Advertisement

ದಾಳಿ ನಡೆಸಿದ್ದಷ್ಟೇ ಎಸಿಬಿ ಸಾಧನೆ

11:59 PM Aug 11, 2022 | Team Udayavani |

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರಕಾರ 2016ರಲ್ಲಿ ಲೋಕಾಯುಕ್ತ ಪೊಲೀಸ್‌ ವಿಭಾಗಕ್ಕಿದ್ದ ಅಧಿಕಾರವನ್ನು ಮೊಟಕುಗೊಳಿಸಿ, ಇದಕ್ಕೆ ಪರ್ಯಾಯವಾಗಿ 2016 ಮಾ.14ರಂದು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಸಂಸ್ಥೆಯನ್ನು ಸ್ಥಾಪಿಸಿತ್ತು.

Advertisement

ಎಸಿಬಿ ಪ್ರಾರಂಭವಾದ ಬಳಿಕ 2022 ಜೂನ್‌ವರೆಗೆ  2,121 ಎಫ್ಐಆರ್‌ ದಾಖಲಾಗಿದೆ. ಈ ಪೈಕಿ ಶಿಕ್ಷೆಯಾಗಿರುವುದು ಕೇವಲ 22 ಮಂದಿಗೆ ಮಾತ್ರ. 70 ಪ್ರಕರಣಗಳಲ್ಲಿ ನ್ಯಾಯಾಲಯಗಳಲ್ಲಿ ವಿಚಾರಣೆ ಮುಕ್ತಾಯಗೊಂಡಿದೆ. 99 ಕೇಸ್‌ಗಳಲ್ಲಿ  “ಬಿ’ ವರದಿ ಸಲ್ಲಿಸಲಾಗಿದೆ. ಎಸಿಬಿ ಭ್ರಷ್ಟ ಕುಳಗಳ ಮೇಲೆ ದಾಳಿ ನಡೆಸಿ ಭಾರೀ ಮೊತ್ತದ ಅಕ್ರಮ ಆಸ್ತಿಗೆ (ಡಿಸ್‌ಪ್ರಪೋಷನೇಟ್‌ ಅಸೆಟ್ಸ್‌) ಸಂಬಂಧಿಸಿ ದಾಖಲಿಸಿಕೊಂಡಿರುವ ಪ್ರಕರಣಗಳಲ್ಲಿ ಇದುವರೆಗೆ ಒಬ್ಬರಿಗೂ ಶಿಕ್ಷೆಯಾಗಿಲ್ಲ.

ತನಿಖೆ ನಡೆಸಿ ಕೋರ್ಟ್‌ಗೆ ಸಲ್ಲಿಸಿರುವ ಚಾರ್ಜ್‌ಶೀಟ್‌ಗಳ ಪೈಕಿ ಶೇ.95 ಸಣ್ಣಪುಟ್ಟ ಟ್ರ್ಯಾಪ್‌ ಕೇಸ್‌ಗಳಿಗೆ ಸಂಬಂಧಿಸಿದ್ದಾಗಿವೆ. ಭ್ರಷ್ಟಾಚಾರಕ್ಕೆ ಸಂಬಂಧಿಸಿದ ವಿವಿಧ ಕೇಸ್‌ಗಳಲ್ಲಿ ಬಂಧನಕ್ಕೊಳಗಾಗಿದ್ದ 1,473ಕ್ಕೂ ಅಧಿಕ ಜನರ ಪೈಕಿ ಬಹುತೇಕರು ಜಾಮೀನು ಪಡೆದು ಹೊರ ಬಂದಿದ್ದಾರೆ. ದಾಳಿಗೊಳಗಾದ 1,336 ಭ್ರಷ್ಟ ಅಧಿಕಾರಿಗಳು ಸೇವೆಯಿಂದ ಅಮಾನತುಗೊಂಡಿದ್ದರೂ, ಬಹುತೇಕ ಅಧಿಕಾರಿಗಳು ಮತ್ತೆ ಕಚೇರಿಗೆ ಹಾಜರಾಗುತ್ತಿದ್ದಾರೆ. ದಾಳಿ ನಡೆಸಿದ್ದಷ್ಟೇ ಎಸಿಬಿ ಸಾಧನೆಯಾಗಿದೆ.

