Advertisement

ಮನೆ ನಿರ್ಮಾಣಕ್ಕೆ ಬಾರದ ಹಣ

04:45 PM Jun 19, 2018 | |

„ದೇವಪ್ಪ ರಾಠೊಡ 
ಮುದಗಲ್ಲ: ಗುಡಿಸಲು ಮುಕ್ತ ರಾಜ್ಯ ನಿರ್ಮಾಣ ಮಾಡಲು ಸರಕಾರ ಬಸವ ವಸತಿ, ಪ್ರಧಾನಮಂತ್ರಿ ಆವಾಸ್‌ ಯೋಜನೆ, ಅಂಬೇಡ್ಕರ್‌ ಸೇರಿ ವಿವಿಧ ವಸತಿ ಯೋಜನೆ ಜಾರಿಗೊಳಿಸಿದೆ.

Advertisement

ಈ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ಮನೆ ಮಂಜೂರು ಮಾಡಿದೆ. ಆದರೆ ಸಾಲ ಮಾಡಿ ಮನೆ
ನಿರ್ಮಿಸಿಕೊಂಡ ಫಲಾನುಭವಿಗಳಿಗೆ ಸರ್ಕಾರ ತನ್ನ ಪಾಲಿನ ಅನುದಾನ ಬಿಡುಗಡೆ ಮಾಡದ್ದರಿಂದ ಕೆಲ ಫಲಾನುಭವಿಗಳ ಮನೆ ಕಾಮಗಾರಿ ಅರ್ಧಕ್ಕೆ ಸ್ಥಗಿತಗೊಂಡಿದ್ದು, ಫಲಾನುಭವಿಗಳು ಪರದಾಡುವಂತಾಗಿದೆ. 

ಲಿಂಗಸುಗೂರು ತಾಲೂಕಿನ 38 ಗ್ರಾಮ ಪಂಚಾಯತಿಗಳಿಗೆ 2015-16, 2016-17, 2017-18 ಸಾಲಿನಲ್ಲಿ ಬೆಂಗಳೂರಿನ ರಾಜೀವ ಗಾಂಧಿ ವಸತಿ ನಿಗಮ ಮನೆಗಳನ್ನು ಸುಮಾರು 3 ಸಾವಿರಕ್ಕೂ ಅಧಿಕ ಮನೆಗಳನ್ನು ಹಂಚಿಕೆ ಮಾಡಿದೆ.

ಪ್ರತಿ ಮನೆಗೆ ಸುಮಾರು 2 ಲಕ್ಷ ರೂ. ವೆಚ್ಚ ಅಂದಾಜಿಸಲಾಗಿದ್ದು, ಇದರಲ್ಲಿ 20 ಸಾವಿರ ರೂ. ಸಾಲ, 10 ಸಾವಿರ ಫಲಾನುಭವಿ ವಂತಿಗೆ ಮತ್ತು ಸರ್ಕಾರ 1,64,000 ರೂ. ಸಹಾಯಧನ ನೀಡುತ್ತದೆ. ಮನೆ ಮಂಜೂರಾದ ಫಲಾನುಭವಿಗೆ ತಳಪಾಯ ಹಂತ, ಮನೆ ಬಾಗಿಲು ಹಂತ, ಮೇಲ್ಛಾವಣಿ ನಿರ್ಮಾಣ ಹಂತ ಮತ್ತು ಮನೆ ಪೂರ್ಣಗೊಂಡ ನಂತರ ಹೀಗೆ ಫಲಾನುಭವಿಗಳ ಖಾತೆಗೆ ಸರ್ಕಾರ ಸಹಾಯಧನ ಜಮೆ ಮಾಡಬೇಕು. ಆದರೆ
ಈಗಾಗಲೇ ಬಹುತೇಕ ಫಲಾನುಭವಿಗಳು ಸಾಲ ಮಾಡಿ ಮನೆ ನಿರ್ಮಿಸಿಕೊಳ್ಳುತ್ತಿದ್ದಾರೆ.

ತಳಪಾಯ ಮತ್ತು ಗೋಡೆ ಹಂತದವರೆಗೆ ಮನೆ ನಿರ್ಮಿಸಿಕೊಂಡಿದ್ದಾರೆ. ಈಗಾಗಲೇ ವಿವಿಧ ಹಂತದವರೆಗೆ ನಿರ್ಮಾಣಗೊಂಡ ಮನೆಗಳ ಜಿಪಿಎಸ್‌ ಮಾಡಲಾಗಿದೆ. ಇವರ ಖಾತೆಗೆ ಮೊದಲ ಹಂತದ ಸಹಾಯಧನದ ಬಿಡಿಗಾಸು ಜಮೆ ಆಗಿಲ್ಲ. 

