ಬೀದರ: ಜಿಲ್ಲೆಯಲ್ಲಿ ಬೇಡ ಜಂಗಮ ಜಾತಿ ಪ್ರಮಾಣ ವಿತರಿಸುವಲ್ಲಿ ಅ ಧಿಕಾರಿಗಳು ಬೇಜವಾಬ್ದಾರಿತನ ತೋರುತ್ತಿದ್ದು, ನಿಯಮಗಳನ್ನು ಗಾಳಿಗೆ ತೂರಿ ಉದ್ದೇಶಪೂರ್ವಕವಾಗಿ ಸಮಾಜದವರಿಗೆ ಅಧಿಕಾರಶಾಹಿ ನಡೆಸುತ್ತಿದ್ದಾರೆ. ಇದನ್ನು ಪ್ರತಿಭಟಿಸಲು ಬೇಡ ಜಂಗಮರು ಸಂಘಟಿತರಾಬೇಕಿದೆ ಎಂದು ಸಮಾಜದ ಮುಖಂಡ ರವೀಂದ್ರ ಸ್ವಾಮಿ ಕರೆ ನೀಡಿದರು.
ನಗರದ ಗಣೇಶ ಮೈದಾನದಲ್ಲಿ ಸೋಮವಾರ ಬೇಡ ಜಂಗಮ ಸಮಾಜದ ಬೃಹತ್ ಪ್ರತಿಭಟನಾ ರ್ಯಾಲಿ ನಿಮಿತ್ತ ನಡೆದ ಸಮಾವೇಶದಲ್ಲಿ ಮಾತನಾಡಿದ ಅವರು, ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಬೇಡ ಜಂಗಮ ಜಾತಿ ಪ್ರಮಾಣ ಪತ್ರ ನೀಡಲಾಗುತ್ತಿದ್ದು, ಸಮಾಜದವರು ಸಾಂವಿಧಾನಿಕ ಹಾಗೂ ಸರ್ಕಾರದ ಸೌಲಭ್ಯ ಪಡೆಯುತ್ತಿದ್ದಾರೆ. ಆದರೆ ಜಿಲ್ಲೆಯಲ್ಲಿ ಮಾತ್ರ ಅಧಿಕಾರಿಗಳು ನಿರ್ಲಕ್ಷ್ಯ ತೋರುವ ಮೂಲಕ ಸಂವಿಧಾನ ವಿರೋಧಿಗಳಂತೆ ವರ್ತಿಸುತ್ತಿದ್ದಾರೆ ಎಂದು ಕಿಡಿ ಕಾರಿದರು.
ಸರ್ಕಾರದ ಸುತ್ತೋಲೆ ಆಧರಿಸಿ ಸುಪ್ರೀಂ ಕೋರ್ಟ್ ಬೇಡ ಜಂಗಮರಿಗೆ ಬೇಡ ಜಂಗಮ ಜಾತಿ ಪ್ರಮಾಣ ಪತ್ರ ನೀಡಬೇಕೆಂದು ಆದೇಶಿಸಿದೆ. ಆದರೂ ಕೂಡ ಇಲ್ಲಿಯ ಅಧಿಕಾರಿಗಳು ಪ್ರಮಾಣ ಪತ್ರ ನೀಡುತ್ತಿಲ್ಲ. ಇದಕ್ಕೆ ಸಂಬಂಧಪಟ್ಟ ದಾಖಾಲಾತಿಗಳು ಲಭ್ಯವಿದ್ದು, ಈ ಬಗ್ಗೆ ಚರ್ಚೆಗೆ ನಾವು ಸಿದ್ದರಿದ್ದೇವೆ. ಆಡಳಿತ ಈಗಲೂ ಸ್ಪಂದಿಸದಿದ್ದರೆ ಮುಂದೆ ಅಹೋರಾತ್ರಿ ಧರಣಿ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಶಿವಯ್ಯ ಸ್ವಾಮಿ ಮಾತನಾಡಿ, ಬೇಡ ಜಂಗಮ ಜಾತಿ ಎಸ್‌ಸಿ ಪಟ್ಟಿಯಲ್ಲಿದ್ದರೂ ಸರ್ಕಾರಗಳು ಪ್ರಮಾಣ ಪತ್ರ ನೀಡುವಲ್ಲಿ ತಾರತಮ್ಯ ಮಾಡುತ್ತ ಬಂದಿವೆ. ಈ ಹಿಂದೆ ಇದರ ವಿರುದ್ಧ ಪ್ರತಿಭಟಿಸಿದಾಗ ಸರ್ಕಾರ ಎಚ್ಚೆತ್ತು ಬೇಡ ಜಂಗಮ ಜಾತಿ ಪ್ರಮಾಣ ಪತ್ರ ನೀಡುವಂತೆ ಸುತ್ತೋಲೆ ಹೊರಡಿಸಿತ್ತು. ಮತ್ತು ಸುಪ್ರೀಂ ಕೋರ್ಟ್ ಸಹ ಪ್ರಮಾಣ ಪತ್ರ ನೀಡುವಂತೆ ತೀರ್ಪು ನೀಡಿದೆ. ಆದರೆ, ಅಧಿಕಾರಿಗಳು ಇಲ್ಲಸಲ್ಲದ ನೆಪ ಹೇಳುತ್ತಿರುವುದು ಸರಿಯಲ್ಲ ಎಂದರು.
ಹಿರಿಯ ಪತ್ರಕರ್ತ ಸಿದ್ರಾಮಯ್ಯ ಸ್ವಾಮಿ ಮಾತನಾಡಿ, ಸಮಾಜ ಇಲ್ಲಿಯವರೆಗೆ ಜಾಗೃತವಾಗಿರಲ್ಲಿಲ್ಲ. ಆದರೆ, ಈಗ ಜಾಗೃತಗೊಂಡಿದ್ದು, ಇದಕ್ಕೆ ಸಮಾವೇಶವೇ ಸಾಕ್ಷಿ. ಈಗ ಸಮಾಜ ಒಗ್ಗಟ್ಟಾಗಿದ್ದು, ನಮ್ಮ ಬೇಡಿಕೆ ಈಡೇರಿಸಿಕೊಳ್ಳುವಲ್ಲಿ –ಯಶಸ್ವಿಯಾಗಲಿದ್ದೇವೆ ಎಂದು ಹೇಳಿದರು.
ನಾಗೇಂದ್ರ ಸ್ವಾಮಿ, ಬಸವರಾಜ ಸ್ವಾಮಿ, ಅಶೋಕ ಹಾಲಾ ಮಾತನಾಡಿದರು. ಜಿಪಂ ಸದಸ್ಯೆ ಮಂಜುಳಾ ಸ್ವಾಮಿ, ನಗರ ಸಭೆ ಸದಸ್ಯೆ ಗಂಗಮ್ಮಾ ಸ್ವಾಮಿ, ಗುಂಡಯ್ಯ ಸ್ವಾಮಿ, ವೈಜಿನಾಥ ಸ್ವಾಮಿ, ಪ್ರಭುಲಿಂಗ ಸ್ವಾಮಿ ಸೇರಿದಂತೆ ಮತ್ತಿತರರು ವೇದಿಕೆಯಲ್ಲಿದ್ದರು. ಶ್ರೀಕಾಂತ ಸ್ವಾಮಿ ನಿರೂಪಿಸಿದರು.