Advertisement
ಜಿಲ್ಲಾ ಕೇಂದ್ರದಿಂದ 15 ಕಿ.ಮೀ. ದೂರದಲ್ಲಿರುವ ಯಾದಗಿರಿ ತಾಲೂಕಿನ ಹೆಡಗಿಮದ್ರಾ ಗ್ರಾಮದ ರೈತ ಬಸವರಾಜ ವಿರುಪಣ್ಣ ಅವರು ತಮ್ಮ ಐದು ಎಕರೆ ಪೈಕಿ ನಾಲ್ಕು ಎಕರೆ ಜಮೀನಿನಲ್ಲಿ ಹೆಸರು ಬೆಳೆದಿದ್ದರು. ಜು. 13, 2017ರಂದು ತಾಲೂಕಿನ ಹತ್ತಿಕುಣಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಖರೀದಿ ಕೇಂದ್ರದಲ್ಲಿ 11.50 ಕ್ವಿಂಟಾಲ್ ಹೆಸರನ್ನು ರಾಜ್ಯ ಸರಕಾರದ ಬೆಂಬಲ ಬೆಲೆಯೊಂದಿಗೆ 5,375 ಹಾಗೂ ಕೇಂದ್ರ ಸರಕಾರದ ಬೆಂಬಲ ಬೆಲೆ 200 ರೂ. ಸೇರಿ ಪ್ರತಿ ಕ್ವಿಂಟಾಲ್‌ಗೆ 5,575 ರೂ.ಗೆ ಹೆಸರು ಮಾರಾಟ ಮಾಡಿದ್ದು, ಒಟ್ಟು 64112.5 ರೂ. ಅವರ ಖಾತೆಗೆ ಒಂದು ತಿಂಗಳೊಳಗೆ ಸಂದಾಯ ಮಾಡುತ್ತೇವೆ ಎಂದು ಖರೀದಿ ಕೇಂದ್ರ ಸಿಬ್ಬಂದಿಗಳು ತಿಳಿಸಿದ್ದರು. ಆದರೆ ಆರು ತಿಂಗಳು ಕಳೆದರೂ ಹಣ ಬ್ಯಾಂಕ್ ಖಾತೆಗೆ ಜಮಾವಾಗದೆ ರೈತ ಕಂಗಲಾಗಿದ್ದಾನೆ.
ಸಂಬಂಧಪಟ್ಟ ಎಲ್ಲ ದಾಖಲೆ ಪತ್ರಗಳನ್ನು ನೀಡಿದ್ದರು. ಆದರೂ ಬ್ಯಾಂಕ್ ಖಾತೆಗೆ ಹಣ ಜಮೆ ಆಗಿಲ್ಲ. ಈ ಬಗ್ಗೆ ಖರೀದಿ ಕೇಂದ್ರದ ಸಿಬ್ಬಂದಿಗಳಿಗೆ ಕೇಳಿದರೆ ಆನ್‌ಲೈನ್‌ನಲ್ಲಿ ಐಎಫ್ ಎಸ್‌ಸಿ ಕೋಡ್ ಎಸ್‌ಬಿಐಎನ್ ಬದಲು ಎಸ್‌ಬಿಐ ಎಂದು ನಮೋದಿಸಿದ್ದರಿಂದ ತಿರಸ್ಕೃತವಾಗಿದೆ. ಆದಷ್ಟು ಬೇಗ ಸಮಸ್ಯೆ ಬಗೆ ಹರಿಸಿ ಹಣ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುವುದು ಎಂದು ಕಳೆದ ಒಂದು ತಿಂಗಳಿಂದ ಹೇಳುತ್ತಿದ್ದಾರೆ. ಆದರೆ ಇಲ್ಲಿಯವರೆಗೆ ಜಮೆ ಮಾಡಿಲ್ಲ ಎಂದು ರೈತ ಬಸವರಾಜ ವಿರುಪಣ್ಣ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರ್, ಸಾಲ ಸೋಲ ಮಾಡಿ ಹೆಸರು ಬೆಳೆ ಬೆಳೆದಿದ್ದೇನೆ. ಕಳೆದ ಆರು ತಿಂಗಳಿಂದ ಹೆಸರು ಇಲ್ಲ. ಹಣವೂ ಇಲ್ಲವೆಂಬಂತಾಗಿದೆ. ಈ ರೀತಿಯಾದರೆ, ರೈತರು ಖರೀದಿ ಕೇಂದ್ರದಲ್ಲಿ ಬೆಳೆ ಮಾರಾಟಕ್ಕೆ ಹಿಂಜರಿಯುವಂತಾಗಿದೆ. ಅಧಿಕಾರಿಗಳ ಬೇಜವಾಬ್ದಾರಿಯಿಂದ ನನ್ನ ಖಾತೆಗೆ ಹಣ ಜಮಾವಾಗಿಲ್ಲ. ಇದೇ ರೀತಿ 35 ರೈತರ ಸಮಸ್ಯೆ ಆಗಿದೆ ಎಂದು ತಮ್ಮ ನೋವು ತೋಡಿಕೊಂಡರು.
