ದೇವನಹಳ್ಳಿ: ತಾಲೂಕಿನ ಕುಂದಾಣ ಹೋಬಳಿ ವ್ಯಾಪ್ತಿಯ ಗ್ರಾಪಂಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗೆ ಕಳೆದ ಮೂರು-ನಾಲ್ಕು ತಿಂಗಳಿನಿಂದ ಸಂಬಳ ಇಲ್ಲದೆ ಪರದಾಡುವಂತಾಗಿದೆ. ಕೂಡಲೇ ಸರ್ಕಾರ ಸಂಬಳವನ್ನು ನೀಡಿ ಸಿಬ್ಬಂದಿಯ ಹಿತ ಕಾಪಾಡಬೇಕು ಎಂದು ಗ್ರಾಪಂ ಸಿಬ್ಬಂದಿ ಒತ್ತಾಯಿಸಿದ್ದಾರೆ.
ಕಾರಹಳ್ಳಿ, ಕೊಯಿರಾ, ವಿಶ್ವನಾಥಪುರ, ಕುಂದಾಣ, ಆಲೂರುದುದ್ದನಹಳ್ಳಿ, ಜಾಲಿಗೆ ಸೇರಿದಂತೆ ಒಟ್ಟು 6 ಗ್ರಾಮ ಪಂಚಾಯಿತಿಗಳು ಬರಲಿವೆ. ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಹಳ್ಳಿಗಳ ಸಂಖ್ಯೆಗೆ ಅನುಗುಣವಾಗಿ ಸಿಬ್ಬಂದಿ ಇರುತ್ತಾರೆ. ಸುಮಾರು 3-4 ತಿಂಗಳುಗಳಿಂದ ಹೋಬಳಿಯ ಮೂರು ಗ್ರಾಮ ಪಂಚಾಯಿತಿ ಸಿಬ್ಬಂದಿಗೆ ಸರಿಯಾದ ರೀತಿಯಲ್ಲಿ ಸಂಬಳ ಆಗದಿದ್ದರಿಂದ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಗ್ರಾಪಂ ಸಿಬ್ಬಂದಿ ಅಳಲು: ಚುನಾವಣೆ ಮುಂಚಿತವಾಗಿ 2-3 ತಿಂಗಳಿಗೊಮ್ಮೆ ಸಂಬಳವಾಗುತ್ತಿತ್ತು. ಚುನಾವಣೆ ಹಾಗೂ ನೀತಿ ಸಂಹಿತೆ ಇರುವುದರಿಂದ ಸಂಬಳ ಸಕಾಲದಲ್ಲಿ ಸಿಗುತ್ತಿಲ್ಲ. ಕಳೆದ ಮೂರು ತಿಂಗಳಿನಿಂದ ಸಂಬಳವಾಗದ ಕಾರಣ ಸಾಲಸೋಲ ಮಾಡಿಕೊಂಡು ಜೀವನ ಸಾಗಿಸುವಂತಾಗಿದೆ. ಪ್ರಸ್ತುತ ದಿನಗಳಲ್ಲಿ ಜೀವನಕ್ಕೆ ಬೇಕಾಗುವ ತಿಂಗಳ ಸಾಮಾನು ಸಾಮಾಗ್ರಿಗಳನ್ನು ಬಾಕಿ ಬರೆಯುವಂತೆ ಆಗಿದೆ. ಮಕ್ಕಳ ಶಾಲಾ ಶುಲ್ಕ, ಮನೆ ಬಾಡಿಗೆ ಹೀಗೆ ಹತ್ತು ಹಲವಾರು ಸಮಸ್ಯೆಗಳನ್ನು ಎದುರಿಸುವಂತೆ ಆಗಿದೆ ಎಂದ ಹೆಸರು ಹೇಳಲಿಚ್ಚಿಸದ ಗ್ರಾಪಂ ಸಿಬ್ಬಂದಿ ಅಳಲು ತೋಡಿಕೊಂಡರು.
