Advertisement

ಚುನಾವಣಾ ಅಕ್ರಮಕ್ಕೆ ಅವಕಾಶ ಬೇಡ

06:13 PM Dec 04, 2021 | Team Udayavani |

ಗದಗ: ಧಾರವಾಡ ಸ್ಥಳೀಯ ಸಂಸ್ಥೆಗಳ ಪ್ರಾಧಿಕಾರಗಳ ಕ್ಷೇತ್ರಕ್ಕೆ ದ್ವೈವಾರ್ಷಿಕ ಚುನಾವಣೆಯ ಮತದಾನದ ದಿನದಂದು ಮೈಕ್ರೋ ಆಬ್ಸರ್ವರ್ಗಳು ಚುನಾವಣಾ ಆಯೋಗದ ನಿರ್ದೇಶನದಂತೆ ತಮ್ಮ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುವದರ ಮೂಲಕ ಮತದಾನ ಪ್ರಕ್ರಿಯೆಯನ್ನು ಶಾಂತಿಯುತವಾಗಿ ಯಶಸ್ವಿಗೊಳಿಸಬೇಕೆಂದು ಸಹಕಾರ ಇಲಾಖೆ ಪ್ರಧಾನ ಕಾರ್ಯದರ್ಶಿಗಳು ಹಾಗೂ ಧಾರವಾಡ ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ಚುನಾವಣಾ ಸಾಮಾನ್ಯ ವೀಕ್ಷಕ ಎಸ್‌.ಆರ್‌. ಉಮಾಶಂಕರ ತಿಳಿಸಿದರು.

Advertisement

ಜಿಲ್ಲಾಡಳಿತ ಭವನದ ಮುಖ್ಯ ಸಭಾಂಗಣದಲ್ಲಿ ಶುಕ್ರವಾರ ನಡೆದ ಧಾರವಾಡ ಸ್ಥಳೀಯ ಸಂಸ್ಥೆಗಳ ಪ್ರಾಧಿಕಾರಗಳ ಕ್ಷೇತ್ರಕ್ಕೆ ನಿಯೋಜಿಸಲಾದ ಮೈಕ್ರೋ ಆಬ್ಸರ್ವರ್, ವಿಡಿಯೋ ಗ್ರಾಫರ್‌ಗಳಿಗೆ ನಡೆದ ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಚುನಾವಣಾ ಅಕ್ರಮಗಳಿಗೆ ಆಸ್ಪದ ನೀಡದಂತೆ ನಿಗಾ ವಹಿಸಬೇಕು. ಮತದಾನದ ದಿನದಂದು ಗುರುತಿನ ಚೀಟಿಗಳನ್ನು ಹೊಂದಿದವರನ್ನು ಮಾತ್ರ ಮತಗಟ್ಟೆ ಪ್ರವೇಶಿಸಲು ಅನುಮತಿಸಬೇಕು. ಚುನಾವಣೆಯಲ್ಲಿ ಗ್ರಾಪಂ, ಪಪಂ ಹಾಗೂ ಪುರಸಭೆಗಳ ಚುನಾಯಿತ ಜನಪ್ರತಿನಿಧಿಗಳು ಮತದಾರರಾಗಿದ್ದು, ಮತದಾನದ ದಿನದಂದು ಮತ ಚಲಾವಣೆಗೆ ಆಗಮಿಸುವ ಮತದಾರರ ಹೆಸರು, ಹುಟ್ಟಿದ ದಿನಾಂಕಗಳು ಮತ ಪಟ್ಟಿಯೊಂದಿಗೆ ತಾಳೆಯಾಗುತ್ತದೆಯೇ ಎಂಬುದನ್ನು ಕೂಲಂಕಷವಾಗಿ ಪರಿಶೀಲಿಸಬೇಕು ಎಂದು ಹೇಳಿದರು.