ಆದರೆ ಲೋಕಾಯುಕ್ತ ಇದಕ್ಕೆ ಹೊರತಾಗಿದ್ದು, ಅಧಿಕಾರ ಅವಧಿಯಲ್ಲಿ ನೂರಾರು ಕೋಟಿ ರೂ. ಭ್ರಷ್ಟಾಚಾರವನ್ನು ಬಯಲಿಗೆಳೆದು ದೇಶಕ್ಕೆ ಮಾದರಿ ಸಂಸ್ಥೆಯಾಗಿತ್ತು. 6 ವರ್ಷಗಳಿಂದ ಪವರ್‌ ಕಳೆದುಕೊಂಡಿದ್ದ ಲೋಕಾಯುಕ್ತ ಹಾಗೂ ಬಲವಿಲ್ಲದ ಎಸಿಬಿ ಸಂಸ್ಥೆ  ನಿರ್ವಹಣೆಗಾಗಿ ನೂರಾರು ಕೋಟಿ ರೂ. ವ್ಯಯಿಸಲಾಗಿದೆ.

ಲೋಕಾಯುಕ್ತ-ಎಸಿಬಿಗೂ ವ್ಯತ್ಯಾಸಗಳೇನು?:

Advertisement

ಕರ್ನಾಟಕ ಲೋಕಾಯುಕ್ತ ಅಧಿನಿಯಮ 1984 ಹಾಗೂ ಭ್ರಷ್ಟಾಚಾರ ತಡೆ ಅಧಿನಿಯಮ 1988 ಎರಡು ಪ್ರತ್ಯೇಕ ಶಾಸನಗಳಾಗಿವೆ. ಎಸಿಬಿ ಸಂಸ್ಥೆಯು ಸರಕಾರದ ಅಧೀನದಲ್ಲೇ ಬರುವುದರಿಂದ ಸ್ವತಂತ್ರವಾಗಿ ತನಿಖೆ ನಡೆಸಲಾಗದೇ ಮುಖ್ಯಮಂತ್ರಿಗಳು, ಗೃಹ ಸಚಿವರು ಹಾಗೂ ಗೃಹ ಸಚಿವರ ಸಲಹೆಗಾರರ ಸೂಚನೆಯಂತೆ ಕೆಲಸ ಮಾಡಬೇಕಿದೆ.

ದಾಳಿಗೊಳಗಾದ ಬಹುತೇಕರು ಪ್ರಭಾವಿ ರಾಜಕಾರಣಿಗಳು, ಸಚಿವರು, ಉನ್ನತ ಅಧಿಕಾರಿಗಳ ಮೊರೆ ಹೋಗಿ ಸರಕಾರದ ಮೂಲಕ ತನಿಖಾಧಿಕಾರಿಗಳ ಮೇಲೆ ಒತ್ತಡ ಹಾಕಿಸುವುದು ಸಾಮಾನ್ಯವಾಗಿದೆ. ಹೀಗಾಗಿ ಇಂತಹ ಕೇಸ್‌ಗಳಲ್ಲಿ ಸರಕಾರದ ಸೂಚನೆ ಮೇರೆಗೆ ಎಸಿಬಿ ಅಧಿಕಾರಿಗಳು ಕಾರ್ಯ ನಿರ್ವಹಿಸುವುದು ಅನಿವಾರ್ಯ. ಆದರೆ ಲೋಕಾಯುಕ್ತ ಪೊಲೀಸರಿಗೆ ಭ್ರಷ್ಟರ ವಿರುದ್ಧ ಸ್ವತಂತ್ರವಾಗಿ ತನಿಖೆ ನಡೆಸಲು ಅಧಿಕಾರವಿದೆ. ಲೋಕಾ ಪೊಲೀಸ್‌ ವಿಭಾಗವನ್ನು ಸರಕಾರ ತನ್ನ ಕೈ ಗೊಂಬೆಯಾಗಿ ಬಳಸಿಕೊಳ್ಳಲು ಸಾಧ್ಯವಾಗುವುದಿಲ್ಲ.