ಕಾರಹಳ್ಳಿ, ಕೊಯಿರಾ, ಆಲೂರುದುದ್ದನಹಳ್ಳಿ, ಕುಂದಾಣ ಗ್ರಾಮ ಪಂಚಾಯಿತಿಗಳಲ್ಲಿ ಸುಮಾರು 3-4 ತಿಂಗಳಿನಿಂದ ಸಂಬಳವಾಗದೆ ಅಕ್ಕಪಕ್ಕದವರಲ್ಲಿ ಸಾಲಹೋಲ ಮಾಡಿಕೊಂಡು ಜೀವನ ಸಾಗಿಸುವ ಪರಿಸ್ಥಿತಿ ಇದೆ. ಜಾಲಿಗೆ, ವಿಶ್ವನಾಥಪುರ, ಕುಂದಾಣ ಪಂಚಾಯಿತಿಯಲ್ಲಿ ವರ್ಗ-2 (ಸ್ಥಳೀಯ ಸಂಪನ್ಮೂಲ, ತೆರಿಗೆ ಪಾವತಿಸಿದ ಹಣ)ದಲ್ಲಿ ಸಂಬಳ ನೀಡುತ್ತಿದ್ದಾರೆ. ಸಂಬಳ ಆದ ನಂತರ ತೆರಿಗೆ ಹಣಕ್ಕೆ ಜಮಾ ಮಾಡಲಾಗುವುದು ಎಂಬುವುದು ಮಾಹಿತಿ ಲಭ್ಯವಾಗಿದೆ. ಉಳಿದ ಮೂರು ಪಂಚಾಯಿತಿಗಳಲ್ಲಿ ಅಷ್ಟೇನು ತೆರಿಗೆ ಹಣ ಬಾರದ ಕಾರಣ ಸಿಬ್ಬಂದಿ ಪರಿತಪಿಸುವಂತೆ ಆಗಿದೆ. ಪಿಡಿಒಗಳು ಆಯಾ ಪಂಚಾಯಿತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರಿಗೆ ಸರಕಾರದಿಂದ ಸಂಬಳ ಆಗದಿರುವುದರಿಂದ ವರ್ಗ-2ರ ಅಡಿಯಲ್ಲಿರುವ ಹಣದಿಂದ ಮುರಿದು ಕೊಡುತ್ತಿದ್ದು, ಸಂಬಳವಾದ ನಂತರ ಅಲ್ಲಿಂದ ಹಣವನ್ನು ಮತ್ತೇ ವರ್ಗ-2ಕ್ಕೆ ಸೇರಿಸುತ್ತಾರೆಂಬುದು ತಿಳಿದುಬಂದಿರುತ್ತದೆ.
ಮುಖ್ಯಕಾರ್ಯನಿರ್ವಹಣಾಧಿಕಾರಿ ಭರವಸೆ: ತಾಲೂಕಿನಲ್ಲಿ ಸುಮಾರು 4-5 ಪಂಚಾಯಿತಿಗಳು ಆರ್ಥಿಕವಾಗಿ ಉತ್ತಮವಾಗಿವೆ. ಉಳಿದ ಪಂಚಾಯಿತಿಗಳ ಸಿಬ್ಬಂದಿಗೆ ಮೂರು ತಿಂಗಳಿಗೊಮ್ಮೆ ಸಂಬಳವಾಗುತ್ತಿತ್ತು. ಮುಂದಿನ ದಿನಗಳಲ್ಲಿ ಸಂಬಳವಾಗುತ್ತದೆ. ಈಬಾರಿ ಚುನಾವಣೆ ಇರುವುದರಿಂದ ಸಂಬಳ ಹಾಕುವುದರಲ್ಲಿ ತಡವಾಗಿದೆ. ಕೊಯಿರಾ, ಆಲೂರುದುದ್ದನಹಳ್ಳಿ, ಮಂಡಿಬಲೆ, ಕೋರಮಂಗಲ, ಹಾರೋಹಳ್ಳಿ ಗ್ರಾಪಂಗಳಲ್ಲಿ ಆರ್ಥಿಕ ಮಟ್ಟ ಕಡಿಮೆ ಇದೆ. ಸರ್ಕಾರದಿಂದ ಅನುಮೋದನೆಯಾಗಿ ಬಿಡುಗಡೆಯಾಗಬೇಕು. ಬಿಡುಗಡೆಯಾದ ಹಣ ನೇರವಾಗಿ ನೌಕರರ ಖಾತೆಗೆ ಜಮಾ ಆಗುತ್ತದೆ. ಒಂದು ವೇಳೆ ಸರ್ಕಾರದಿಂದ ಬಿಡುಗಡೆಗೊಳ್ಳದಿದ್ದರೆ ಸಂಬಂಧಪಟ್ಟ ಗ್ರಾಮ ಪಂಚಾಯಿತಿ ಆರ್ಥಿಕವಾಗಿದ್ದಲ್ಲಿ ಸ್ಥಳೀಯ ಸಂಪನ್ಮೂಲ ಹಣದಲ್ಲಿ ಕೊಟ್ಟು, ಸಂಬಳವಾದ ಮೇಲೆ ಅದನ್ನು ಮುರಿದುಕೊಳ್ಳಲಾಗುತ್ತದೆ ಎಂದು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮುರುಡಯ್ಯ ತಿಳಿಸಿದರು.