ಇನ್ನೊಮ್ಮೆ ದೇಶಕ್ಕೆ ಕೊರೊನಾ ಅಲೆ ಬಡಿದಿದೆ. ಹಿಂದಿನ ಮೊದಲ ಅಲೆಗೆ ಹೋಲಿಸಿದರೆ ಈ ಬಾರಿಯ ಎರಡನೇ ಅಲೆ ತೀವ್ರಗತಿಯಲ್ಲಿ ಪ್ರಸಾರವಾಗುತ್ತಿದ್ದು, ಹಿಂದಿನ ಸಲಕ್ಕಿಂತ ಹೆಚ್ಚು ಗಂಭೀರವಾಗಿಯೂ ಕಾಣಿಸುತ್ತಿದೆ, ಆಶ್ಚರ್ಯವೆಂದರೆ, ಸಾರ್ವಜನಿಕರಲ್ಲಿ ಮಾತ್ರ ಈ ಬಗ್ಗೆ ಅಷ್ಟೊಂದು ಗಾಂಭೀರ್ಯತೆ ಕಾಣಿಸುತ್ತಿಲ್ಲ. ಎಲ್ಲವೂ ಸಹಜವಾಗಿಯೇ ಇದೆ ಎಂಬಂತೆ ಸಾರ್ವಜನಿಕರು ವರ್ತಿಸುತ್ತಿರುವುದು ಅಪಾಯಕಾರಿ.
ಹಾಗೆ ನೋಡಿದರೆ, ಕೊರೊನಾ ಭಯಪಡುವಂಥ ಸಮಸ್ಯೆ ಅಲ್ಲ. ಆದರೆ ಎಚ್ಚರಿಕೆಯಿಂದ ಬದುಕು ಸಾಗಿಸುವ ಅನಿವಾರ್ಯತೆಯಂತೂ ಇದೆ. ಇತರೆ ಫ್ಲೂಗಳಂತೆಯೇ ಇದು ಸಾಮಾನ್ಯ ಜ್ವರ, ನೆಗಡಿ ಕೆಮ್ಮನ್ನು ತರಬಲ್ಲಂಥ ವೈರಸ್ ಆಗಿದ್ದು, ರೋಗ ನಿರೋಧಕ ಶಕ್ತಿ ವೃದ್ಧಿಗೊಳಿಸುವ ಮೂಲಕ ವೈರಸ್‌ನ್ನು ಹಿಮ್ಮೆಟ್ಟಿಸುವ ಆ್ಯಂಟಿಬಾಡಿಗಳನ್ನು ನಮ್ಮ ದೇಹದಲ್ಲಿ ಹೆಚ್ಚಿಸಿ ಕೊರೊನಾವನ್ನು ಮಣಿಸಲು ಸಾಧ್ಯವಿದೆ. ಇದು ಸಾಬೀತಾಗಿದೆ ಕೂಡ. ಲಕ್ಷಾಂತರ ಮಂದಿ ಕೊರೊನಾ ಸೋಂಕು ಪೀಡಿತರು ಗುಣ ಮುಖ ರಾಗಿ ಎಂದಿನಂತೆ ತಮ್ಮ ದೈನಂದಿನ ಬದುಕಿನಲ್ಲಿ ನಿರತರಾಗಿದ್ದಾರೆ. ಇದಕ್ಕೆ ಬೇಕಿರುವುದು ನಿಯಮಿತವಾಗಿ ವೈದ್ಯರು ಸೂಚಿಸಿದ ಔಷಧಿಗಳ ಸೇವನೆ ಮತ್ತು ಇನ್ನೊಬ್ಬರಿಗೆ ಹರಡದಂತೆ ಕೆಲ ದಿನಗಳ ಕಾಲ ಪ್ರತ್ಯೇಕವಾಸ. ಆದರೆ ಇದಿಷ್ಟನ್ನೂ ಪಾಲಿಸದೆ ಇರುವವವರ ಸಂಖ್ಯೆಯೂ ನಮ್ಮಲ್ಲಿ ಹೆಚ್ಚಿದೆ. ಅದರಲ್ಲೂ ಹೃದ್ರೋಗ, ಮಧುಮೇಹ ಮತ್ತಿತರೆ ಪೂರ್ವ ಆರೋಗ್ಯ ಸಮಸ್ಯೆಗಳಿರುವವರು ಇನ್ನಷ್ಟು ಎಚ್ಚರಿಕೆಯಿಂದ ಇರಬೇಕಿದೆ.
