ಮುಂಬಯಿ: ಕೋವಿಡ್-19 ಹೆಚ್ಚುತ್ತಿರುವ ಕಾರಣ ಪ್ರಸಕ್ತ ಋತುವಿನ ವಿಜಯ್ ಹಜಾರೆ, ದುಲೀಪ್ ಟ್ರೋಫಿ ಮತ್ತು ದೇವಧರ್ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಗನ್ನು ರದ್ದುಗೊಳಿಸುವುದು ಒಳ್ಳೆಯದು ಎಂಬುದಾಗಿ ಭಾರತದ ಮಾಜಿ ಆರಂಭಕಾರ ವಾಸಿಮ್ ಜಾಫರ್ ಅಭಿಪ್ರಾಯಪಟ್ಟಿದ್ದಾರೆ. ಇದರ ಬದಲು ರಣಜಿ ಟ್ರೋಫಿ ಮತ್ತು ಸಯ್ಯದ್ ಮುಷ್ತಾಕ್ ಅಲಿ ಟಿ20 ಕೂಟಗಳನ್ನು ಪೂರ್ಣ ಪ್ರಮಾಣದಲ್ಲಿ ನಡೆಸಬೇಕು ಎಂದಿದ್ದಾರೆ.
ಮೊದಲು ಐಪಿಎಲ್
“ಕ್ರಿಕೆಟ್ ಯಾವತ್ತೇ ಆರಂಭಗೊಳ್ಳಲಿ, ಬಿಸಿಸಿಐ ಐಪಿಎಲ್ ಆಯೋಜನೆಗೆ ಮೊದಲ ಆದ್ಯತೆ ನೀಡಬೇಕು. ಐಪಿಎಲ್‌ನಿಂದಲೇ ಭಾರತದ ಕ್ರಿಕೆಟ್ ಋತುವನ್ನು ಆರಂಭಿಸಿದರೂ ಅಡ್ಡಿಯಿಲ್ಲ. ಇದು ಮುಗಿದ ಬಳಿಕ ಬಿಸಿಸಿಐ ದೇಶಿ ಕ್ರಿಕೆಟ್ ಕೂಟಗಳ ಆರಂಭಕ್ಕೆ ಮುಂದಡಿ ಇಡಬಹುದು…’ ಎಂದರು.
“ಮೊದಲು ಇರಾನಿ ಕಪ್ ಪಂದ್ಯದತ್ತ ಗಮನ ನೀಡಬೇಕು. ಏಕೆಂದರೆ, ಸೌರಾಷ್ಟ್ರ ಮೊದಲ ಸಲ ರಣಜಿ ಚಾಂಪಿಯನ್ ಆಗಿದೆ. ಹಾಗೆಯೇ ದುಲೀಪ್ ಟ್ರೋಫಿ, ದೇವಧರ್ ಟ್ರೋಫಿ ಕೂಟಗಳನ್ನು ಕೈಬಿಡುವುದು ಒಳ್ಳೆಯದು. ಮುಂದಿನ ವರ್ಷದ ಐಪಿಎಲ್ ಹರಾಜನ್ನು ಗಮನದಲ್ಲಿರಿಸಿ ಸಯ್ಯದ್ ಮುಷ್ತಾಕ್ ಅಲಿ ಟಿ20 ಕೂಟಕ್ಕೆ ಆದ್ಯತೆ ನೀಡಬೇಕು. ಇದರೊಂದಿಗೆ ರಣಜಿ ಟ್ರೋಫಿ ನಡೆಯಬೇಕು. ತರಾತುರಿಯಲ್ಲಿ ಎಲ್ಲ ಕೂಟಗಳನ್ನು ನಡೆಸುವ ಅಗತ್ಯ ಇಲ್ಲ’ ಎಂಬುದಾಗಿ ಜಾಫರ್ ಹೇಳಿದರು.