ಮುಂಬೈ: ಸ್ವದೇಶದಲ್ಲಿ ಪ್ರವಾಸಿ ಶ್ರೀಲಂಕಾಕ್ಕೆ ನೀರು ಕುಡಿಸಿರುವ ಆತ್ಮವಿಶ್ವಾಸದಲ್ಲಿರುವ ಭಾರತ ತಂಡ ಇದೀಗ ಅದೇ ಉತ್ಸಾಹದಲ್ಲಿ ದಕ್ಷಿಣ ಆಫ್ರಿಕಾ ಸರಣಿಗೆ ಹೊರಟಿದೆ. ಹರಿಣಗಳ ನಾಡಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಭಾರತೀಯರು 3 ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯವನ್ನು ಜ.5ರಿಂದ ಕೇಪ್‌ಟೌನ್‌ನಲ್ಲಿ ಆರಂಭಿಸಲಿದ್ದಾರೆ. ಫೆ.1ರಿಂದ 6 ಪಂದ್ಯಗಳ ಏಕದಿನ ಸರಣಿ ಆರಂಭವಾಗಲಿದೆ. ಸರಣಿಯ ಕೊನೆಯ ಭಾಗವಾದ ಮೂರು ಪಂದ್ಯಗಳ ಟಿ20 ಸರಣಿ ಫೆ.18ರಿಂದ ಆರಂಭವಾಗಲಿದೆ. ಒಟ್ಟಾರೆ ಎರಡು ತಂಡಗಳಿಗೂ ಇದು ಪ್ರತಿಷ್ಠೆಯ ಕದನ. ದಕ್ಷಿಣ ಆಫ್ರಿಕಾ ತವರಲ್ಲಿ ಬಲಿಷ್ಠ. ಭಾರತ ತನ್ನ ನೆಲದಲ್ಲಿ ಲಂಕಾವನ್ನು ಸುಲಭವಾಗಿ ಮಣಿಸಿದಂತೆ ಹರಿಣಗಳನ್ನು ಕಟ್ಟಿ ಹಾಕುವುದು ಕಷ್ಟ. ಹಾಗಂತ ಭಾರತ ಕೈಕಟ್ಟಿ ಕೂರಲ್ಲ.
ಗೆಲುವಿಗಾಗಿ ಕಠಿಣ ಸ್ಪರ್ಧೆ ಒಡ್ಡುವುದರಲ್ಲಿ ಅನುಮಾನವಿಲ್ಲ. ಬೌನ್ಸಿ ಪಿಚ್‌ನಲ್ಲಿ ಭಾರತ ಯಾವ ರೀತಿಯಲ್ಲಿ ಪ್ರದರ್ಶನ ನೀಡಬಹುದು ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಈಗ ಗರಿಗೆದರಿದೆ.
25 ವರ್ಷದಿಂದ ಭಾರತೀಯರಿಗೆ ಗೆಲುವು ಮರೀಚಿಕೆ: ನಟಿ ಅನುಷ್ಕಾ ಶರ್ಮ ಜತೆಗೆ ಮದುವೆ ಮುಗಿಸಿದ ಬಳಿಕ ಕೊಹ್ಲಿಗೆ ಇದು ಮೊದಲ ಸರಣಿ. ಉತ್ಸಾಹದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡ ಕೊಹ್ಲಿಗೆ ಪತ್ರಕರ್ತರು ಪ್ರಶ್ನೆ ಸುರಿಮಳೆ ಸುರಿಸಿದರು. ಕೊಹ್ಲಿ ಸಮಾಧಾನದಿಂದ ಉತ್ತರಿಸಿದರು. ಈ ವೇಳೆ ವಿದೇಶದ ಸುದೀರ್ಘ ಸರಣಿಯಲ್ಲಿ ಭಾರತ ಜಯಿಸಿಲ್ಲ ಎನ್ನುವ ಪ್ರಶ್ನೆ ಎದುರಾದಾಗ ವಿರಾಟ್ ಕೊಹ್ಲಿ ಸ್ವಲ್ಪ ಖಾರವಾಗಿಯೇ ಪ್ರತಿಕ್ರಿಯಿಸಿದರು. ಸದ್ಯ ನಾವು ಅತ್ಯುತ್ತಮ ಫಾರ್ಮ್ನಲ್ಲಿದ್ದೇವೆ. ಪ್ರತಿ ಸಲವೂ ವಿದೇಶ ಪ್ರವಾಸಕ್ಕೆ ತೆರಳಿದಾಗ ಎದುರಾಗುವ ಇಂತಹ ನಿಮ್ಮ ಪ್ರಶ್ನೆಯಿಂದಲೇ ನಾವು ಒತ್ತಡಕ್ಕೆ ಒಳಗಾಗುತ್ತವೆ. ಇದರಿಂದಾಗಿ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗುವುದಿಲ್ಲ ಎಂದರು.
