Advertisement

ವಿಧಾನಸೌಧದ ಮಾದರಿ ಲೈಬ್ರರಿ ಬಳಕೆಯೇ ಇಲ್ಲ!

07:42 AM Oct 24, 2017 | |

ಬೆಂಗಳೂರು: ದೇಶದ ಇತರೆ ವಿಧಾನ ಮಂಡಲಗಳಿಗೆ ಹೋಲಿಸಿದರೆ ಮಾದರಿ ಎನ್ನಬಹುದಾದ ಗ್ರಂಥಾಲಯ ಅವಕಾಶ ರಾಜ್ಯದ ವಿಧಾನ ಮಂಡಲ ಸದಸ್ಯರಿಗೆ ಇದೆ. ಆದರೆ, ಅದನ್ನು ಉಪಯೋಗಿಸು ವವರು ಬೆರಳೆಣಿಕೆಯಷ್ಟು ಮಂದಿ ಮಾತ್ರ! ಶಾಸಕರ ಜ್ಞಾನಾರ್ಜನೆ, ಸದನದ ಹಿಂದಿನ ನಡಾವಳಿಗಳನ್ನು ಅಧ್ಯಯನ ಮಾಡಲು ವಿಧಾನಸೌಧ ಉತ್ತರ ಭಾಗದ ನೆಲಮಹಡಿಯಲ್ಲಿ ಸುಸಜ್ಜಿತ ಕರ್ನಾಟಕ ವಿಧಾನಮಂಡಲ ಗ್ರಂಥಾಲಯ ಸ್ಥಾಪಿಸಲಾಗಿದೆ.

Advertisement

ಲೋಕಸಭೆ ಹೊರತುಪಡಿಸಿ ದೇಶದ ಯಾವುದೇ ವಿಧಾನಸಭೆಗಳ ಗ್ರಂಥಾಲಯಗಳಲ್ಲಿ ಇಲ್ಲದ ಮಹತ್ವದ ನಡವಾಳಿಗಳು ಅಲ್ಲಿ ಲಭ್ಯವಿದೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಈ ಗ್ರಂಥಾಲಯ ಬಳಸುವ ಶಾಸಕರ ಸಂಖ್ಯೆ ತೀರಾ ವಿರಳ. ಬಳಸುವುದಿದ್ದರೂ ಅಧಿವೇಶನ ನಡೆಯುತ್ತಿರುವ ಸಂದರ್ಭದಲ್ಲಿ ಮಾತ್ರ. ಆದರೂ ಅವರ ಸಂಖ್ಯೆ ಬೆರಳೆಣಿಕೆಯಷ್ಟು ಮಾತ್ರ ಎನ್ನುತ್ತಾರೆ ಗ್ರಂಥಾಲಯದ
ಸಿಬ್ಬಂದಿ.

ಏನೇನು ಪುಸ್ತಕಗಳಿವೆ: ರಾಜಕೀಯ ಶಾಸ್ತ್ರ, ಇತಿ ಹಾಸ, ಪೌರನೀತಿ ಶಾಸ್ತ್ರ, ಶಾಸಕಾಂಗ ಹಾಗೂ ನ್ಯಾಯಾಂಗದ ಕಾಯ್ದೆ ಮತ್ತು ನಿಯಮಗಳು, ಶಾಸಕಾಂಗದ ಇತಿಹಾಸ, ರಾಜ್ಯ ಮತ್ತು ಕೇಂದ್ರ ಸರ್ಕಾರದ ಕಾನೂನು ಪುಸ್ತಕಗಳು, ಭೌಗೋಳಿಕ ಶಾಸ್ತ್ರ, ದೇಶ-ವಿದೇಶ ಹಾಗೂ ರಾಜ್ಯಗಳ ಪ್ರಸಿದ್ಧ ವ್ಯಕ್ತಿಗಳ ಜೀವನ ಚರಿತ್ರೆ, ಆತ್ಮಚರಿತ್ರೆ, ಧರ್ಮಶಾಸ್ತ್ರ, ಮನಃಶಾಸ್ತ್ರ, ವಿಶ್ವಕೋಶ, ವಿವಿಧ
ಸಮಿತಿಯ ವರದಿಗಳು, ನಿಘಂಟುಗಳು, ಗೆಜೆಟಿಯರ್‌, ಸಾಮಾ ಜಿಕ ವಿಜ್ಞಾನ, ಸಾಮಾಜಿಕ ಶಾಸ್ತ್ರ, ಅರ್ಥಶಾಸ್ತ್ರ, ಭಾಷಾ ಶಾಸ್ತ್ರ, ಇತರೆ ರಾಷ್ಟ್ರಗಳ ಇತಿಹಾಸ, ಭಾರತ ಸೇರಿದಂತೆ ವಿವಿಧ ರಾಜ್ಯಗಳ ಸಂವಿಧಾನ, ಕೇಂದ್ರ ಹಾಗೂ ರಾಜ್ಯದ ಪ್ರತಿಭಾವಂತ ಸಂಸದೀಯ ಪಟುಗಳ ಪುಸ್ತಕಗಳು, ಜಿಲ್ಲಾ ಮಾಹಿತಿ ಒಳಗೊಂಡ ಗೆಜೆಟಿಯರ್ ಸೇರಿದಂತೆ ಇತರೆ ಪುಸ್ತಕಗಳು ಲಭ್ಯವಿದೆ. ಇವೆಲ್ಲಕ್ಕಿಂತ ಮುಖ್ಯವಾಗಿ ಇತರೆ ಯಾವುದೇ ರಾಜ್ಯಗಳ ವಿಧಾನಮಂಡಲ ಗ್ರಂಥಾಲಯಗಳಲ್ಲಿ ಲಭ್ಯವಿಲ್ಲದ ಭಾರತ ಸಂವಿಧಾನ ರಚನಾ ಸಮಿತಿಯ ನಡವಳಿಕೆಗಳು, ಹೌಸ್‌ ಆಫ್ ಕಾಮನ್ಸ್‌ ಮತ್ತು ಹೌಸ್‌ ಆಫ್ ಲಾರ್ಡ್ಸ್‌ ಸದನದ ನಡವಳಿಕೆಗಳು ವಿಧಾನಸೌಧದ ಗ್ರಂಥಾಲಯದಲ್ಲಿ ಸಿಗುತ್ತವೆ.