ಎಸಿಬಿ ವೈಫ‌ಲ್ಯಗಳೇನು? :

ಬಿಡಿಎ  ಎಂಜಿನಿಯರ್‌ಗಳು, ಕೆಐಎಡಿಬಿ ಅಧಿಕಾರಿಗಳು, ಪಿಡಬ್ಲೂÂಡಿ ಎಂಜಿನಿಯರ್‌ಗಳು, ಐಎಎಸ್‌ ಅಧಿಕಾರಿಗಳು, ಬಿಬಿಎಂಪಿ ಅಧಿಕಾರಿಗಳು, ಕಾರ್ಮಿಕ ಇಲಾಖೆ ಜಂಟಿ ನಿರ್ದೇಶಕರು, ಕೃಷಿ ಇಲಾಖೆ ಅಧಿಕಾರಿಗಳು, ಕೆಪಿಟಿಸಿಎಲ್‌ ಅಧೀಕ್ಷಕ ಅಭಿಯಂತರು, ಬಿಡಿಎ ಉಪನಿರ್ದೇಶಕರು, ಆರ್‌.ಟಿ.ಒ ಕಚೇರಿ ಮೇಲೆ ನಡೆದ ಬೃಹತ್‌ ದಾಳಿ ಪ್ರಕರಣಗಳಲ್ಲಿ ಚಾರ್ಜ್‌ಶೀಟ್‌ ಸಲ್ಲಿಕೆಯಾಗಿಲ್ಲ.

  • 2017ರಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ವಜ್ರ ಖಚಿತ ಹ್ಯೂಬ್ಲೋಟ್‌ ವಾಚ್‌ ಪ್ರಕರಣ, ಎಫ್ಎಸ್‌ಎಲ್‌ ನಿರ್ದೇಶಕರ ಮೇಲಿನ ಕೇಸ್‌, ಪ್ರಧಾನ ಮಂತ್ರಿ ಸ್ವಾಸ್ಥ್ಯ ಸುರಕ್ಷಾ ಯೋಜನೆಯಡಿ ಮಾಜಿ ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರ ನಡೆಸುತ್ತಿದ್ದ ಮ್ಯಾಟ್ರಿಕ್ಸ್‌ ಇಮ್ಯಾಜಿಂಗ್‌ ಸೊಲ್ಯೂಷನ್ಸ್‌ ಕಂಪೆನಿಗೆ ನಿಯಮ ಉಲ್ಲಂ ಸಿ ಟೆಂಡರ್‌ ನೀಡಿರುವುದು ಸಹಿತ 99 ಕೇಸ್‌ಗಳಲ್ಲಿ ಬಿ ವರದಿ ಸಲ್ಲಿಕೆ.
  • ಕೋಟ್ಯಂತರ ರೂ. ಅಕ್ರಮ ಆಸ್ತಿಗೆ ಸಂಬಂಧಿಸಿದ ಗಂಭೀರ ಪ್ರಕರಣಗಳು ಹಲವು ವರ್ಷಗಳಿಂದ ಮೂಲೆಗುಂಪಾಗಿವೆ.
  • ಕೋಟ್ಯಂತರ ರೂ. ಭ್ರಷ್ಟಚಾರ ಎಸಗಿರುವ ಸರಕಾರಿ ಅಧಿಕಾರಿಗಳಿಗೆ ಶಿಕ್ಷೆಯಾಗಲು ಬಲವಾದ ಸಾಕ್ಷ್ಯ ಸಂಗ್ರಹಿಸದಿರುವುದು.

ಬಿಜೆಪಿ ಸರಕಾರವೂ ಸಮರ್ಥಿಸಿಕೊಂಡಿತ್ತು :

ಕಾಂಗ್ರೆಸ್‌ ಸರಕಾರದ ಅವಧಿಯಲ್ಲಿ ರಚಿಸಲಾಗಿದ್ದ ಎಸಿಬಿಯನ್ನು ರಾಜಕೀಯವಾಗಿ ವಿರೋಧಿಸಿದ್ದ ಬಿಜೆಪಿ ಸರಕಾರ ಅದನ್ನು ಹೈಕೋರ್ಟ್‌ನಲ್ಲಿ ಬೆಂಬಲಿಸಿತ್ತು. ಅಧಿಕಾರಕ್ಕೆ ಬಂದ ಕೂಡಲೇ ಎಸಿಬಿ ರದ್ದುಮಾಡಿ ಲೋಕಾಯುಕ್ತಕ್ಕೆ ಹೆಚ್ಚಿನ ಅಧಿಕಾರ ನೀಡುವುದಾಗಿ ಭರಸವೆ ಕೊಟ್ಟಿದ್ದ ಬಿಜೆಪಿ, ಎಸಿಬಿಯನ್ನು ಮುಂದುವರಿಸುವುದಾಗಿ ಹೈಕೋರ್ಟ್‌ಗೆ 2021ರ ಜೂನ್‌ ತಿಂಗಳಲ್ಲಿ ಹೇಳಿತ್ತು.

ಎಸಿಬಿ ರಚನೆಯ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳ ವಿಚಾರಣೆ ವೇಳೆ ಹೈಕೋರ್ಟ್‌ಗೆ ಪ್ರಮಾಣಪತ್ರ ಸಲ್ಲಿಸಿದ್ದ ರಾಜ್ಯ ಸರಕಾರ, ಎಸಿಬಿ ಮುಂದುವರಿಯಲಿದೆ. ಆದರೆ ಎಸಿಬಿ ರಚನೆಯಲ್ಲಿ ಕೆಲವು ಬದಲಾವಣೆ ಮಾಡಲಾಗಿದೆ. ಅದರಂತೆ, ಎಸಿಬಿ ರಚನೆ ಮಾಡಿ 2016ರ ಮಾ.13ರಂದು ಹೊರಡಿಸಲಾಗಿದ್ದ ಆದೇಶದಲ್ಲಿನ ಸೆಕ್ಷನ್‌ 5 ಅನ್ನು ರದ್ದುಪಡಿಸಲಾಗಿದೆ. ಎಸಿಬಿ ಎಡಿಜಿಪಿಗೆ 2 ವರ್ಷ ಅಧಿಕಾರಾವಧಿ ನಿಗದಿಪಡಿಸಲಾಗಿದೆ. ಭ್ರಷ್ಟರ ವಿರುದ್ಧ ದೂರು ನೀಡಲು ಮೊದಲು ಪೂರ್ವಾನುಮತಿ ಕಡ್ಡಾಯವಿತ್ತು. ಅದನ್ನು ತೆಗೆದುಹಾಕಲಾಗಿದೆ ಎಂದು ಆಗಿನ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್‌ ಹೈಕೋರ್ಟ್‌ಗೆ ಸಲ್ಲಿಸಿದ್ದ ಪ್ರಮಾಣಪತ್ರದಲ್ಲಿ ಹೇಳಲಾಗಿತ್ತು.

