Advertisement

ಮೈತ್ರಿ ಮಾಡಿಕೊಳ್ಳುವ ಅಗತ್ಯವಿರುವುದಿಲ್ಲ: ಗೋವಾದಲ್ಲಿ ರಾಹುಲ್ ವಿಶ್ವಾಸ

06:20 PM Feb 11, 2022 | Team Udayavani |

ಪಣಜಿ: ಪ್ರಸಕ್ತ ಗೋವಾ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಬಹುಮತ ಪಡೆಯುವುದು ಖಚಿತ, ಚುನಾವಣಾ ಫಲಿತಾಂಶ ಬಂದ ನಂತರ ರಾಜ್ಯದಲ್ಲಿ ಸರ್ಕಾರ ರಚನೆಗೆ ತ್ವರಿತ ಕ್ರಮ ಕೈಗೊಳ್ಳುತ್ತೇವೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

Advertisement

ಮಡಗಾಂವ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು, ಗೋವಾದಲ್ಲಿ ಬಿಜೆಪಿ ವಿರೋಧಿ ಪಕ್ಷಗಳೊಂದಿಗೆ ಕಾಂಗ್ರೇಸ್ ಪಕ್ಷ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಲಿದೆಯೇ..? ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿ, ಜನರಿಂದ ಆಶೀರ್ವಾದ ಸಿಗುತ್ತದೆ. ಯಾವುದೇ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವ ಅಗತ್ಯವಿರುವುದಿಲ್ಲ. ನಾವು ಅಧಿಕಾರಕ್ಕೆ ಬಂದ ನಂತರ ಗೋವಾದ ಜನತೆಗೆ ನೇರವಾಗಿ ಅನುಕೂಲವಾಗುವ ಹಲವು ಯೋಜನೆಗಳನ್ನು ಜಾರಿಗೆ ತರುತ್ತೇವೆ ಎಂದರು.

ಕಳೆದ 5 ವರ್ಷಗಳಲ್ಲಿ ಬಿಜೆಪಿ ಗೋವಾದಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ. ಇಷ್ಟೇ ಅಲ್ಲದೆಯೇ 2017 ರಲ್ಲಿ ಬಿಜೆಪಿಯು ಜನಾದೇಶಕ್ಕೆ ಅಗೌರವ ತೋರಿಸಿದೆ. ಹಣದ ಬಲದಿಂದ ಕಾಂಗ್ರೆಸ್ ಶಾಸಕರನ್ನು ತಮ್ಮ ಪಕ್ಷಕ್ಕೆ ಕರೆದುಕೊಂಡಿದೆ. ಅದರೆ ಈ ಬಾರಿ ಹಾಗಾಗುವುದಿಲ್ಲ. ಗೋವಾ ರಾಜ್ಯವನ್ನು ಕಲ್ಲಿದ್ದಲು ಹಬ್ ಆಗಲು ನಾವು ಬಿಡುವುದಿಲ್ಲ. ಗೋವಾದಲ್ಲಿ ನಾವು ಗಣಿಗಾರಿಕೆಯನ್ನು ಕಾನೂನಾತ್ಮಕವಾಗಿ ಪುನರಾರಂಭಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಗೋವಾದಲ್ಲಿ ಹಲವು ಸಮಸ್ಯೆಗಳಿವೆ. ನಿರುದ್ಯೋಗ ಮತ್ತು  ಭ್ರಷ್ಟಾಚಾರ ಇವು ಪ್ರಮುಖ ಸಮಸ್ಯೆಗಳಾಗಿದೆ. ನಮ್ಮ ಪ್ರಣಾಳಿಕೆಯಲ್ಲಿ ಹೇಳಿರುವ ಎಲ್ಲ ಯೋಜನೆಗಳನ್ನು ಗೋವಾದಲ್ಲಿ ಜಾರಿಗೊಳಿಸುತ್ತೇವೆ. ಇದು ಖಂಡಿತವಾಗಿಯೂ ಗೋವಾದಲ್ಲಿ ಅಭಿವೃದ್ಧಿಗೆ ಕಾರಣವಾಗುತ್ತದೆ ಎಂದರು.