ಓದುವವರೇ ಇಲ್ಲ: ಗ್ರಂಥಾಲಯವನ್ನು ಇ-ಗ್ರಂಥಾಲವಾಗಿ ರೂಪಿಸಲಾಗಿದೆ. ಇತ್ತೀಚೆಗೆ ಸುಮಾರು 3.5 ಕೋಟಿ ರೂ.ವೆಚ್ಚದಲ್ಲಿ ಮೇಲ್ದರ್ಜೆಗೇರಿಸಲಾಗಿದೆ. ಆದರೆ, ಇದನ್ನು ಓದಲು ಶಾಸಕರೇ ಬರುತ್ತಿಲ್ಲ. ರಾಮಕೃಷ್ಣ ಹೆಗಡೆ ಅವರು ಮುಖ್ಯಮಂತ್ರಿಯಾಗಿದ್ದ ಅವಧಿವರೆಗೆ ವಿಧಾನಮಂಡಲ ಅಧಿವೇಶನ ನಡೆಯುವಾಗ ಹಲವು ಪ್ರಮುಖ ಪುಸ್ತಕಗಳು ಮತ್ತು ನಡವಳಿಕೆಗಳನ್ನು ಸದನಕ್ಕೆ ಕೊಂಡೊಯ್ದು ಇಡಲಾಗುತ್ತಿತ್ತು. ಸದಸ್ಯರು ತಮಗೆ ಯಾವುದಾದರೂ ಮಾಹಿತಿ ಬೇಕಾದಾಗ ಈ ಪುಸ್ತಕಗಳ ನೆರವು ಪಡೆದುಕೊಳ್ಳುತ್ತಿದ್ದರು. ನಂತರ ಕ್ರಮೇಣ ಸದನಕ್ಕೆ ಕೊಂಡೊಯ್ಯುವ ಪುಸ್ತಕಗಳ ಸಂಖ್ಯೆ ಕಡಿಮೆಯಾಗಿ ಈಗ ಸಂಪೂರ್ಣ ಸ್ಥಗಿತಗೊಂಡಿದೆ. ಹಿಂದೆಲ್ಲಾ ಸಚಿವರು, ಶಾಸಕರು ಸಾಕಷ್ಟು ಸಂಖ್ಯೆಯಲ್ಲಿ ಗ್ರಂಥಾಲಯಕ್ಕೆ ಬರುತ್ತಿದ್ದರು. ಇತ್ತೀಚಿನ ವರ್ಷಗಳಲ್ಲಿ
ಅವರ ಸಂಖ್ಯೆ ಕಡಿಮೆಯಾಗಿದೆ. ಪ್ರಸಕ್ತ ವಿಧಾನಸಭೆಯಲ್ಲಿ ರಮೇಶ್‌ಕುಮಾರ್‌, ಪ್ರಮೋದ್‌ ಮಧ್ವರಾಜ್‌, ಮತ್ತು ಪ್ರಿಯಾಂಕ್‌ ಖರ್ಗೆ ಅವರು ಸಚಿವರಾಗುವ ಮುನ್ನ ಗ್ರಂಥಾಲಯಕ್ಕೆ ಬಂದು ಅಧ್ಯಯನ ನಡೆಸುತ್ತಿದ್ದರು. ಈಗ ಅವರು ಸಹ ಬರುತ್ತಿಲ್ಲ. ಶಾಸಕರಾದ ಕಿಮ್ಮನೆ ರತ್ನಾಕರ ಮತ್ತು ಕುಡಚಿ ರಾಜೀವ ಅವರು ಹೆಚ್ಚಾಗಿ ಗ್ರಂಥಾಲಯ ಬಳಸಿಕೊಳ್ಳುತ್ತಿದ್ದಾರೆ. ಉಳಿದಂತೆ ಬೆರಳೆಣಿಕೆಯ
ಶಾಸಕರು ಯಾವಾಗಾದರೂ ಒಮ್ಮೆ ಬಂದು ಹೋಗುತ್ತಾರೆ ಎನ್ನುತ್ತಾರೆ ಗ್ರಂಥಾಲಯ ಸಿಬ್ಬಂದಿ.

ವಿಶೇಷ ವರದಿ

Advertisement
Advertisement

Udayavani is now on Telegram. Click here to join our channel and stay updated with the latest news.

Next