ಹಿಂದಿನ ಅಲೆಗೆ ಹೋಲಿಸಿದರೆ, ಈ ಸಲ ಹೆಚ್ಚಿನ ಸಂಖ್ಯೆಯಲ್ಲಿ ಯುವಜನರು ಸೋಂಕಿಗೆ ಗುರಿಯಾಗುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ, ಅದರಲ್ಲೂ ಒಂದು ಮನೆಯಲ್ಲಿ ಒಬ್ಬರಿಗೆ ಸೋಂಕು ತಗುಲಿತೆಂದರೆ, ಮನೆಯಲ್ಲಿರುವ ಎಲ್ಲರಿಗೂ ಅದು ಸಹಜವಾಗಿಯೇ ಪ್ರಸರಣಗೊಳ್ಳುತ್ತಿದೆ. ಈ ಕಾರಣಕ್ಕೇ ರಾಜ್ಯದಲ್ಲಿ ಸೋಂಕಿನ ಪ್ರಮಾಣ ತೀವ್ರಗತಿಯಲ್ಲಿ ಏರಿಕೆಯಾಗುತ್ತಿರುವುದನ್ನು ನಾವು ಗಮನಿಸಬಹುದು. ನಾವು ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶ ಎಂದರೆ, ತಿಳಿವಳಿಕೆ ಇರುವ ವಿದ್ಯಾವಂತರೂ ಸಹ ಸೋಂಕಿನ ಬಗ್ಗ ನಿರ್ಲಕ್ಷ್ಯ ವಹಿಸುತ್ತಿರು ವುದು. ಯುವಸಮೂಹ ಈ ವೈರಸ್ ಬಗ್ಗೆ ಕೊಂಚ ಲಘುವಾಗಿ ವರ್ತಿಸುತ್ತಿದೆ ಎಂದರೆ ಅತಿಶಯೋಕ್ತಿಯಾಗಲಿಕ್ಕಿಲ್ಲ, ಮಾಸ್ಕ್ ಧರಿಸದೆ ಇರುವುದು, ದೈಹಿಕ ಅಂತರ ಕಾಪಾಡಿಕೊಳ್ಳದೆ ಇರುವುದು ಈ ವೈರಸ್ ವೇಗವಾಗಿ ಹರಡಲು ಪ್ರಮುಖ ಕಾರಣ. ಜತೆಗೆ, ವೈದ್ಯರ ಸಲಹೆಯನ್ನು ಉಡಾಫೆಯಿಂದ ಸ್ವೀಕರಿಸುವ ಮನೋವೃತ್ತಿ ಕಾಣಿಸುತ್ತಿದೆ. ಎಚ್ಚರಿಕೆ ಯಿಂದ ಇರಿ ಎಂದಾಕ್ಷಣ ವೈದ್ಯ ಸಮೂಹ ತಮ್ಮ ಸ್ವಾರ್ಥಕ್ಕಾಗಿ ಹೆದರಿಸುತ್ತಿದೆ ಎಂದು ಹೇಳುವ ಮೂಲಕ ತಮ್ಮ ಆರೋಗ್ಯವನ್ನು ಕಡೆಗಣಿಸುತ್ತಿರುವುದು ಎದ್ದು ಕಾಣುತ್ತಿದೆ. ವೈದ್ಯರನ್ನೇ ಖಳನಾಯಕರಂತೆ ಕಾಣುವ ಮೂಲಕ ಸಮಾಜದ ಸ್ವಾಸ್ಥ್ಯವನ್ನು ಹಾಳುಗೆಡವುವ ಪ್ರಯತ್ನ ನಮ್ಮಲ್ಲಿ ಕಾಣಿಸುತ್ತಿದೆ, ಹಾಗೆಯೇ, ಸಾಮಾಜಿಕ ಜಾಲತಾಣದ ಮೂಲಕ ಸುಳ್ಳುಸುದ್ದಿಗಳು, ಅಪಪ್ರಚಾರಗಳನ್ನು ಹಬ್ಬಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇಂಥದಕ್ಕೆ ಕಡಿವಾಣ ಹಾಕುವ ಅಗತ್ಯ ಇದೆ.
ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಮನೆಯಲ್ಲೇ ಚಿಕಿತ್ಸೆ ಪಡೆಯುವವರ ಸಂಖ್ಯೆ ಹೆಚ್ಚಿದ್ದು, ಸರಕಾರವೂ ಅದನ್ನು ಉತ್ತೇಜಿಸುತ್ತಿದೆ. ಹೀಗಾಗಿ ಜ್ವರ, ಶೀತದ ಲಕ್ಷಣ ಕಂಡುಬಂದ ಕೂಡಲೇ ಸಮೀಪದ ವೈದ್ಯ ರನ್ನು ಸಂಪರ್ಕಿಸಿ ಪರೀಕ್ಷೆಗೆ ಒಳಪಡುವುದು ಸೂಕ್ತ. ನಿರ್ಲಕ್ಷಿಸಿದರೆ ಬೇರೆ ರೀತಿಯ ಸಮಸ್ಯೆ ಎದುರಾಗುವ ಅಪಾಯವೂ ಇದೆ. ಗುಣಲಕ್ಷಣಗಳು ಮಂದಗತಿಯಲ್ಲಿದ್ದರೆ, ಉಸಿರಾಟದ ಸಮಸ್ಯೆ ಇಲ್ಲದೆ ಇದ್ದರೆ ಮನೆಯಲ್ಲಿ ದ್ದು ಕೊಂಡೇ ಚಿಕಿತ್ಸೆ ಪಡೆಯಬಹುದು. ಸದ್ಯದ ಅಂಕಿಅಂಶಗಳ ಪ್ರಕಾರ ಗುಣಮುಖರಾಗುವವರ ಪ್ರಮಾಣ ಹೆಚ್ಚಿದ್ದು, ಸಾವಿನ ಪ್ರಮಾಣ ಕಡಿ ಮೆ ಇದೆ. ಹಾಗೆಂದು ನಿರಾಳರಾಗಿರಬೇಕೆಂದು ಅರ್ಥವಲ್ಲ. ಸಮಸ್ಯೆ ಮ ತ್ತಷ್ಟು ಬಿಗಡಾಯಿಸದಂತೆ ನೋಡಿಕೊಳ್ಳುವುದು ಎಲ್ಲರ ಹೊಣೆಗಾರಿಕೆ.
ಲಾಕ್‌ಡೌನ್ ಬೇಕಿಲ್ಲ
ಈ ಸಮಸ್ಯೆಯನ್ನು ನಿವಾರಿಸಲು ಲಾಕ್‌ಡೌನ್ ಅನಿವಾರ್ಯ ಎಂಬ ವಾದಗಳು ಕೇಳಿಬರುತ್ತಿವೆ. ಆದರೆ ಲಾಕ್‌ಡೌನ್ ಮಾಡುವ ಮೂಲಕ ಇಡೀ ಆರ್ಥಿಕ ಚಟುವಟಿಕೆಗೆ ಕಡಿವಾಣ ಹಾಕುವುದು ಈಗಿನ ಕಾಲಘಟ್ಟದಲ್ಲಿ ಅಷ್ಟೊಂದು ಸೂಕ್ತವಾದ ನಿರ್ಧಾರ ಆಗಲಿಕ್ಕಿಲ್ಲ. ಅದರಲ್ಲೂ ಈಗ ಘೋಷಿಸಲಾಗಿರುವ ನೈಟ್ ಕರ್ಫ್ಯೂ ಹೆಚ್ಚೇನೂ ಪರಿಣಾಮಕಾರಿಯಲ್ಲದ ಕ್ರಮ, ಈಗ ಮುಖ್ಯವಾಗಿ ಬೇಕಿರುವುದು ಹೆಚ್ಚು ಜನಸಂದಣಿ ಸೇರುವ ಎಲ್ಲ ಕಾರ್ಯಕ್ರಮಗಳನ್ನು ರದ್ದುಡಿಸುವುದು. ಅದರಲ್ಲೂ ಎಗ್ಗಿಲ್ಲದೆ ನಡೆಯುತ್ತಿರುವ ಚುನಾವಣ ರ‍್ಯಾಲಿಗಳನ್ನು ನಿಷೇಧಿಸಲೇಬೇಕು, ಇಲ್ಲಿ ಅತಿ ವೇಗವಾಗಿ ಸೋಂಕು ಹಬ್ಬುತ್ತಿದೆ. ಹಾಗೆಯೇ, ಹೆಚ್ಚುಜನ ಸೇರುವ ಸಮಾರಂಭಗಳು, ಜಾತ್ರೆಗಳನ್ನು ಸರಳವಾಗಿ ಆಚರಿಸುವುದು, ಇಲ್ಲವೇ ಮುಂದೂಡುವುದು ಅತ್ಯಂತ ಸೂಕ್ತವಾದ ಹಾಗೂ ಬುದ್ಧಿವಂತಿಕೆಯ ನಿರ್ಧಾರ. ಇವುಗಳ ಅನುಷ್ಠಾನಕ್ಕೆ ಸರಕಾರ ಗಮನಹರಿಸಬೇಕು. ಹಾಗೆಯೇ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವೂ ಆಗಬೇಕು.
– ಡಾ| ಗೌತಮ್ ಆರ್ ಚೌಧರಿ, ಶಸ್ತ್ರಚಿಕಿತ್ಸಕರು, ಬೆಂಗಳೂರು