಿಗಿಂತಲೂ ಪೊಲೀಸ್‌ ಇಲಾಖೆಯಲ್ಲಿ ಸ್ಪಷ್ಟ ನಿಯವಿದೆ.

ಮಂಗಳೂರು ಪೊಲೀಸ್‌ ಕಮಿಷನರೆಟ್‌ ವ್ಯಾಪ್ತಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆಯ ಪೊಲೀಸ್‌ ಠಾಣೆಗಳು, ಸಂಚಾರ ವಿಭಾಗ, ಅಧಿಕಾರಿಗಳ ವಿಶೇಷ ಕರ್ತವ್ಯ, ಗಣ್ಯ ವ್ಯಕ್ತಿಗಳ ಬೆಂಗಾವಲು ಕರ್ತವ್ಯ ಸಹಿತ ವಿವಿಧ ವಿಭಾಗಗಳಲ್ಲಿ ಈಗಾಗಲೇ 40ಕ್ಕೂ ಅಧಿಕ ಅನುಪಯುಕ್ತ ವಾಹನಗಳನ್ನು ಪಟ್ಟಿ ಮಾಡಿ ಅವುಗಳ ಬಳಕೆ ನಿಲ್ಲಿಸಲಾಗಿದೆ. ಮತ್ತಷ್ಟು ಅನುಪ ಯುಕ್ತ ಹಂತಕ್ಕೆ ಬಂದಿರುವ ವಾಹನಗಳು ಓಡಾಟ ನಡೆಸುತ್ತಿವೆ. ಒಂದೆಡೆ ವಾಹನಗಳ ಕೊರತೆಯಾದರೆ ಇನ್ನೊಂದೆಡೆ ಗುಜರಿ ಹಂತಕ್ಕೆ ಬಂದಿರುವ ವಾಹನಗಳನ್ನು ಬಳಸ ಬೇಕಾದ ಅನಿವಾರ್ಯ ಪೊಲೀಸರದ್ದಾಗಿದೆ. ಸರಕಾರಕ್ಕೆ ಅನುಪಯುಕ್ತ ವಾಹನಗಳ ಪಟ್ಟಿಯನ್ನು, ವಾಹನಗಳ ಪಟ್ಟಿಯನ್ನು ಪ್ರತಿ ವರ್ಷ ಕಳುಹಿಸಿಕೊಡಲಾಗುತ್ತಿದೆ. ಆದರೆ ಬೇಡಿಕೆಗೆ ತಕ್ಕಷ್ಟು ವಾಹನಗಳು ಪೂರೈಕೆಯಾಗಿಲ್ಲ.

40ಕ್ಕೂ ಅಧಿಕ ನಿರುಪಯುಕ್ತ ವಾಹನಗಳು
2017ರಲ್ಲಿ 3 ವಾಹನಗಳು, 2019ರಲ್ಲಿ 4 ವಾಹನಗಳು, 2020ರಲ್ಲಿ 23 ಮತ್ತು 2021ರಲ್ಲಿ 10 ವಾಹನಗಳನ್ನು ನಿರುಪಯುಕ್ತವೆಂದು ಪಟ್ಟಿ ಮಾಡಿ ಅದರ ಬಳಕೆ ನಿಲ್ಲಿಸಲಾಗಿದೆ. ಸದ್ಯ ಅನುಪಯುಕ್ತವೆಂದು ಪಟ್ಟಿ ಮಾಡಲಾದ ವಾಹನಗಳ ಪೈಕಿ ಒಂದು ಬೈಕ್‌ ಅನ್ನು ಮಾತ್ರ ಬಳಕೆ ಮಾಡಲಾಗುತ್ತಿದೆ. ಆದರೆ ಅದು ಸುಸ್ಥಿಯಲ್ಲಿದೆ. 25 ಬೊಲೆರೊ/ಟಾಟಾ ಸುಮೊ, 6 ಟಿಟಿ ವಾಹನ, 1 ನೀರಿನ ಟ್ಯಾಂಕರ್‌ಗೆ ಬೇಡಿಕೆ ಸಲ್ಲಿಸಲಾಗಿದೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಸಂಚಾರಿ ಪೊಲೀಸರಿಗೂ ಸಂಕಷ್ಟ
ಸಂಚಾರ ಪಶ್ಚಿಮ, ಸಂಚಾರ ದಕ್ಷಿಣ ವಿಭಾಗಕ್ಕೆ ಸಂಬಂಧಿಸಿದ ಕೆಲವು ವಾಹನಗಳು ಕೂಡ ಅನುಪಯುಕ್ತ ಹಂತಕ್ಕೆ ಬಂದಿವೆ. 15 ವರ್ಷಕ್ಕಿಂತಲೂ ಹೆಚ್ಚು ಹಳೆಯದಾದ ವಾಹನಗಳು ಬಳಕೆಯಲ್ಲಿವೆ. ಇತರ ಕೆಲವು ಠಾಣೆಗಳಲ್ಲಿ ಇನ್ಸ್‌ಪೆಕ್ಟರ್‌ಗಳು ಹಾಗೂ ಪಿಸಿಆರ್‌(ಹೊಯ್ಸಳ ವಾಹನಗಳು) ವಾಹನಗಳನ್ನು ಬದಲಾಯಿಸಬೇಕಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

31 ಹೊಸ ವಾಹನಗಳಿಗೆ ಬೇಡಿಕೆ
ಅನುಪಯುಕ್ತವೆಂದು ಗುರುತಿಸಲಾಗಿರುವ ವಾಹನಗಳನ್ನು ಬೆಂಗಳೂರಿಗೆ ವಾಪಸ್‌ ಕಳುಹಿಸಿಕೊಡಲಾಗಿದೆ. 31 ಹೊಸ ವಾಹನಗಳಿಗೆ ಬೇಡಿಕೆ ಪಟ್ಟಿಯನ್ನು ಇಲಾಖೆಗೆ ಸಲ್ಲಿಸಲಾಗಿದ್ದು, ಕೆಲವು ವಾಹನಗಳ ಪೂರೈಕೆಯಾಗಿವೆ. ಅಗತ್ಯವಿರುವಷ್ಟು ವಾಹನಗಳು ಪೂರೈಕೆಯಾಗುವ ನಿರೀಕ್ಷೆ ಇದೆ. ಕಾಲ ಕಾಲಕ್ಕೆ ಅಗತ್ಯವಿರುವ ವಾಹನಗಳ ಬೇಡಿಕೆ ಪಟ್ಟಿ ಕಳುಹಿಸಲಾಗುತ್ತದೆ.
– ಹರಿರಾಂ ಶಂಕರ್‌, ಡಿಸಿಪಿ ಮಂಗಳೂರು

– ಸಂತೋಷ್‌ ಬೊಳ್ಳೆಟ್ಟು

Advertisement

Udayavani is now on Telegram. Click here to join our channel and stay updated with the latest news.

Next