ಮತದಾನದ ದಿನದಂದು ನಿಗದಿತ ಮತದಾನ ಸಮಯಕ್ಕೆ ಮುಂಚಿತವಾಗಿ ಮತಗಟ್ಟೆಗಳಿಗೆ ಭೇಟಿ ನೀಡಿ, ಅಲ್ಲಿಯ ವ್ಯವಸ್ಥೆಗಳನ್ನು ಪರಿಶೀಲಿಸಬೇಕು. ಹಾಗೂ ಮತದಾನ ಪೂರ್ಣಗೊಂಡ ನಂತರ ನಿಗದಿತ ನಮೂನೆಯಲ್ಲಿ ವರದಿಯನ್ನು ಸಲ್ಲಿಸಬೇಕು. ಒಟ್ಟಾರೆಯಾಗಿ ಮೈಕ್ರೋ ಆಬ್ಸರ್ವರ್‌ಗಳಿಗೆ ಒದಗಿಸಲಾದ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುವುದರ ಮೂಲಕ ಮತದಾನ ಪ್ರಕ್ರಿಯೆ ಯಶಸ್ವಿಯಾಗಿ ಪೂರ್ಣಗೊಳಿಸುವಂತೆ ತಿಳಿಸಿದರು.

ಜಿಲ್ಲಾಧಿಕಾರಿ ಎಂ.ಸುಂದರೇಶ್‌ ಬಾಬು ಮಾತನಾಡಿ, ಧಾರವಾಡ ಸ್ಥಳೀಯ ಸಂಸ್ಥೆಗಳ ಪ್ರಾಧಿಕಾರಗಳ ಕ್ಷೇತ್ರಕ್ಕೆ ಚುನಾವಣೆಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ 1967 ಮತದಾರರಿದ್ದು, 130 ಮತಗಟ್ಟೆಗಳನ್ನು ತೆರೆಯಲಾಗಿದೆ. ಮತದಾನದ ದಿನದಂದು ತಮ್ಮ ಮೇಲೆ ಗುರುತರ ಜವಾಬ್ದಾರಿಯಿದ್ದು, ಮತದಾನದ ಪ್ರಕ್ರಿಯೆ ಶಾಂತಿಯುತವಾಗಿ ನಡೆಯುತ್ತಿದೆಯೇ ಎಂಬುದನ್ನು ಪರಿಶೀಲಿಸಬೇಕು.

Advertisement

ಉಳಿದ ಚುನಾವಣೆಗಳಿಗಿಂತ ಈ ಚುನಾವಣೆ ಭಿನ್ನವಾಗಿದ್ದು, ಮೈಕ್ರೋ ಆಬ್ಸರ್ವರ್‌ ಗಳು ಉದಾಸೀನತೆ ತೋರದೇ ಚುನಾವಣಾ ಆಯೋಗದ ನಿರ್ದೇಶನಗಳನ್ವಯ ಚುನಾವಣಾ ಪ್ರಕ್ರಿಯೆ ನಡೆಯುತ್ತಿದೆಯೇ ಎಂಬುದರ ಕುರಿತು ನಿಗಾ ವಹಿಸಬೇಕು. ಒಟ್ಟಾರೆಯಾಗಿ ತಮಗೆ ವಹಿಸಲಾದ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕೆಂದು ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು. ಪ್ರಾಚಾರ್ಯ ಬಸವರಾಜ ಗಿರಿತಿಮ್ಮನ್ನವರ ಅವರು ಸಂಪನ್ಮೂಲ ವ್ಯಕ್ತಿಗಳಾಗಿ, ಮತದಾನದ ದಿನದಂದು ಮೈಕ್ರೋ ಆಬ್ಸರ್ವರ್ ಹಾಗೂ ವಿಡಿಯೋ ಗ್ರಾಫರ್‌ಗಳ ಜವಾಬ್ದಾರಿಗಳ ಕುರಿತು ತರಬೇತಿ ನೀಡಿದರು. ಜಿಪಂ ಸಿಇಒ ಭರತ ಎಸ್‌., ಅಪರ ಜಿಲ್ಲಾ ಧಿಕಾರಿ ಎಂ.ಸತೀಶ್‌ ಕುಮಾರ, ಉಪವಿಭಾಗಾ ಧಿಕಾರಿ ರಾಯಪ್ಪ ಹುಣಸಗಿ ಸೇರಿದಂತೆ ಮೈಕ್ರೋ ಆಬ್ಸರ್ವರ್ ಹಾಗೂ ವಿಡೀಯೊ ಗ್ರಾಫರ್ ತರಬೇತಿಯಲ್ಲಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next