Advertisement
ಕಂದಾಯ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಸೋಮವಾರ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಚಿವರು, ಮಳೆಹಾನಿ ಪರಿಹಾರ ಕಾರ್ಯವನ್ನು ತ್ವರಿತಗೊಳಿಸುವಂತೆ ಸೂಚಿಸಿದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲಾಧಿಕಾರಿಗಳ ಪಿ.ಡಿ. ಖಾತೆಯಲ್ಲಿ ಒಟ್ಟು 180.6 ಕೋಟಿ ರೂ. ಅನುದಾನ ಲಭ್ಯವಿದೆ. ಹೀಗಾಗಿ ಮಳೆಯಿಂದ ಜೀವಹಾನಿ, ನಷ್ಟ ಅಥವಾ ಹಾನಿಯಾದವರಿಗೆ ಪರಿಹಾರ ನೀಡಲು ಅನುದಾನದ ಕೊರತೆಯಿಲ್ಲ ಎಂದು ಹೇಳಿದರು.
Related Articles
ಮುಂಗಾರು ಆರಂಭವಾದ ಮೇಲೆ ಜೂ. 1ರಿಂದ 10ರವರೆಗೆ ರಾಜ್ಯದಲ್ಲಿ ವಾಡಿಕೆಗಿಂತ ಶೇ. 73ರಷ್ಟು ಹೆಚ್ಚು ಮಳೆಯಾಗಿದೆ. ಮುಂಗಾರು ಪೂರ್ವದಲ್ಲಿ ಅಂದರೆ 2018ರ ಮಾ. 1ರಿಂದ ಮೇ 31ರವರೆಗೆ ವಾಡಿಕೆಗಿಂತ ಶೇ. 54ರಷ್ಟು ಹೆಚ್ಚು ಮಳೆ ಬಿದ್ದಿದೆ. ಮುಂಗಾರು ಆರಂಭವಾದ ಮೇಲೆ ದಕ್ಷಿಣ ಒಳನಾಡಿನಲ್ಲಿ ವಾಡಿಕೆಗಿಂತ ಶೇ. 81, ಉತ್ತರ ಒಳನಾಡಿನಲ್ಲಿ ಶೇ. 87, ಮಲೆನಾಡಿನಲ್ಲಿ ಶೇ. 81, ಕರಾವಳಿಯಲ್ಲಿ ಶೇ. 51ರಷ್ಟು ಹೆಚ್ಚುವರಿ ಮಳೆಯಾಗಿದೆ ಎಂದು ಸಚಿವ ದೇಶಪಾಂಡೆ ವಿವರಿಸಿದರು.
Advertisement
104ರಲ್ಲಿ ಸಿಡಿಲು ಬಡಿದು ಸತ್ತವರು 94ಮುಂಗಾರು ಪೂರ್ವ ಮತ್ತು ನಂತರದ ಮಳೆ ವೇಳೆ ಒಟ್ಟು 104 ಮಂದಿ ಪ್ರಾಣ ಕಳೆದುಕೊಂಡಿದ್ದು, ಇದರಲ್ಲಿ ಸಿಡಿಲು ಬಡಿದು ಮೃತಪಟ್ಟವರೇ 94 ಮಂದಿ. ಉಳಿದ 10 ಜೀವಹಾನಿಗಳು ಮಳೆ ನೀರಿನಲ್ಲಿ ಕೊಚ್ಚಿಹೋಗಿದ್ದರಿಂದ ಮತ್ತು ಮರ ಅಥವಾ ಗೋಡೆ ಕುಸಿತದಿಂದ ಸಂಭವಿಸಿದೆ. ಸಿಡಿಲು ಬಡಿದು ಇಷ್ಟೊಂದು ಪ್ರಮಾಣದಲ್ಲಿ ಮಾನವ ಜೀವಹಾನಿಯಾಗಿರುವುದು ಇತ್ತೀಚಿನ ವರ್ಷಗಳಲ್ಲಿ ಇದೇ ಪ್ರಥಮ. ಸೋಮವಾರ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಕಂದಾಯ ಸಚಿವ ಆರ್.ವಿ.ದೇಶಪಾಂಡೆ, ಮಳೆ ಮತ್ತು ಸಿಡಿಲಿನಿಂದಾಗಿ 104 ಮಂದಿ ಮೃತಪಟ್ಟಿರುವುದಲ್ಲದೆ, 332 ಪ್ರಾಣಿಗಳು ಸಾವನ್ನಪ್ಪಿವೆ. 2298 ಮನೆಗಳು ಹಾನಿಯಾಗಿದ್ದು, ಒಟ್ಟು 186.54 ಕೋಟಿ ರೂ. ನಷ್ಟ ಅಂದಾಜು ಮಾಡಲಾಗಿದೆ. ಬೆಳೆಹಾನಿ ಕುರಿತಂತೆ ಇನ್ನೂ ಲೆಕ್ಕ ಸಿಕ್ಕಿಲ್ಲ. ಇದುವರೆಗೆ ಪರಿಹಾರವಾಗಿ 8.63 ಕೋಟಿ ರೂ. ಫಲಾನುಭವಿಗಳಿಗೆ ವಿತರಿಸಲಾಗಿದೆ ಎಂದರು. ಮಳೆ ಅಥವಾ ಸಿಡಿಲಿನಿಂದ ಜೀವಹಾನಿಗೊಳಗಾದ ವ್ಯಕ್ತಿಯ ವಾರಸುದಾರರಿಗೆ 4 ಲಕ್ಷ ರೂ.ನಂತೆ ಅಘಾತ ಸಂಭವಿಸಿದ 48 ಗಂಟೆಯಲ್ಲಿ ಪರಿಹಾರ ನೀಡಲಾಗಿದೆ. ಅದೇ ರೀತಿ ಭಾಗಷಃ ಹಾನಿಯಾಗಿರುವ 2,101 ಮನೆಗಳಿಗೆ 5,200 ರೂ.ನಂತೆ ಹಾಗು ಪೂರ್ಣ ಹಾನಿಗೊಳಗಾದ 189 ಮನೆಗಳಿಗೆ 95,100 ರೂ.ನಂತೆ ಪರಿಹಾರ ವಿತರಿಸಲಾಗಿದೆ. ಮೃತಪಟ್ಟಿರುವ 332 ಜಾನುವಾರುಗಳ ಮಾಲೀಕರಿಗೆ ತಲಾ 25 ಸಾವಿರ ರೂ.ನಂತೆ ಪರಿಹಾರ ಒದಗಿಸಲಾಗಿದೆ ಎಂದು ವಿವರಿಸಿದರು.