ಬೆಂಗಳೂರು: “ಡೆಂಘೀ ಹಾಗೂ ಚಿಕುನ್‌ಗುನ್ಯಾ ನಿಯಂತ್ರಣಕ್ಕೆ ಬಿಬಿಎಂಪಿಯಿಂದ ಅಗತ್ಯ ಕ್ರಮ ಕೈಗೊಂಡಿದ್ದು, ಪಾಲಿಕೆ ವ್ಯಾಪ್ತಿಯಲ್ಲಿ ಈ ಕಾಯಿಲೆಗಳಿಂದ ಯಾವುದೇ ಸಾವು ಸಂಭವಿಸಿಲ್ಲ’ ಎಂದು ಮೇಯರ್ ಜಿ.ಪದ್ಮಾವತಿ ಸ್ಪಷ್ಟಪಡಿಸಿದರು.
ಈ ಕುರಿತು ಶನಿವಾರ ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ ಪ್ರಸಾದ್ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ಅವರು, ಪಾಲಿಕೆಯ ವ್ಯಾಪ್ತಿಯಲ್ಲಿ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಜನವರಿ ತಿಂಗಳಿನಿಂದ ಜುಲೈ ತಿಂಗಳವರೆಗೆ 1991 ಡೆಂಘೀ ಪ್ರಕರಣಗಳು ವರದಿಯಾಗಿವೆ. ಆದರೆ, ಯಾವುದೇ ಪ್ರಕರಣದಲ್ಲಿಯೂ ಸಾವು ಸಂಭವಿಸಿಲ್ಲ ಎಂದು ತಿಳಿಸಿದರು.
ಡೆಂಘೀ ಪ್ರಕರಣಗಳು ನಗರದ ಯಾವ ಭಾಗದಲ್ಲಿ ಹೆಚ್ಚು ಕಂಡು ಬರುತ್ತಿವೆ ಎಂಬ ಮಾಹಿತಿ ಕಲೆ ಹಾಕುತ್ತಿದ್ದು, ಸಂಬಂಧಿಸಿದ ಸ್ಥಳಗಳಲ್ಲಿ ಆರೋಗ್ಯ ಪರಿವೀಕ್ಷಕರನ್ನು ನೇಮಿಸುವ ಮೂಲಕ ರೋಗ ನಿಯಂತ್ರಣಕ್ಕೆ ಕ್ರಮಕೈಗೊಳ್ಳಲಾಗಿದೆ. ಜತೆಗೆ ಡೆಂಘೀ ಕಾಯಿಲೆಗೆ ಒಳಗಾದವರ ಕುಟುಂಬವನ್ನು ಸಂಪರ್ಕಿಸಿ ಅವರ ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಕೆಲಸ ನಡೆಯುತ್ತಿದೆ ಎಂದು ಮಾಹಿತಿ ನೀಡಿದರು.
ಪಾಲಿಕೆ ವ್ಯಾಪ್ತಿಯಲ್ಲಿ ಡೆಂಘೀ ನಿಯಂತ್ರಣಕ್ಕಾಗಿ ಈಗಾಗಲೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಆ ಹಿನ್ನೆಲೆಯಲ್ಲಿ ಕೀಟ ನಾಶಕ ಸಿಂಪಡಣೆ, ಧೂಮೀಕರಣ ಮಾಡಲಾಗುತ್ತಿದ್ದು, ಪ್ರತಿ ವಾರ್ಡ್‌ನಲ್ಲಿ 3 ರಿಂದ 4 ಮಂದಿ ಗ್ಯಾಂಗ್‌ಮನ್‌ಗಳು, ಆರೋಗ್ಯ ಕಾರ್ಯಕರ್ತೆಯರು ಸಾರ್ವಜನಿಕರಲ್ಲಿ ಡೆಂಘೀ ಕುರಿತು ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದಾರೆ ಎಂದರು.
ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ ಪ್ರಸಾದ್ ಮಾತನಾಡಿ, ನಗರದಲ್ಲಿರುವ ಎಲ್ಲ ಸರ್ಕಾರ ಹಾಗೂ ಖಾಸಗಿ ಆಸ್ಪತ್ರೆಗಳು ತಮ್ಮ ಆಸ್ಪತ್ರೆಗಳಲ್ಲಿ ದಾಖಲಾದ ರೋಗಿಗಳ ಮಾಹಿತಿಯನ್ನು ಪಾಲಿಕೆಗೆ ಕಡ್ಡಾಯವಾಗಿ ಒದಗಿಸಬೇಕು. ನಗರದಲ್ಲಿ 465 ಖಾಸಗಿ ಆಸ್ಪತ್ರೆಗಳಲ್ಲಿ ಡೆಂಘೀ ಅಥವಾ ಚಿಕುನ್‌ಗುನ್ಯಾ ಕಾಯಿಲೆಯಿಂದ ರೋಗಿಗಳು ದಾಖಲಾದರೆ ಅವರ ಪರಿಸ್ಥಿತಿಯ ಕುರಿತು ಸಂಪೂರ್ಣ ಮಾಹಿತಿಯನ್ನು ಒದಗಿಸಬೇಕು. ಹೀಗೆ ಪಡೆದ ಮಾಹಿತಿಯನ್ನು ಪಿಎಚ್‌ಐಇಸಿ ತಂತ್ರಾಂಶದಲ್ಲಿ ಅಳವಡಿಸಲಾಗುತ್ತದೆ ಎಂದು ಹೇಳಿದರು.
ನಗರದಲ್ಲಿ ಆರು ಸಂಚಾರಿ ಆಸ್ಪತ್ರೆ ವಾಹನಗಳ ಮೂಲಕ ಕೊಳಚೆ ಪ್ರದೇಶಗಳಲ್ಲಿನ ಜನರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, 198 ವಾರ್ಡ್‌ಗಳಿಗೆ ಈ ವಾಹನಗಳು ಸಾಕಾಗುವುದಿಲ್ಲ. ಅದರ ಹಿನ್ನೆಲೆಯಲ್ಲಿ ಪ್ರತಿ ಕ್ಷೇತ್ರಕ್ಕೆ ಒಂದರಂತೆ ಸಂಚಾರಿ ವಾಹನ ಒದಗಿಸುವಂತೆ ಸರ್ಕಾರವನ್ನು ಕೋರಲಾಗಿದ್ದು, ಕೇಂದ್ರ ಸರ್ಕಾರದ ರಾಷ್ಟ್ರೀಯ ನಗರ ಆರೋಗ್ಯ ಮಿಷನ್ ಯೋಜನೆಯಡಿ ಅನುದಾನ ಒದಗಿಸುವಂತೆ ಕೋರಲಾಗುವುದು ಎಂದು ಮಾಹಿತಿ ನೀಡಿದರು.
* 1991- ಜನವರಿ-ಜಲೈ ಅವಧಿಯಲ್ಲಿ ನಗರದಲ್ಲಿ ವರದಿಯಾದ ಡೆಂಘೀ ಪ್ರಕರಣಗಳು
* 06- ಪಾಲಿಕೆ ವ್ಯಾಪ್ತಿಯ ಕೊಳೆಗೇರಿಯಲ್ಲಿ ಡೆಂಘೀ, ಚಿಕನ್‌ಗುನ್ಯಾ ನಿಯಂತ್ರಣಕ್ಕೆ ನಿಯೋಜಿಸಲಾಗಿರುವ ಸಂಚಾರಿ ಆಸ್ಪತ್ರೆಗಳು