ಎಸಿಬಿ ಕಾರ್ಯವೈಖರಿಗೆ ಟೀಕೆ :

ಎಸಿಬಿ ಕಾರ್ಯವೈಖರಿ ಹಾಗೂ ಎಸಿಬಿ ಎಡಿಜಿಪಿ ನಡವಳಿಕೆ ಬಗ್ಗೆ ಇತ್ತೀಚೆಗೆ ಹೈಕೋರ್ಟ್‌ ತರಾಟೆಗೆ ತೆಗೆದುಕೊಂಡಿತ್ತು. ಬೆಂಗಳೂರು ನಗರ ಜಿಲ್ಲಾಧಿಕಾರಿ ಕಚೇರಿಯ ಲಂಚ ಪ್ರಕರಣದಲ್ಲಿ ಆರೋಪಿಯಾಗಿರುವ ಉಪ ತಹಶೀಲ್ದಾರ್‌ ಪಿ.ಎಸ್‌. ಮಹೇಶ್‌ ಜಾಮೀನು ಅರ್ಜಿ ವಿಚಾರಣೆ ವೇಳೆ,  ಭ್ರಷ್ಟಾಚಾರ ತಡೆಯಲು ಅಸ್ತಿತ್ವಕ್ಕೆ ತರಲಾದ ಎಸಿಬಿ ಸ್ವತಃ ಇಂದು ಭ್ರಷ್ಟಾಚಾರದ ತಾಣವಾಗಿದೆ. ಎಸಿಬಿಗೆ ಕಳಂಕಿತ ಅಧಿಕಾರಿಗಳನ್ನು ನೇಮಕ ಮಾಡಬಾರದು’ ಎಂದು ಹೇಳಿತ್ತು. ಎಡಿಜಿಪಿ ಕಾರ್ಯವೈಖರಿ ಪ್ರಶ್ನಿಸಿದ್ದಕ್ಕೆ  ವರ್ಗಾವಣೆ ಬೆದರಿಕೆ  ಬಂದಿತ್ತು ಎಂದು ಸ್ವತಃ ಹೈಕೋರ್ಟ್‌ ನ್ಯಾಯಮೂರ್ತಿಗಳೇ ಹೇಳಿದ್ದರು. ಈ ವಿಚಾರ ಸುಪ್ರೀಂಕೋರ್ಟ್‌ಗೂ ಹೋಗಿತ್ತು.

ಪ್ರಕರಣದ ಹಿನ್ನೆಲೆ :

ಎಸಿಬಿ ರಚನೆಯ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಹಾಗೂ ಎಸಿಬಿ ರಚಿಸಿ ರಾಜ್ಯ ಸರಕಾರ 2016 ಮಾ.14ರಂದು ಹೊರಡಿಸಿದ್ದ ಆದೇಶವನ್ನು ರದ್ದುಪಡಿಸುವಂತೆ ಕೋರಿ ಬೆಂಗಳೂರು ವಕೀಲರ ಸಂಘ, ವಕೀಲ ಬಿ.ಜಿ. ಚಿದಾನಂದ ಅರಸ್‌, ಸಮಾಜ ಪರಿವರ್ತನಾ ಸಮುದಾಯದ ಎಸ್‌.ಆರ್‌. ಹಿರೇಮಠ 2016ರಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಸಲ್ಲಿಸಿದ್ದರು. ಅನಂತರ 2017ರ ಬಳಿಕ ಎಸಿಬಿ ತಮ್ಮ ವಿರುದ್ಧ ದಾಖಲಿಸಿದ ಪ್ರಕರಣಗಳನ್ನು ರದ್ದುಗೊಳಿಸುವಂತೆ ಕೆ.ಟಿ.ನಾಗರಾಜ್‌, ಕಾಳೇಗೌಡ, ಬೆಳಗಾವಿಯ ಸಿದ್ಧಾರ್ಥ ಭೂಪಾಲ್‌ ಸಿಂಗಡಿ, ಬಸವರಾಜ್‌ ಮತ್ತಿತರರು, ಎಚ್‌.ಆರ್‌ ದೀಪಕ್‌ ಕುಮಾರ್‌ ವೈಯಕ್ತಿಕ ಹಿತಾಸಕ್ತಿ ಅರ್ಜಿಗಳನ್ನು ಸಲ್ಲಿಸಿದ್ದರು. ಈ 15ಕ್ಕೂ ಹೆಚ್ಚು ಅರ್ಜಿಗಳನ್ನು ಸುದೀರ್ಘ‌ ವಿಚಾರಣೆ ನಡೆಸಿದ ಹೈಕೋರ್ಟ್‌ ವಿಭಾಗೀಯ ನ್ಯಾಯಪೀಠ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮಾನ್ಯ ಮಾಡಿ, ವೈಯುಕ್ತಿಕ ಹಿತಾಸಕ್ತಿ ಅರ್ಜಿಗಳನ್ನು ವಿಲೇವಾರಿ ಮಾಡಿದೆ.