ಈ ಸಲ ಪ್ರವಾಸದಲ್ಲಿ ಹಾಗಾಗುವುದಿಲ್ಲ. ಮುಕ್ತ, ಒತ್ತಡರಹಿತವಾಗಿ ಸರಣಿಗೆ ತೆರಳುತ್ತಿದ್ದೇವೆ. ನಾವು ಯಾರಿಗೂ ಏನನ್ನೂ ಸಾಧಿಸಿ ತೋರಿಸಬೇಕಿಲ್ಲ. ನಮ್ಮ ಜವಾಬ್ದಾರಿ ಏನು ಎನ್ನುವುದು ಚೆನ್ನಾಗಿ ಗೊತ್ತಿದೆ. ಸರಣಿ ಗೆಲುವಿಗೆ ಶೇ.100ರಷ್ಟು ಪ್ರಯತ್ನ ನಡೆಸಲಿದ್ದೇವೆ ಎಂದು ವಿರಾಟ್ ಕೊಹ್ಲಿ ತಿಳಿಸಿದರು.
ಯಾವ ಸರಣಿಯೂ ಕಷ್ಟವಲ್ಲ: ಪ್ರತಿ ಸರಣಿಗೆ ತೆರಳುವ ಮೊದಲೇ ನಾವು ಕಷ್ಟ ಅಂದುಕೊಳ್ಳುತ್ತೇವೆ. ಇದುವೇ ನಮ್ಮ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ ಎಂದು ಕೊಹ್ಲಿ ಹೇಳಿದರು. ಇಂತಹ ಒತ್ತಡದಿಂದಾಗಿ ಉತ್ತಮ ಆಟ ನಿರ್ವಹಿಸಲು
ಸಾಧ್ಯವಾಗದೆ ಹೋಗಬಹುದು. ಹೀಗಾಗಿ ನಮ್ಮ ಮನಸ್ಥಿತಿಯನ್ನು ಪ್ರತಿ ಪರಿಸ್ಥಿತಿಯಲ್ಲೂ ಹೊಂದಿಕೊಳ್ಳುವಂತೆ ಟ್ಯೂನ್ ಮಾಡಿ ಇಟ್ಟುಕೊಂಡಿರಬೇಕು.
ಪ್ರತಿ ಪಂದ್ಯವನ್ನೂ ತವರಿನಲ್ಲೇ ಆಡುತ್ತಿದ್ದೇನೆ ಎನ್ನುವ ಯೋಚನೆಯೊಂದಿಗೆ ಕಣಕ್ಕೆ ಇಳಿದರೆ ಯಾವ ಬೌನ್ಸಿ ಪಿಚ್ ಸವಾಲಾಗಿ ಕಾಣಲಾರದು. ಆಫ್ರಿಕಾದಲ್ಲಿ ನಾನು ಟೆಸ್ಟ್ ಕ್ರಿಕೆಟ್ ಮಾತ್ರ ಆಡಿದ್ದೇನೆ. ಆದರೆ ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ ಆಫ್ರಿಕಾ ಪಿಚ್ ಗಳಲ್ಲಿ ಹೆಚ್ಚು ಹೊತ್ತು ಬ್ಯಾಟಿಂಗ್ ನಡೆಸುವ ಸಾಮರ್ಥ್ಯ ಹೊಂದಿದ್ದಾರೆ ಎಂದು ತಿಳಿಸಿದರು.
ಆಫ್ರಿಕಾ ಬೌಲರ್ ಎದುರಿಸುತ್ತೇವೆ: ದಕ್ಷಿಣ ಆಫ್ರಿಕಾದ ಡೇಲ್ ಸ್ಟೇನ್, ಮಾರ್ನ್ ಮಾರ್ಕೆಲ್, ಕಾಗಿಸೊ ರಬಾಡ ಹೆಚ್ಚು ಅನುಭವಿಗಳು. ಇವರನ್ನು ಸಮರ್ಥವಾಗಿ ಎದುರಿಸುವ ವಿಶ್ವಾಸವಿದೆ. ಅಷ್ಟೇ ಅಲ್ಲ ಬೌನ್ಸಿ ಪಿಚ್‌ನಲ್ಲಿ ಆತಿಥೇಯರಿಗೆ ನಮ್ಮ ಬೌಲರ್‌ಗಳು ಮೂಗುದಾರ ಹಾಕಲಿದ್ದಾರೆ ಎಂದು ಕೊಹ್ಲಿ ತಿಳಿಸಿದರು.