ರೈತರ ಅನುಕೂಲಕ್ಕಾಗಿ ರಾಜ್ಯ ಸರಕಾರ ಖರೀದಿ ಕೇಂದ್ರಗಳನ್ನು ಆರಂಭಿಸುತ್ತದೆ. ಅದರ ಜೊತೆಗೆ ರೈತರಿಗೆ ಸರಿಯಾದ ಸಮಯಕ್ಕೆ ಹಣ ಸಂದಾಯವಾದಾಗ ಮಾತ್ರ ಖರೀದಿ ಕೇಂದ್ರ ಸ್ಥಾಪಿಸಿದ್ದು, ಸಾರ್ಥಕವಾಗುತ್ತದೆ.
Related Articles
ಆನ್‌ಲೈನ್‌ನಲ್ಲಿ ಐಎಫ್‌ಎಸ್‌ಸಿ ಕೋಡ್ ಎಸ್‌ಬಿಐಎನ್ ಬದಲು ಎಸ್‌ಬಿಐ ಎಂದು ನಮೋದಿಸಿದ್ದರಿಂದ ರೈತರ ಬ್ಯಾಂಕ್ ಖಾತೆಗೆ ಹಣ ಜಮೆ ಆಗಿಲ್ಲ. ಈಗ ತಪ್ಪಾಗಿರುವ ಪಟ್ಟಿಯನ್ನು ಪರಿಷ್ಕರಿಸಿ ಶಹಾಪುರದ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳಿಗೆ ಕಳುಹಿಸಿ ಕೊಡಲಾಗಿದೆ.
ಸಂಜೀವಕುಮಾರ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯದರ್ಶಿ, ಹತ್ತಿಕುಣಿ
Advertisement
ಮೂರ್‍ನಾಲ್ಕು ದಿನದಲ್ಲಿ ಸಮಸ್ಯೆಗೆ ಪರಿಹಾರ ಖರೀದಿ ಕೇಂದ್ರದ ಸಿಬ್ಬಂದಿಗಳು ಆನ್‌ಲೈನ್‌ನಲ್ಲಿ ಐಎಫ್‌ಎಸ್‌ಸಿ ಕೋಡ್ ಎಸ್‌ಬಿಐಎನ್ ಬದಲು ಎಸ್‌ಬಿಐ ಎಂದು ನಮೋದಿಸಿದ್ದರಿಂದ ಸುಮಾರು 35 ರೈತರಿಗೆ ಹಣ ಸಂದಾಯವಾಗಿಲ್ಲ. ಇದು ನಮ್ಮ ಗಮನಕ್ಕೆ ಬಂದಿದೆ. ಎನ್‌ಇಎಂಎಲ್‌ಗೆ ಪರಿಷ್ಕೃತ ಲಿಸ್ಟ್ ಕಳುಹಿಸಲಾಗುತ್ತಿದ್ದು, ಮೂರ್‍ನಾಲ್ಕು ದಿನದಲ್ಲಿ ಸಮಸ್ಯೆ ಬಗೆಹರಿಸಿ ರೈತರ ಖಾತೆಗೆ ಹಣ ಜಮೆ ಮಾಡಲಾಗುವುದು.
ಭೀಮಣ್ಣ, ವ್ಯವಸ್ಥಾಪಕ, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳಿ ರಾಜೇಶ ಪಾಟೀಲ್ ಯಡ್ಢಳಿ