ನವದೆಹಲಿ:ಮದ್ಯ ಸೇರಿದಂತೆ ವಿದೇಶದ ವಸ್ತುಗಳನ್ನು ಆಮದು ಮಾಡಿಕೊಳ್ಳದಂತೆ ನಾಲ್ಕು ಸಾವಿರ ಮಿಲಿಟರಿ ಅಂಗಡಿಗಳಿಗೆ ಭಾರತ ಸರ್ಕಾರ ಆದೇಶ ನೀಡಿದೆ. ಇದು ಪ್ರಸಿದ್ಧ ವಿದೇಶಿ ಮದ್ಯ ಸಂಸ್ಥೆಗಳಾದ ಡಿಯಾಗೋ ಮತ್ತು ಪೆರ್ನೋಡ್ ರಿಕಾರ್ಡ್ ಗೆ ಭಾರೀ ಹೊಡೆತ ನೀಡಿರುವುದಾಗಿ ವರದಿಯೊಂದು ತಿಳಿಸಿದೆ.
ಭಾರತದ ರಕ್ಷಣಾ ಕ್ಷೇತ್ರದ ಕ್ಯಾಂಟೀನ್ ಗಳಲ್ಲಿ ಮದ್ಯ, ಇಲೆಕ್ಟ್ರಾನಿಕ್ಸ್ ಹಾಗೂ ಇತರ ವಸ್ತುಗಳನ್ನು ಯೋಧರಿಗೆ ಮತ್ತು ಮಾಜಿ ಸೈನಿಕರು, ಅವರ ಕುಟುಂಬಗಳಿಗೆ ಡಿಸ್ಕೌಂಟ್ ನಲ್ಲಿ ಮಾರಾಟ ಮಾಡಲಾಗುತ್ತಿತ್ತು. ಇದರಿಂದ ವಾರ್ಷಿಕ 2 ಬಿಲಿಯನ್ ಡಾಲರ್ ನಷ್ಟು ವಹಿವಾಟು ನಡೆಯುತ್ತಿತ್ತು. ಇದು ಭಾರತದಲ್ಲಿನ ಅತೀ ದೊಡ್ಡ ಚಿಲ್ಲರೆ ವ್ಯಾಪಾರಗಳಲ್ಲಿ ಒಂದಾಗಿತ್ತು.
ರಾಯಟರ್ಸ್ ಪರಿಶೀಲನೆಯ ನಂತರ ರಕ್ಷಣಾ ಸಚಿವಾಲಯ ಅಕ್ಟೋಬರ್ 19ರಂದು ಹೊರಡಿಸಿರುವ ಆಂತರಿಕ ಆದೇಶದಲ್ಲಿ, ಆಮದು ಮಾಡಿದ ವಸ್ತುಗಳ ವ್ಯವಹಾರ ನಡೆಸುವಂತಿಲ್ಲ ಎಂದು ತಿಳಿಸಿತ್ತು.
ಇದನ್ನೂ ಓದಿ:ಜಮ್ಮು-ಕಾಶ್ಮೀರ: ಪಾಕಿಸ್ತಾನದ ಅತ್ಯಾಧುನಿಕ ಡ್ರೋನ್ ಹೊಡೆದುರುಳಿಸಿದ ಭಾರತೀಯ ಸೇನೆ
ಆದೇಶದಲ್ಲಿ ಉಲ್ಲೇಖಿಸಿರುವಂತೆ, ಸೇನೆ, ವಾಯುಪಡೆ ಮತ್ತು ನೌಕಾ ಪಡೆ ಕಮಾಂಡರ್ ಗಳ ಜತೆ ಮೇ ಮತ್ತು ಜೂನ್ ತಿಂಗಳಿನಲ್ಲಿ ವಿದೇಶಿ ವಸ್ತುಗಳ ಆಮದು ನಿರ್ಬಂಧದ ಬಗ್ಗೆ ಚರ್ಚೆ ನಡೆಸಲಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಅವರ “ದೇಶಿ ಉತ್ಪನ್ನ”ಕ್ಕೆ ಹೆಚ್ಚಿನ ಒತ್ತು ಕೊಡುವ ಮುಖ್ಯ ಉದ್ದೇಶದೊಂದಿಗೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಆದರೆ ಈ ಬಗ್ಗೆ ಪ್ರತಿಕ್ರಿಯೆ ನೀಡಲು ರಕ್ಷಣಾ ಸಚಿವಾಲಯದ ವಕ್ತಾರ ನಿರಾಕರಿಸಿದ್ದಾರೆ.