ನವದೆಹಲಿ:ಉತ್ತರಪ್ರದೇಶದ ಹತ್ರಾಸ್ ಯುವತಿ ಮೇಲಿನ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಸಿಬಿಐ ತನಿಖೆ ಸೇರಿದಂತೆ ಎಲ್ಲಾ ಆಯಾಮಗಳ ಕುರಿತು ಅಲಹಾಬಾದ್ ಹೈಕೋರ್ಟ್ ಮೇಲ್ವಿಚಾರಣೆ ನಡೆಸಲಿದೆ ಎಂದು ಸುಪ್ರೀಂಕೋರ್ಟ್ ಮಂಗಳವಾರ(ಅಕ್ಟೋಬರ್ 27, 2020) ತೀರ್ಪು ನೀಡಿದೆ.
ಹತ್ರಾಸ್ ಯುವತಿ ಮೇಲಿನ ಅತ್ಯಾಚಾರ ಪ್ರಕರಣವನ್ನು ಉತ್ತರಪ್ರದೇಶ ಹೊರತುಪಡಿಸಿ ಬೇರೆ ಹೈಕೋರ್ಟ್ ನಲ್ಲಿ ವಿಚಾರಣೆ ನಡೆಸಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್ ಸಿಜೆಐ ಎಸ್ ಎ ಬೋಬ್ಡೆ ಅವರು, ಎಲ್ಲಾ ಆಯಾಮಗಳ ವಿಚಾರಣೆಯನ್ನು ಅಲಹಾಬಾದ್ ಹೈಕೋರ್ಟ್ ನಡೆಸಲಿದೆ. ಅಲ್ಲದೇ ಸಿಬಿಐ ಕೂಡಾ ಹೈಕೋರ್ಟ್ ಗೆ ಎಲ್ಲಾ ವರದಿ ಸಲ್ಲಿಸಬೇಕು ಎಂದು ನಿರ್ದೇಶನ ನೀಡಿದರು.
ಪ್ರಕರಣದ ವಿಚಾರಣೆ ಪೂರ್ಣಗೊಳ್ಳುವವರೆಗೆ ಉತ್ತರಪ್ರದೇಶದಿಂದ ಬೇರೆಡೆಗೆ ವರ್ಗಾಯಿಸುವ ಪ್ರಶ್ನೆ ಇಲ್ಲ ಎಂದು ಈ ಪ್ರಕರಣದ ತನಿಖೆಯನ್ನು ಕೋರ್ಟ್ ಮೇಲ್ವಿಚಾರಣೆ ನಡೆಸಬೇಕೆಂದು ಕೋರಿ ಸಲ್ಲಿಸಿದ್ದ ಹಲವು ಅರ್ಜಿಗಳ ವಿಚಾರಣೆ ವೇಳೆ ಸುಪ್ರೀಂ ಈ ಅಭಿಪ್ರಾಯವ್ಯಕ್ತಪಡಿಸಿದೆ.
ಇದನ್ನೂ ಓದಿ:2021ರ ಆರಂಭದಲ್ಲೇ ರಾಜ್ಯದ ಜನರಿಗೆ ಸಿಗಲಿದೆ ಕೋವಿಡ್ ಲಸಿಕೆ: ಸಚಿವ ಸುಧಾಕರ್
ವರ್ಗಾವಣೆಗೆ ಸಂಬಂಧಿಸಿದಂತೆ ತನಿಖಾ ಸಂಸ್ಥೆ ತನಿಖೆಯನ್ನು ಸಮರ್ಪಕವಾಗಿ ಪೂರ್ಣಗೊಳಿಸುವುದು ಮುಖ್ಯವಾಗಿದೆ ಎಂದು ಸಿಜೆಐ ಹೇಳಿದರು. ಉತ್ತರಪ್ರದೇಶದಲ್ಲಿ ನಿಷ್ಪಕ್ಷಪಾತ ತನಿಖೆ ಅಸಾಧ್ಯ ಎಂದು ದೂರಿ ಸುಪ್ರೀಂಗೆ ಹಲವು ಅರ್ಜಿಗಳನ್ನು ಸಲ್ಲಿಸಿದ್ದು, ಪ್ರಕರಣದ ವಿಚಾರಣೆ ಬೇರೆಡೆಗೆ ವರ್ಗಾಯಿಸುವಂತೆ ಮನವಿ ಮಾಡಿದ್ದವು.
ಈ ಹಂತದಲ್ಲಿ ಪ್ರಕರಣವನ್ನು ಬೇರೆಡೆಗೆ ವರ್ಗಾಯಿಸಲು ಸುಪ್ರೀಂಕೋರ್ಟ್ ನಿರಾಕರಿಸಿದ್ದು, ಮೊದಲು ಸಿಬಿಐ ತನಿಖೆಯನ್ನು ಪೂರ್ಣಗೊಳಿಸಲಿ, ನಂತರ ಅಗತ್ಯವಿದ್ದರೆ ವಿಚಾರಣೆಯನ್ನು ವರ್ಗಾಯಿಸುವ ಬಗ್ಗೆ ಪರಿಶೀಲಿಸುವುದಾಗಿ ತಿಳಿಸಿದೆ.