ಹೈಕೋರ್ಟ್‌ ತೀರ್ಪಿನ ಪ್ರಮುಖ ಅಂಶಗಳು :

  • ಎಸಿಬಿಯನ್ನು ಆತುರದಲ್ಲಿ ಸ್ಥಾಪಿಸಲಾಗಿದೆ. ರಾಜ್ಯದ ಗಣ್ಯ ವ್ಯಕ್ತಿಗಳು ಮತ್ತು ಹಿರಿಯ ಅಧಿಕಾರಿಗಳ ವಿರುದ್ಧ ಬಾಕಿ ಇದ್ದ ತನಿಖೆಗಳನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳುವ ಉದ್ದೇಶದಿಂದ ರಚನೆ ಮಾಡಿದೆ. ರಾಜಕೀಯ ವರ್ಗ ಮತ್ತು ಅಧಿಕಾರ ಶಾಹಿಯ ವಿರುದ್ಧ ತನಿಖೆಯ ದಿಕ್ಕು ತಪ್ಪಿಸುವ ಸಲುವಾಗಿಯೇ ಸರಕಾರ ಭ್ರಷ್ಟಾಚಾರ ನಿಯಂತ್ರಣಕ್ಕೆ ಎಸಿಬಿ ರಚನೆ ಮಾಡಲು 2016ರ ಮಾ.14ರಂದು ಆದೇಶ ಹೊರಡಿಸಿತು. ಆ ಮೂಲಕ ಕರ್ನಾಟಕ ಲೋಕಾಯುಕ್ತದ ಮೂಲ ಉದ್ದೇಶವನ್ನೇ ವಿಫಲಗೊಳಿಸಿತು.
  • ವಾಸ್ತವವಾಗಿ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಹತ್ತಿಕ್ಕುವುದಕ್ಕಾಗಿಯೇ ಎಸಿಬಿ ರಚಿಸಲಾಗಿದೆ. ಹೇಗೆಂದರೆ, ಸರಕಾರದ‌ ಆದೇಶದ ಪ್ರಕಾರ ಮುಖ್ಯಮಂತ್ರಿಗೆ ಎಸಿಬಿಯ ತನಿಖೆ ಮತ್ತು ತನಿಖೆಯ ಅನುಮೋದನೆ ನೀಡುವಲ್ಲಿ ಪರಮಾಧಿಕಾರವಿದೆ. ಇದು ಭ್ರಷ್ಟಾಚಾರ ನಿಗ್ರಹ ದಳದ ಉದ್ದೇಶವನ್ನೇ ವಿಫಲಗೊಳಿಸುತ್ತದೆ. ಜತೆಗೆ ಸೇವೆಯಲ್ಲಿ ಯಾವ ಅಧಿಕಾರಿಯೂ ಮುಖ್ಯಮಂತ್ರಿಗಳ ಅಡಿಯಲ್ಲಿ ಕೆಲಸ ಮಾಡುವ ಸಹೋದ್ಯೋಗಿಗಳ ವಿರುದ್ಧ ತನಿಖೆ ನಡೆಸಲು ಸಾಧ್ಯವೇ? ಆದ್ದರಿಂದ ವಾಸ್ತವವಾಗಿ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ ಹತ್ತಿಕ್ಕುವುದಕ್ಕಾಗಿಯೇ ಎಸಿಬಿ ರಚಿಸಲಾಗಿದೆ. ಜತೆಗೆ ಭ್ರಷ್ಟ ಅಧಿಕಾರಿಗಳು ಮತ್ತು ಸಚಿವರನ್ನು ರಕ್ಷಿಸುವ ಉದ್ದೇಶ ಹೊಂದಿದಂತಿದೆ.  ಹಾಗಾಗಿ ಸರಕಾರ ಆದೇಶ ಊರ್ಜಿತವಾಗುವುದಿಲ್ಲ.