ಪ್ರಧಾನಿ ನರೇಂದ್ರ ಮೋದಿಯವರು ಗೋವಾಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ತಮ್ಮ ಭಾಷಣದಲ್ಲಿ ಪರಿಸರದ ವಿಚಾರಗಳ ಬಗ್ಗೆ ಮಾತನಾಡಲೇ ಇಲ್ಲ. ಜನರ ದಿಕ್ಕು ತಪ್ಪಿಸುವ ಉದ್ದೇಶದಿಂದ ಅವರು ಗೋವಾಕ್ಕೆ ಬಂದಿದ್ದರು. ಗೋವಾದ ಯುವಕರಿಗೆ ಉದ್ಯೋಗ ನೀಡಿದ್ದೇನೆ ಎಂದು ಪ್ರಧಾನಿಗಳು ಹೇಳುವಂತಿಲ್ಲ ಎಂದು ಪ್ರಧಾನಿ ಗೋವಾ ಭೇಟಿಯನ್ನು ಟೀಕಿಸಿದರು.

Advertisement

ಗೋವಾ ಸ್ವಾತಂತ್ರ್ಯಗೊಳ್ಳಲು ಕಾಂಗ್ರೆಸ್ ಪಕ್ಷ ವಿಳಂಬ ಮಾಡಿದೆ ಎಂಬ ಪ್ರಧಾನಿಗಳ ಹೇಳಿಕೆಗೆ ಪ್ರತಿಕ್ರಿಯಿಸಿದ ರಾಹುಲ್ ಗಾಂಧಿ, ಮೋದಿಗೆ ಇತಿಹಾಸ ಗೊತ್ತಿಲ್ಲ. ಗೋವಾದ ಜನತೆ ಅಭಿವೃದ್ಧಿ ಬಯಸಿದ್ದಾರೆ. ನರೇಂದ್ರ ಮೋದಿ ಮತ್ತು ಅವರ ಸರ್ಕಾರ ಗೋವಾಕ್ಕೆ ಏನೂ ಮಾಡಿಲ್ಲ ಎಂದು ಆರೋಪಿಸಿದರು.

ಹಿಜಾಬ್ ವಿವಾದ : ಉತ್ತರಿಸಲು ನಿರಾಕರಿಸಿದ ರಾಹುಲ್

ಪ್ರಸಕ್ತ ಗೋವಾ ಚುನಾವಣೆಯಲ್ಲಿ ಹೊಸ ಮುಖಗಳಿಗೆ ಅವಕಾಶ ನೀಡಿದ್ದೇವೆ. ಪಕ್ಷಾಂತರ ಮಾಡಿದ ನಾಯಕರಿಗೆ ನಾವು ಪಕ್ಷದಲ್ಲಿ ಸ್ಥಾನ ನೀಡಿಲ್ಲ. ನಮ್ಮ ಅಭ್ಯರ್ಥಿಗಳ ಮೇಲೆ ನಮಗೆ ಪೂರ್ಣ ನಂಬಿಕೆಯಿದೆ. ಎಲ್ಲರೂ ಒಟ್ಟಾಗಿ ಕೆಲಸ ಮಾಡುತ್ತೇವೆ ಎಂದು ಹೇಳಿದ ರಾಹುಲ್ ಗಾಂಧಿ, ಪತ್ರಕರ್ತರು ಹಿಜಾಬ್ ವಿವಾದದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿ ನಾನು ಗೋವಾದ ಬಗ್ಗೆ ಮಾತನಾಡಲು ಬಂದಿದ್ದೇನೆ ಎಂದರು.

ಈ ಪತ್ರಿಕಾಗೋಷ್ಠಿಯಲ್ಲಿ ಗೋವಾ ಪ್ರದೇಶ ಕಾಂಗ್ರೆಸ್ ಸಮೀತಿ ಅಧ್ಯಕ್ಷ ಗಿರೀಶ್ ಚೋಡಣಕರ್, ಮಾಜಿ ಮುಖ್ಯಮಂತ್ರಿ ದಿಗಂಬರ್ ಕಾಮತ್, ಗೋವಾ  ಕಾಂಗ್ರೆಸ್ ಪ್ರಭಾರಿ ದಿನೇಶ್ ಗುಂಡೂರಾವ್, ಗೋವಾ ಕಾಂಗ್ರೆಸ್ ಚುನಾವಣಾ ಉಸ್ತುವಾರಿ ಪಿ.ಚಿದಂಬರಂ, ದಕ್ಷಿಣ ಗೋವಾ ಸಂಸದ ಫ್ರಾನ್ಸಿಸ್ ಸರ್ದಿನ್ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next