ಕಲಬುರಗಿ: ಸರ್ಕಾರದಲ್ಲಿನ ಆಗು- ಹೋಗುಗಳ ಕುರಿತಾಗಿ ಚರ್ಚಿಸಲು ಹಾಗೂ ಪರಿಹಾರ ಕಂಡುಕೊಳ್ಳುವ ನಿಟ್ಟಿನ ಸಮನ್ವಯ ಸಮಿತಿ ರಚನೆ ಅಗತ್ಯವಿಲ್ಲ ಎಂದು ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.
ಬಸವಕಲ್ಯಾಣ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳಲು ವಿಶೇಷ ವಿಮಾನ ಮೂಲಕ ಇಲ್ಲಿನ ವಿಮಾನ ನಿಲ್ದಾಣಕ್ಕೆ ಬಂದಿಳಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಸಿಎಂ ಹಾಗೂ ಸಚಿವರ- ಶಾಸಕರ ಜತಗೆ ಪಕ್ಷದ ನಡುವೆ ಸಮನ್ವಯತೆ ಸಾಧಿಸುವ ಸಮನ್ವಯ ಸಮಿತಿ ರಚನೆ ಅವಶ್ಯಕವಿಲ್ಲ. ಹಿರಿಯ ಸಚಿವ ಕೆ.ಎಸ್. ಈಶ್ವರಪ್ಪ ಅವರೊಂದಿಗೆ ಎರಡು ದಿನದೊಳಗೆ ಮಾತನಾಡುತ್ತೇನೆ. ಎಲ್ಲವೂ ಬಗೆಹರಿಯುತ್ತದೆ. ಒಂದು ಕುಟುಂಬದೊಳಗೆ ಸಣ್ಣ ಪುಟ್ಟ ವ್ಯತ್ಯಾಸ ಕಂಡು ಬರುತ್ತವೆ. ಇದು ಸಹ ಕುಟುಂಬದೊಳಗಿನ ಸಣ್ಣ ಭಿನ್ನಾಭಿಪ್ರಾಯವಿದು. ಎರಡು ದಿನದೊಳಗೆ ಎಲ್ಲಾ ಬಗೆಹರಿಯುತ್ತದೆ ಎಂದರು.
ನಮ್ಮಲ್ಲಿ (ಬಿಜೆಪಿ) ಹೊಗೆಯಾಡುತ್ತಿದೆ. ಆದರೆ ಕಾಂಗ್ರೆಸ್ ನಲ್ಲಿ ಬೆಂಕಿ ಬಿದ್ದರೂ ಕೆಪಿಸಿಸಿ ಅಧ್ಯಕ್ಷರೂ ತಮ್ಮ ವಿರುದ್ಧ ಮಾತನಾಡುತ್ತಾರೆ. ಅವರಲ್ಲೇ ಮುಂದಿನ ಸಿಎಂ ತಾವೇ ಎಂಬ ಗುದ್ದಾಟ ನಡೆದಿದೆ. ಅವರ ಪಕ್ಷದೊಳಗೆ ಎಲ್ಲ ಸರಿ ಮಾಡಿಕೊಂಡು ಟೀಕೆ ಮಾಡಲಿ ಎಂದು ಸವಾಲು ಹಾಕಿದರು.
ಬಸವಕಲ್ಯಾಣ, ಮಸ್ಕಿ ಹಾಗೂ ಬೆಳಗಾವಿ ಈ ಮೂರು ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಲಿದೆ. ಬಸವಕಲ್ಯಾಣದಲ್ಲಿನ ಭಿನ್ನಮತ ಎರಡು ದಿನ ಕಾದು ನೋಡಿ ಎಂದ ಪಕ್ಷದ ರಾಜ್ಯ ಅಧ್ಯಕ್ಷ ಕಟೀಲ್, ಎಲ್ಲ ಕ್ಷೇತ್ರಗಳಲ್ಲಿ ಪಕ್ಷದ ಉಸ್ತುವಾರಿ ಪಕ್ಣದ ಗೆಲುವಿಗೆ ಶ್ರಮಿಸುತ್ತಿದ್ದಾರೆ ಎಂದು ವಿವರಣೆ ನೀಡಿದರು.
ಆರ್ ಎಸ್ಎಸ್ ಹಾಗೂ ಬಿಜೆಪಿ ತತ್ವಗಳು ವಿಷಕಾರಿಯಾಗಿದ್ದರೆ ಏಕೆ ಬಿಜೆಪಿಯನ್ನು ಗೆಲ್ಲಿಸುತ್ತಿದ್ದರು ಎಂಬುದನ್ನು ರಾಜ್ಯ ಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅರಿತು ಮಾತನಾಡಲಿ. ದೇಶದಲ್ಲಿ ವಿರೋಧ ಪಕ್ಷದ ಸ್ಥಾನಮಾನದಷ್ಟು ಸಹ ಸೀಟುಗಳು ಬಾರದಿರುವ ಮಟ್ಟಿಗೆ ಜನ ಸೋಲಿಸಿದ್ದಾರೆಂದರೆ ಅವರ ತತ್ವಗಳು ಹೇಗಿವೆ ಎಂಬುದನ್ನೇ ಅರಿತು ಜನ ಉತ್ತರ ನೀಡಿದ್ದಾರೆ. ಅವರೂ ಸಹ ಸೋಲಲು ಕಾರಣವೇಕೆ? ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಕಟೀಲ್ ತಿರುಗೇಟು ನೀಡಿದರು.
ಸಚಿವ ವಿ.ಸೋಮಣ್ಣ, ಕೆಕೆಆರ್ ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ್, ಎನ್ಇಕೆಆರ್ ಟಿಸಿ ಅಧ್ಯಕ್ಷ ರಾಜಕುಮಾರ ಪಾಟೀಲ್ ತೇಲ್ಕೂರ, ಶಾಸಕರಾದ ಬಿ.ಜಿ.ಪಾಟೀಲ್, ಶಶೀಲ್ ಜಿ ನಮೋಶಿ, ಮಾಜಿ ಸಚಿವ ಬಾಬುರಾವ ಚಿಂಚನಸೂರ, ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ಸೇರಿದಂತೆ ಮುಂತಾದವರಿದ್ದರು.