Advertisement

ಸಾಲ ಮಾಡಿ ಮನೆ ನಿರ್ಮಾಣಕ್ಕೆ ಸಿಮೆಂಟ್‌, ಮರಳು, ಕಿಟಕಿ ,ಬಾಗಿಲು, ಇಟ್ಟಿಗೆ ತಂದು ಹಾಕಿದ್ದಾರೆ. ಆದರೆ 4-5ತಿಂಗಳಿಂದ ಅನುದಾನ ಬಿಡುಗಡೆಗಾಗಿ ಕಾಯ್ದು ಕುಳಿತ್ತಿದ್ದಾರೆ. ಕೆಲ ಫಲಾನುಭವಿಗಳು ಮನೆ ನಿರ್ಮಿಸಿಕೊಂಡು ನಾಲ್ಕೈದು ತಿಂಗಳು ಗತಿಸಿದರೂ ನಿಗಮದ ವತಿಯಿಂದ ಅನುದಾನ ಬಂದಿಲ್ಲ.

ಆಯಾ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಿಗೆ ಕೇಳಿದರೆ ನಿಗಮದ ಅಧಿಕಾರಿಗಳನ್ನು ವಿಚಾರಿಸಬೇಕು. ಗ್ರಾಮ ಪಂಚಾಯತಿಗೆ ಯಾವುದೇ ಹಣಕಾಸಿನ ಅಧಿಕಾರ ಇಲ್ಲ ಎಂದು ಜಾರಿಕೊಳ್ಳುತ್ತಾರೆ. ಇದ್ದ ಹರಕು-ಮುರಕು ಗುಡಿಸಲುಗಳಲ್ಲಿ ವಾಸ ಮಾಡುತ್ತಿದ್ದ ಬಡ ಕುಟುಂಬಗಳು ಸರಕಾರ ಮನೆ ಮಂಜೂರು ಮಾಡಿ ಸಹಾಯಧನ ನೀಡುತ್ತದೆ ಎಂಬ ಆಶೆಯಿಂದ ಗುಡಿಸಲುಗಳನ್ನು ಕಿತ್ತಿ ಸಾಲ ಮಾಡಿ ಮನೆ ನೋಂದಣಿ ಮಾಡಿಸಿ ಸ್ವಂತ ಖರ್ಚಿನಲ್ಲಿ ಮನೆಗಳನ್ನು ಕಟ್ಟಿಸಿಕೊಳ್ಳುತ್ತಿದ್ದಾರೆ.

ಫಲಾನುಭವಿಗಳ ಆಧಾರ್‌ ಕಾರ್ಡ್‌ ಹೊಂದಾಣಿಕೆ ಆಗುತ್ತಿಲ್ಲ ಎಂಬ ಅಂಶ ನಿಗಮದ ತಂತ್ರಾಂಶದಲ್ಲಿ ತೋರಿಸುತ್ತಿದ್ದು,
ಇದರಿಂದ ಸಹಾಯಧನ ಬಿಡುಗಡೆಗೆ ಹಿನ್ನಡೆ ಆಗಿದೆ ಎಂದು ಹೇಳಲಾಗುತ್ತಿದೆ. ಅಧಿಕಾರಿಗಳು ಸಕಾಲಕ್ಕೆ ಅನುದಾನ ಬಿಡುಗಡೆ ಮಾಡದಿರುವುದರಿಂದ ಮನೆಗಳ ಕಾಮಗಾರಿ ಅರ್ಧಕ್ಕೆ ನಿಂತಿದೆ. ಗ್ರಾಪಂ ಮತ್ತು ತಾಪಂ ಸಿಬ್ಬಂದಿ ಹಾಗೂ ಅಧಿಕಾರಿ ವರ್ಗ ಹಣ ನೀಡಿದವರಿಗೆ ಮನೆಗಳ ಕಂತಿನ ಹಣ ಬಿಡುಗಡೆ ಮಾಡಲು ನಿಗಮಕ್ಕೆ ಶಿಫಾರಸು ಮಾಡುತ್ತಿದ್ದಾರೆಂದು ಕೆಲ ಫಲಾನುಭವಿಗಳು ದೂರಿದ್ದಾರೆ. ಇಂಥಹ ಅಧಿಕಾರಿಗಳ ವಿರುದ್ಧ ಜಿಪಂ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. 

ಶಾರದಾ ರಾಠೊಡ, ಹಡಗಲಿ ಕ್ಷೇತ್ರದ ತಾಪಂ ಸದಸ್ಯೆ

ಮನೆಗಳಿಗೆ ಜಿಪಿಎಸ್‌ ತಂತ್ರಜ್ಞಾನದ ಮೂಲಕ ಫೋಟೋ ಸೆರೆಹಿಡಿದು ಕಂತು ಬಿಡುಗಡೆಗೆ ನಿಗಮಕ್ಕೆ ಶಿಫಾರಸು ಮಾಡಲಾಗಿದೆ. ತಂತ್ರಾಂಶದಲ್ಲಿ ಆಧಾರ್‌ ಕುರಿತು ತಪ್ಪು ಸಂದೇಶಗಳು ಬಂದಾಗ ನಿಗಮಕ್ಕೆ ತಿಳಿಸಿ ಅನುದಾನ ಬಿಡುಗಡೆಗೆ ಕ್ರಮ ಜರುಗಿಸಲಾಗುವುದು.

ಪುಷ್ಪಾವತಿ ಎಂ.ಕಮ್ಮಾರ ತಾಪಂ ಕಾ.ನಿ. ಅಧಿಕಾರಿ ಲಿಂಗಸುಗೂರ

Advertisement

Udayavani is now on Telegram. Click here to join our channel and stay updated with the latest news.

Next