  • ಎಸಿಬಿಯನ್ನು ಕೇವಲ ಕಾರ್ಯಕಾರಿ ಆದೇಶದ ಮೂಲಕ ರಚನೆ ಮಾಡಲಾಗಿದೆ. ಅದಕ್ಕೆ ನಿಲ್ಲಲು ಕಾಲುಗಳಿಲ್ಲ, ಅರ್ಥಾತ್‌ ಶಾಸನಾತ್ಮಕ ಬೆಂಬಲವಿಲ್ಲ. ಹಾಗಿದ್ದ ಮೇಲೆ ಮೊದಲೇ ಅಲುಗಾಡುವ ಅದು ಪೊಲೀಸ್‌ ಕರ್ತವ್ಯವನ್ನು ಹೇಗೆ ನಿರ್ವಹಿಸಲು ಸಾಧ್ಯ? ಪೊಲೀಸ್‌ ವಿಭಾಗ ಸ್ವತಂತ್ರ ತನಿಖಾ ಸಂಸ್ಥೆಯಾಗಿರಬೇಕು, ಆದರೆ ಎಸಿಬಿ ಹೆಸರಿಗೆ ಮಾತ್ರ ಸ್ವತಂತ್ರವಾಗಿದ್ದರೂ ಅದು ಮುಖ್ಯಮಂತ್ರಿಗಳ ನಿಯಂತ್ರಣದಲ್ಲಿರುತ್ತದೆ. ಸಿಎಂ ಅಡಿ ಕಾರ್ಯನಿರ್ವಹಿಸುವ ಯಾವುದೇ ತನಿಖಾಧಿಕಾರಿ ಪಾರದರ್ಶಕ ಅಥವಾ ನಿಷ್ಪಕ್ಷಪಾತ ತನಿಖೆ ನಡೆಸಲು ಹೇಗೆ ಸಾಧ್ಯ.
  • ಲೋಕಾಯುಕ್ತ ಸಂಸ್ಥೆಯ ಬಗ್ಗೆ ಜನರಿಗೆ ಮೊದಲಿನಿಂದಲೂ ವಿಶ್ವಾಸವಿದೆ. ಗಣಿ ಹಗರಣ ಸಹಿತ ಹಲವು ತನಿಖೆಗಳನ್ನು ನಡೆಸಿ ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಾಣಕ್ಕೆ ಶ್ರಮಿಸಿದೆ. ಸಮಾಜದಲ್ಲಿ ಆಳವಾಗಿ ಬೇರೂರಿರುವ ಲಂಚಗುಳಿತನವನ್ನು ಹತ್ತಿಕ್ಕಲು ಲೋಕಾಯುಕ್ತ ಸಂಸ್ಥೆ ಬೇಕೇ ಬೇಕು ಎಂಬುದು ಸಾರ್ವಜನಿಕ ಅಭಿಪ್ರಾಯವಾಗಿದೆ. ಅದನ್ನು ಮಾನ್ಯ ಮಾಡಬೇಕಿದೆ.

 

Advertisement

Udayavani is now on Telegram. Click here to join our channel and stay updated with the latest news.

Next