ಜೀವನ ಸಮುದ್ರದಲ್ಲಿ ಒಟ್ಟಾಗಿ ಪಯಣಿಸುವ ಕನಸು ಕಾಣುತ್ತ, ಪಯಣ ಶುರುಮಾಡಿ ಸ್ವಲ್ಪ ದೂರ ಸಾಗುತ್ತಲೇ ಎಲ್ಲೋ ಕಣ್ಮರೆಯಾಗಿರುವ ನಿನ್ನನ್ನು ಎಲ್ಲೆಂದು ಹುಡುಕಲಿ? ನನಗೆ ದೋಣಿ ನಡೆಸಲೂ ಬಾರದು, ಈಜಲೂ ಬಾರದು. ಹೇಗೆ ನಡೆಸಲಿ ಈ ಪಯಣವ ನಾನು, ಹೋಗಲಿ, ವಾಪಸ್ ಬರೋಣ ಎಂದರೆ ಹಿಂತಿರುಗುವ ದಾರಿಯನ್ನು ನಾನರಿಯೆ!
ನಾನು ನಿನ್ನ ಆಂಟಿಬಯಾಟಿಕ್‌ನಂತೆ, ನಿನ್ನ ನೋವನ್ನೆಲ್ಲ ಮರೆಸುವ ಶಕ್ತಿಯೆಂದು ನನ್ನ ಹೊಗಳಿ, ಅಟ್ಟಕ್ಕೆ ಏರಿಸಿದೆ. ಆರೋಗ್ಯ ಸರಿಯಾಗುತ್ತಿದ್ದಂತೆ ಔಷಧ ಎತ್ತಿಡುವಂತೆ, ನಿನ್ನ ಕೆಲಸ ಆದ ತಕ್ಷಣ ನನ್ನಿಂದ ದೂರ ಸಾಗಿದ್ದು ಸರಿಯೇನು?
ಕನಸಲೂ ನೀನೇ ಮನಸಲೂ ನೀನೇ ಎಂದು ನಿನ್ನ ಧ್ಯಾನ ಮಾಡುತ್ತಿರುವ ನನ್ನನ್ನು, ಈ ರೀತಿ ಒಬ್ಬಂಟಿಯಾಗಿ ಬಿಟ್ಟು ಹೋಗಿರುವುದು ಸರಿಯೇನು? ನಿನಗೋಸ್ಕರ ಮನಸಿನಲ್ಲಿ ಇಷ್ಟುದಿನ ಖಾಲಿ ಬಿಟ್ಟು ಕಾಯುತ್ತಿದ್ದ ವಳ ಬದುಕಲ್ಲಿ, ಬಿಟ್ಟ ಸ್ಥಳ ತುಂಬಲು ಬಂದ ನೀನು,ಒಂದು ಶಬ್ದದಲ್ಲಿ ಉತ್ತರಿಸಿ ಎಂದು ಕಾಡುವ ಪ್ರಶ್ನೆಯಂತೆ, ಹೊಂದಿಸಿ ಬರೆಯದೆ, ಗುಂಪಿಗೆ ಸೇರದ ಪದವ ಆರಿಸದಂತೆ ನನ್ನನ್ನು ಬಿಟ್ಟು ಹೋದೆಯೇನು?
ಪ್ರಶ್ನೆಗಳಿಗೆ ಪುಟಗಟ್ಟಲೆ ಉತ್ತರ ಬರೆಯುತ್ತ ಕೂತ ನೀನು, ಪರೀಕ್ಷೆ ಸಮಯ ಪೂರ್ತಿಯಾಗದೇ ಉತ್ತರ ಪತ್ರಿಕೆ ಸಮೇತ ಮಾಯವಾದದ್ದು ಸರಿಯೇನು?ಕೊಟ್ಟ ಪುಟಗಳ ಸಾಲದೇ ಹೆಚ್ಚುವರಿ ಹಾಳೆಗಳ ಪಡೆದ ನೀನು, ಆ ಪುಟಗಳ ಎಸೆದು ಓಡಿ ಹೋದಂತೆ ನನಗೆ ಭಾಸವಾಗುತ್ತಿದೆ. ಒಮ್ಮೆ ಉತ್ತರವ ತೋರಿಸು ಗೆಳೆಯ, ನಕಲು ಮಾಡಲು ಬಾರದಿದ್ದರೂ ನಾನು ಪ್ರಯತ್ನಿಸುವೆ.
ಇಬ್ಬರಿಗೂ ರ್‍ಯಾಂಕು ಬೇಕೆಂದೇ ಇಲ್ಲ, ಜೀವನದ ಪರೀಕ್ಷೆಯಲ್ಲಿ ನಾವು ಜಸ್ಟ್ ಪಾಸ್ ಆದರೂ ಸಾಕು.
ಇಂತಿ ನಿನ್ನ ಪ್ರೀತಿಯ,
ಉಲೂಚಿ