Advertisement

ಬುಮ್ರಾಗೆ ಮಹತ್ವ ಕೊಡಬೇಕಾಗಿಲ್ಲ: ಫಿಂಚ್‌

10:15 AM Jan 11, 2020 | Sriram |

ಮುಂಬಯಿ: ಮೂರು ಪಂದ್ಯಗಳ ಏಕದಿನ ಸರಣಿಗಾಗಿ ಆಸ್ಟ್ರೇಲಿಯ ಕ್ರಿಕೆಟ್‌ ತಂಡ ಭಾರತಕ್ಕೆ ಆಗಮಿಸಿದೆ. ಶುಕ್ರವಾರ ತಂಡದ ನಾಯಕ ಆರನ್‌ ಫಿಂಚ್‌ ಮತ್ತು ಕೋಚ್‌ ಆ್ಯಂಡ್ರೂé ಮೆಕ್‌ಡೊನಾಲ್ಡ್‌ ಮುಂಬಯಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಸಾಕಷ್ಟು ವಿಷಯಗಳನ್ನು ಪ್ರಸ್ತಾವಿಸಿದರು.

Advertisement

ಜಸ್‌ಪ್ರೀತ್‌ ಬುಮ್ರಾಗೆ ಹೆಚ್ಚಿನ ಮಹತ್ವ ಕೊಡಬೇಕಾಗಿಲ್ಲ, ಭಾರತದ ಸವಾಲಿಗೆ ಮಾನಸಿಕವಾಗಿ ಸಜ್ಜಾಗುವುದು ಮುಖ್ಯ, ಸಾಮರ್ಥ್ಯಕ್ಕೆ ತಕ್ಕ ಆಟ ಪ್ರದರ್ಶಿಸುವುದು ಅಗತ್ಯ ಎಂದರು.ಸರಣಿಯ ಮೊದಲ ಪಂದ್ಯ “ವಾಂಖೇಡೆ ಸ್ಟೇಡಿಯಂ’ನಲ್ಲಿ ಜ. 14ರಂದು ನಡೆಯಲಿದೆ. ಉಳಿದೆರಡು ಪಂದ್ಯಗಳ ತಾಣ ರಾಜ್‌ಕೋಟ್‌ (ಜ. 17) ಮತ್ತು ಬೆಂಗಳೂರು (ಜ. 19).

ಮಾನಸಿಕ ಸಿದ್ಧತೆ ಅಗತ್ಯ
“ಜಸ್‌ಪ್ರೀತ್‌ ಬುಮ್ರಾ ಅಪಾಯಕಾರಿ ಬೌಲರ್‌ ನಿಜ. ಅಂದಮಾತ್ರಕ್ಕೆ ಅವರಿಗೆ ಹೆಚ್ಚಿನ ಮಹತ್ವ ನೀಡಬೇಕಿಲ್ಲ. ಅವರಿಗೆ ಕೊಡುವಷ್ಟು ಮರ್ಯಾದೆ ಕೊಟ್ಟೇ ಕೊಡುತ್ತೇವೆ. ಇದಕ್ಕಿಂತ ಮುಖ್ಯವಾಗಿ ನಮ್ಮ ಸಾಮರ್ಥ್ಯಕ್ಕೆ ತಕ್ಕ ಪ್ರದರ್ಶನ ನೀಡುವತ್ತ ಹೆಚ್ಚಿನ ಗಮನ ನೀಡಬೇಕಿದೆ’ ಎಂದು ಫಿಂಚ್‌ ಹೇಳಿದರು.

“ಒಂದು ಬ್ಯಾಟಿಂಗ್‌ ಯೂನಿಟ್‌ ಆಗಿ ನಾವು ಯೋಜನೆಗಳನ್ನು ರೂಪಿಸುವುದು ಮುಖ್ಯ. ನಮ್ಮೆಲ್ಲ ಆಟಗಾರರೂ ಬೇರೆ ಬೇರೆ ರೀತಿಯ ಸಾಮರ್ಥ್ಯ ಹೊಂದಿದ್ದಾರೆ. ಜತೆಗೆ ದೌರ್ಬಲ್ಯಗಳೂ ಇವೆ. ಇದಕ್ಕಾಗಿ ಮೊದಲು ಮಾನಸಿಕವಾಗಿ ಸಿದ್ಧರಾಗುವುದು ಮುಖ್ಯ. ಅಗ್ರ ಕ್ರಮಾಂಕದ 3 ಅಥವಾ 4 ಮಂದಿ ಸ್ಥಿರ ಪ್ರದರ್ಶನ ನೀಡಿದರೆ ದೊಡ್ಡ ಮೊತ್ತ ದಾಖಲಾಗಲಿದೆ’ ಎಂದು ಫಿಂಚ್‌ ತಮ್ಮ ತಂಡದ ಬಗ್ಗೆ ಹೇಳಿದರು.

ರನ್‌ಯಂತ್ರ ಲಬುಶೇನ್‌
ಆಸ್ಟ್ರೇಲಿಯದ ರನ್‌ ಮೆಶಿನ್‌ ಮಾರ್ನಸ್‌ ಲಬುಶೇನ್‌ ಬಗ್ಗೆಯೂ ಫಿಂಚ್‌ ಪ್ರಸ್ತಾವಿಸಿದರು. “ಕಳೆದೊಂದು ವರ್ಷದಿಂದ ಲಬುಶೇನ್‌ ಆಟದಲ್ಲಿ ಅಮೋಘ ಪ್ರಗತಿ ಆಗಿದೆ. ಮೊದಲ ಸಲ ಭಾರತದಲ್ಲಿ ಆಡುವವರಲ್ಲಿ ಲಬುಶೇನ್‌ ಕೂಡ ಒಬ್ಬರು. ಬುಮ್ರಾ ನೇತೃತ್ವದ ದಾಳಿಯನ್ನು ಅವರು ಹೇಗೆ ನಿಭಾಯಿಸಬಲ್ಲರೆಂಬುದು ಕುತೂಹಲದ ಸಂಗತಿ’ ಎಂದರು.

Advertisement

ಕಳೆದ ಸಲ ಭಾರತ ಪ್ರವಾಸ ಬಂದಾಗ 0-2 ಹಿನ್ನಡೆಯಲ್ಲಿದ್ದ ಆಸ್ಟ್ರೇಲಿಯ ಬಳಿಕ 3-2ರಿಂದ ಸರಣಿ ವಶಪಡಿಸಿಕೊಂಡು ಮೆರೆದಿತ್ತು. ಈ ಹಂತದಿಂದಲೇ ತಮ್ಮ ಪ್ರಸಕ್ತ ಪ್ರವಾಸ ಮುಂದುವರಿಯಲಿದೆ ಎಂಬುದು ಫಿಂಚ್‌ ಆತ್ಮವಿಶ್ವಾಸ.

Advertisement

Udayavani is now on Telegram. Click here to join our channel and stay updated with the latest news.

Next