Advertisement
‘ಇದುವರೆಗಿನ ನನ್ನ ಸಿನಿಮಾ ಕೆರಿಯರ್‌ನಲ್ಲೇ ‘ರಾಬರ್ಟ್’ ನನಗೊಂದು ಲ್ಯಾಂಡ್ ಮಾರ್ಕ್ ಸಿನಿಮಾ ಆಗುತ್ತೆ…’
Related Articles
Advertisement
ದರ್ಶನ್ ಸಿನಿಮಾ ಅಂದರೆ, ಅಲ್ಲಿ ಅಭಿಮಾನಿಗಳಿಗೆ ಒಂದಷ್ಟು ರುಚಿಸುವ ಅಂಶಗಳು ಇರಲೇಬೇಕು. ‘ರಾಬರ್ಟ್’ ದರ್ಶನ್ ಫ್ಯಾನ್ಸ್‌ಗೆ ಏನೆಲ್ಲಾ ಕೊಡುತ್ತೆ? ಈ ಬಗ್ಗೆ ತರುಣ್ ಹೇಳ್ಳೋದು ಹೀಗೆ. ‘ ನನ್ನ ಹಾಗೂ ದರ್ಶನ್ ಪರಿಚಯ ಹೊಸದಲ್ಲ. ನಾನು ಅವರನ್ನು ‘ಮೆಜೆಸ್ಟಿಕ್’ ಸಿನಿಮಾಗಿಂತ ಮೊದಲಿಂದಲೂ ಬಲ್ಲೆ. ತುಂಬಾ ಹತ್ತಿರದಿಂದ ನೋಡಿದ್ದೇನೆ. ಅವರ ಪ್ಲಸ್ಸು ಹಾಗು ಮೈನಸ್ಸುಗಳು ಚೆನ್ನಾಗಿ ಗೊತ್ತಿದೆ. ಸೋ, ಇಲ್ಲಿ ಪ್ಲಸ್ಸುಗಳನ್ನು ಇಟ್ಟು ಹೇಗೆಲ್ಲಾ ಮಾಡಬಹುದು ಎಂಬುದನ್ನು ಅರಿತು ಚಿತ್ರ ಮಾಡುತ್ತಿದ್ದೇನೆ. ಅವರ ಫ್ಯಾನ್ಸ್‌ಗೆ ಏನೆಲ್ಲಾ ಇಷ್ಟವೋ, ಅದನ್ನೂ ಕೊಡುತ್ತೇನೆ. ದರ್ಶನ್ ಬಗ್ಗೆ ಗೊತ್ತಿರದ ಅನೇಕ ಎಲಿಮೆಂಟ್ಸ್ ಬಗ್ಗೆಯೂ ಕೊಡ್ತೀನಿ. ಫ್ಯಾನ್ಸ್ ಗೆ ದರ್ಶನ್ ಹೀಗೆ ಕಾಣಬೇಕು, ಅವರ ಡೈಲಾಗ್ ಹಿಂಗಿರಬೇಕು ಎಂಬ ಆಸೆ ಇರುತ್ತೆ. ಅದನ್ನು ಹಂಡ್ರೆಡ್ ಪರ್ಸೆಂಟ್ ಕೊಡ್ತೀನಿ. ಆದರೆ, ನಮ್ಮ ಬಾಸ್ ಈ ಆ್ಯಂಗಲ್ನ ಎಲಿಮೆಂಟ್ಸ್ ನೋಡಿಲ್ಲವಲ್ಲ ಎಂಬಂತಹ ಅಂಶಗಳನ್ನೂ ಸೇರಿಸುತ್ತಿದ್ದೇನೆ’ ಎನ್ನುತ್ತಾರೆ ಅವರು.
ಒನ್‌ಲೈನ್‌ಗೆ ಫಿಕ್ಸ್
ದರ್ಶನ್ ಅವರಿಗೆ ಸುಲಭವಾಗಿ ಕಥೆ ಒಪ್ಪಿಸಲು ಸಾಧ್ಯವಿಲ್ಲ. ‘ರಾಬರ್ಟ್’ ಆಗೋಕೆ ಕಾರಣವೇನು? ಇದಕ್ಕೆ ಉತ್ತರಿಸುವ ತರುಣ್, ‘ನಾನು ‘ಚೌಕ’ ಮಾಡುವಾಗ ದರ್ಶನ್ ಸರ್ ಗೆಸ್ಟ್ ಪಾತ್ರ ಮಾಡಿದ್ದರು. ಚಿತ್ರೀಕರಣ ಬಳಿಕ ಒಂದು ದಿನ ಮನೆಗೆ ಕರೆದು, ‘ನನಗೊಂದು ಸಿನಿಮಾ ಡೈರೆಕ್ಟ್ ಮಾಡ್ತೀಯಾ’ ಅಂದ್ರು. ಆಗ ನಾನು ‘ಏನ್ ಬಾಸ್, ಅವಕಾಶ ಕೊಟ್ಟರೆ ಹಂಡ್ರೆಡ್ ಪರ್ಸೆಂಟ್ ಮಾಡ್ತೀನಿ’ ಅಂದೆ. ಆಗ ನಾನು ‘ವೀರಂ’ ರಿಮೇಕ್ ಮಾಡುವುದು ಫಿಕ್ಸ್ ಆಗಿತ್ತು. ಅವರ 50 ನೇ ಚಿತ್ರ ‘ಒಡೆಯ’ ಚಿತ್ರವನ್ನು ನಾನು ನಿರ್ದೇಶಿಸಬೇಕಿತ್ತು. ಆಗಿನ್ನೂ ‘ಚೌಕ’ ರಿಲೀಸ್ ಆಗಿರಲಿಲ್ಲ. ಅದು ಹೇಗೆ ಆಗುತ್ತೋ ಗೊತ್ತಿರಲಿಲ್ಲ. ಆದರೂ ದರ್ಶನ್ ‘ಚೌಕ’ ಕೆಲಸ ನೋಡಿ ಅವಕಾಶ ಕೊಡುತ್ತಿದ್ದಾರೆ. ರಿಮೇಕ್, ಸ್ವಮೇಕ್ ಯಾವುದಾದರೂ ಸರಿ ಕಣ್ಣು ಮುಚ್ಚಿಕೊಂಡು ಒಪ್ಪಿದೆ. ಆಗ ಅವರು ‘ಕುರುಕ್ಷೇತ್ರ’ ಮಾಡ್ತೀನಿ ಅಂತ ಹೊರಟರು. ಅಷ್ಟೊತ್ತಿಗೆ ‘ಚೌಕ’ ರಿಲೀಸ್ ಆಯ್ತು. ಆ ಚಿತ್ರ ನೋಡಿ, ‘ತರುಣ್ ನೀನು ರಿಮೇಕ್ ಮಾಡೋದು ಬೇಡ, ಯಾವುದಾದರೂ ಹೊಸ ಕಥೆ ಇದ್ದರೆ ಹೇಳು’ ಅಂದರು. ನಾನು ಒಂದು ಕಥೆ ಮಾಡಿದ್ದೆ. ಒನ್‌ಲೈನ್ ಹೇಳಿದೆ. 30 ನಿಮಿಷ ಆ ಕಥೆ ಕೇಳಿ ಫಿಕ್ಸ್ ಆಗಿಬಿಟ್ಟರು. ಮೊದಲು ಎರಡು ಕಥೆ ಇದೆ, ಯಾವುದು ಇಷ್ಟಾನೋ ಅದನ್ನು ಮಾಡಿ ಅಂದೆ. ಕೇಳಿದ ಕಥೆಯೇ ‘ರಾಬರ್ಟ್’ ಒಂದೇ ಬಾರಿಗೆ ಓಕೆ ಮಾಡಿದರು.
ಪ್ಯಾನ್ ಇಂಡಿಯಾ ರಾಬರ್ಟ್
ಎಲ್ಲಾ ಸರಿ, ಈ ‘ರಾಬರ್ಟ್’ ಅಂದರೆ ಧರ್ಮಕ್ಕೆ ಸಂಬಂಧಿಸಿದ ವಿಷಯವೇನಾದರೂ ಇರುತ್ತಾ? ಈ ಪ್ರಶ್ನೆ ಹೊರಬರುತ್ತಿದ್ದಂತೆಯೇ, ‘ಶೀರ್ಷಿಕೆಗೆ ಬೇರೆ ಆಯಾಮವಿಲ್ಲ. ಇಲ್ಲಿ ಪಾತ್ರದ ಹೆಸರಷ್ಟೇ ರಾಬರ್ಟ್. ಅದು ಬಿಟ್ಟರೆ ಬೇರೇನೂ ಇಲ್ಲ. ‘ಚೌಕ’ ಚಿತ್ರದಲ್ಲಿ ದರ್ಶನ್ ‘ರಾಬರ್ಟ್’ ಪಾತ್ರ ಮಾಡಿದ್ದರು. ಆ ಹೆಸರು, ಈ ಕಥೆಗೆ ಪೂರಕ ಎನಿಸಿದ್ದರಿಂದ ಅದನ್ನೇ ಫಿಕ್ಸ್ ಮಾಡಿದ್ವಿ. ಇಲ್ಲಿ ಸಾಕಷ್ಟು ಮಂದಿ ಸಾಥ್ ಕೊಟ್ಟಿದ್ದಾರೆ. ವಿನೋದ್, ಜಗಪತಿಬಾಬು ಇದ್ದಾರೆ. ಇನ್ನಷ್ಟು ಕಲಾವಿದರೂ ಇರಲಿದ್ದಾರೆ. ಇದು ಫ್ಯಾನ್ಸ್ ಟಾರ್ಗೆಟ್ ಚಿತ್ರವಲ್ಲ. ಫ್ಯಾಮಿಲಿ ಟಾರ್ಗೆಟ್ ಕೂಡ ಇದೆ. ಜೊತೆಗೊಂದು ಎಮೊಷನ್ ಜರ್ನಿ ಇದೆ. ದರ್ಶನ್ ಮತ್ತು ಏಳು ವರ್ಷದ ಹುಡುಗನ ಟ್ರಾಕ್ ಇದೆ. ಅದು ಕೂಡ ಫ್ಯಾಮಿಲಿಗೆ ಇಷ್ಟ ಆಗುತ್ತೆ. ಇನ್ನು, ಕನ್ನಡದ ಚಿತ್ರಗಳು ಪ್ಯಾನ್ ಇಂಡಿಯಾ ಆಗುತ್ತಿವೆ. ‘ರಾಬರ್ಟ್’ ಕೂಡ ಅದರ ಹೊರತಾಗಿಲ್ಲ’ ಎನ್ನುತ್ತಾರೆ ತರುಣ್.
-ವಿಜಯ್ ಭರಮಸಾಗರ