Advertisement

ಕೇಂದ್ರೀಯ ತನಿಖಾ ಸಂಸ್ಥೆಗಳು ಯಾವುದೇ ರೀತಿಯ ದುರ್ಬಳಕೆ ಆಗಿಲ್ಲ: ಫಡ್ನವೀಸ್‌

06:36 PM Mar 05, 2023 | Team Udayavani |

ಅಮರಾವತಿ: ದೇಶದಲ್ಲಿ ಕೇಂದ್ರೀಯ ತನಿಖಾ ಸಂಸ್ಥೆಗಳು ಯಾವುದೇ ರೀತಿಯ ದುರ್ಬಳಕೆ ಆಗಿಲ್ಲ. ಕೆಟ್ಟದಾಗಿ ನಡೆದುಕೊಳ್ಳುವ, ಭ್ರಷ್ಟಾಚಾರ ನಡೆಸುವವರನ್ನು ಶಿಕ್ಷಿಸಲು ವಿವಿಧ ವ್ಯವಸ್ಥೆಗಳು ಕೆಲಸ ಮಾಡುತ್ತಿವೆ. ರಾಜಕೀಯ ಹಸ್ತಕ್ಷೇಪದ ಪ್ರಶ್ನೆಯೇ ಇಲ್ಲ. ತನಿಖಾ ಸಂಸ್ಥೆಗಳ ದುರ್ಬಳಕೆ ಆರೋಪದ ಬಗ್ಗೆ ಪತ್ರ ಬರೆದರೆ ವಿರೋಧದಿಂದ ಮುಕ್ತಿ ಸಿಗುವುದಿಲ್ಲ ಎಂದು ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ ಅಮರಾವತಿಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು.

Advertisement

ಅವರು ಇಂದು ಕಲ್ವಾರ್‌ ಕಲಾಲ್‌ ಸಮಾಜದ ರಾಷ್ಟ್ರೀಯ ಸಮಾವೇಶವನ್ನು ಉದ್ಘಾಟಿಸಲು ಅಮರಾವತಿಗೆ ಆಗಮಿಸಿದ್ದರು. ಕಾರ್ಯಕ್ರಮದ ಬಳಿಕ ಕೇಂದ್ರ ತನಿಖಾ ಸಂಸ್ಥೆಗಳ ದುರ್ಬಳಕೆ ನಡೆಯುತ್ತಿರುವುದಾಗಿ ದೇಶದ 9 ವಿಪಕ್ಷ ನಾಯಕರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದ ವಿಷಯದ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಪ್ರತಿಪಕ್ಷಗಳ ವಿರುದ್ಧ ಟೀಕಿಸಿದರು.

ತನಿಖಾ ಸಂಸ್ಥೆಗಳು ಸ್ವತಂತ್ರವಾಗಿ ಕೆಲಸ ಮಾಡುತ್ತಿವೆ. ಈ ಸಂಸ್ಥೆಗಳ ಕೆಲಸದಲ್ಲಿ ರಾಜಕೀಯ ಹಸ್ತಕ್ಷೇಪ ಮಾಡುವ ಪ್ರಶ್ನೆಯೇ ಇಲ್ಲ. ಬಿಜೆಪಿ ಸೇರಿದವರ ತನಿಖೆ ನಿಲ್ಲಿಸಲಾಗಿದೆ ಎಂಬ ಆರೋಪ ಸುಳ್ಳು. ಅಂತಹ ಪ್ರಕರಣಗಳಿದ್ದರೆ ವಿರೋಧ ಪಕ್ಷಗಳು ತೋರಿಸಬೇಕು. ಯಾರೋ ಬಿಜೆಪಿ ಸೇರಿದ್ದಾರೆ ಎಂದು ಅವರ ಮೇಲಿನ ವಿಚಾರಣೆ ನಿಲ್ಲುವುದಿಲ್ಲ. ಯಾರೊಬ್ಬರ ವಿರುದ್ಧ ತಪ್ಪು ಕ್ರಮ ಕೈಗೊಂಡರೆ ನ್ಯಾಯಾಲಯದಲ್ಲಿ ದೂರು ನೀಡಬಹುದು ಎಂದು ದೇವೇಂದ್ರ ಫಡ್ನವೀಸ್‌ ಹೇಳಿದ್ದಾರೆ.

ದೇಶಾದ್ಯಂತ ವಿರೋಧ ಪಕ್ಷಗಳ 9 ಹಿರಿಯ ನಾಯಕರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ಕೇಂದ್ರ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ದೂರಿದ್ದಾರೆ. ಬಿಜೆಪಿ ಪ್ರತಿಪಕ್ಷಗಳ ವಿರುದ್ಧ ಸಿಬಿಐ ಮತ್ತು ಇಡಿ ತನಿಖಾ ಸಂಸ್ಥೆಗಳನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಟೀಕಿಸಿದೆ.

ಅನೇಕ ದೊಡ್ಡ ನಾಯಕರ ಹೆಸರುಗಳಿವೆ. ಮಹಾರಾಷ್ಟ್ರಕ್ಕೆ ಸೇರಿದವರಲ್ಲಿ ಎನ್‌ಸಿಪಿ ಅಧ್ಯಕ್ಷ ಶರದ್‌ ಪವಾರ್‌, ಮಾಜಿ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಕೂಡ ಸೇರಿದ್ದಾರೆ. ಈ ವೇಳೆ ಮಾತನಾಡಿದ ದೇವೇಂದ್ರ ಫಡ್ನವೀಸ್‌, ವಿರೋಧಿಗಳ ಆರೋಪವನ್ನು ತಳ್ಳಿ ಹಾಕಿದ್ದಾರೆ. ಎಂಎನ್‌ಎಸ್‌ ಮುಖಂಡ ಸಂದೀಪ್‌ ದೇಶಪಾಂಡೆ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಬಂಧಿಸಲಾಗಿದೆ. ಸಂದೀಪ್‌ ದೇಶಪಾಂಡೆ ಅವರು ಕೆಲವು ಅನುಮಾನಗಳನ್ನು ಎತ್ತಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ದೇವೇಂದ್ರ ಫಡ್ನವೀಸ್‌ ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next