Advertisement

ಈ ಬಾರಿಯೂ ಹಾಲಾಡಿ, ಅಂಗಾರಗಿಲ್ಲ ಸಚಿವ ಸ್ಥಾನ ಭಾಗ್ಯ

09:49 AM Aug 21, 2019 | keerthan |

ಮಣಿಪಾಲ : ಅಳೆದೂ ಸುರಿದೂ ಬಿಎಸ್ ಯಡಿಯೂರಪ್ಪನವರು ಸಚಿವ ಸಂಪುಟ ರಚನೆಗೆ ಸಿದ್ಧವಾಗಿದ್ದು, ಕೊನೆಗೂ ದಕ್ಷಿಣ ಕನ್ನಡ ಜಿಲ್ಲೆಗೆ ಅವಕಾಶ ತಪ್ಪಿದೆ.

Advertisement

ನಿನ್ನೆ ತಡರಾತ್ರಿಯವರೆಗೂ ಸುಳ್ಯದ ಶಾಸಕ ಎಸ್.ಅಂಗಾರ ಅವರ ಹೆಸರು ಕೇಳಿ ಬಂದಿತ್ತು. ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಯವರ ಹೆಸರು ಆರಂಭದಲ್ಲಿ ಇತ್ತಾದರೂ ಕ್ರಮೇಣ ಬದಿಗೆ ಸರಿದಿತ್ತು. ಈಗ ಎರಡೂ ಹೆಸರು ಮಾಯವಾಗಿದೆ.

ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿಯವರಿಗೆ ಮತ್ತೊಮ್ಮೆ ಸಚಿವರಾಗುವ ಅದೃಷ್ಟ ಲಭಿಸಿದೆ.

ಕರಾವಳಿ ಭಾಗದ ಎರಡು ಜಿಲ್ಲೆಗಳಾದ ದಕ್ಷಿಣ ಕನ್ನಡ ಮತ್ತು ಉಡುಪಿಗಳಿಂದ ಈ ಬಾರಿ ಅತ್ಯಧಿಕ ಸಂಖ್ಯೆಯಲ್ಲಿ ಬಿಜೆಪಿ ಶಾಸಕರನ್ನು ಆಯ್ಕೆ ಮಾಡಿ ಕಳುಹಿಸಿತ್ತು. 13 ವಿಧಾನಸಭಾ ಕ್ಷೇತ್ರಗಳ ಪೈಕಿ 12 ರಲ್ಲಿ ಬಿಜೆಪಿ ಸದಸ್ಯರು ಆಯ್ಕೆಯಾಗಿದ್ದರು.

ಈ ಕಾರಣದಿಂದ ಕರಾವಳಿಗೆ ಕನಿಷ್ಠ 2 ರಿಂದ 3 ಸಚಿವ ಸ್ಥಾನಗಳನ್ನು ನಿರೀಕ್ಷೆ ಜನರಲ್ಲಿತ್ತು. ಅದೀಗ ಸುಳ್ಳಾಗಿದೆ.

Advertisement

ಹಿಂದಿನ ಕಾಂಗ್ರೆಸ್ ಜೆಡಿಸ್ ಮೈತ್ರಿ ಸರಕಾರದಲ್ಲಿ ಕರಾವಳಿ ಭಾಗಕ್ಕೆ ಇಬ್ಬರು ಸಚಿವರಿದ್ದರು. ಕಾಂಗ್ರೆಸ್ ನಿಂದ ಗೆದ್ದಿದ್ದ ಉಳ್ಳಾಲ ಶಾಸಕ ಯು.ಟಿ ಖಾದರ್ ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರತಿನಿಧಿಸಿದ್ದರೆ, ಚಿತ್ರನಟಿ ಹಾಗೂ ವಿಧಾನ ಪರಿಷತ್ ಸದಸ್ಯೆ ಜಯಮಾಲಾ ಉಡುಪಿಯ ಲೆಕ್ಕದಲ್ಲಿ ಸಚಿವರಾಗಿದ್ದರು. ಹೀಗಾಗಿ ಬಿಜೆಪಿ ಸರ್ಕಾರದಲ್ಲೂ ಕನಿಷ್ಠ 2 ಸಚಿವ ಸ್ಥಾನಗಳನ್ನು ನಿರೀಕ್ಷಿಸಲಾಗಿತ್ತು. ಉಳಿದಂತೆ 16 ಸ್ಥಾನ ಬಾಕಿ ಇವೆ.


ಎಸ್.‌ ಅಂಗಾರ

ಸುಳ್ಯ ಮೀಸಲು ಕ್ಷೇತ್ರದಿಂದ ಆರು ಬಾರಿ ಗೆದ್ದಿರುವ ಎಸ್.‌ ಅಂಗಾರ ಅವರಿಗೆ ಈ ಸಲ ಸಚಿವ ಸ್ಥಾನ ಪಕ್ಕಾ ಎಂದೇ ಹೇಳಲಾಗಿತ್ತು. ಯಾಕೆಂದರೆ ದಕ್ಷಿಣ ಕನ್ನಡ ಬಿಜೆಪಿ ಶಾಸಕರಲ್ಲಿ ಅಂಗಾರ ಬಿಟ್ಟರೆ ಉಳಿದ ಎಲ್ಲಾ ಆರು ಶಾಸಕರು ಮೊದಲ ಬಾರಿ ಆಯ್ಕೆಯಾಗಿರುವವರು. ಹೀಗಾಗಿ ಎಸ್.‌ ಅಂಗಾರ ಅವರು ಮೊದಲ ಪಟ್ಟಿಯಲ್ಲಿ ಸ್ಥಾನ ಪಡೆಯುವುದು ನಿಶ್ಚಿತ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬಂದಿತ್ತು. ಆದರೆ ಪಟ್ಟಿಯಲ್ಲಿ ಅಂಗಾರ ಹೆಸರಿರದೇ ಇರುವುದು ಜಿಲ್ಲೆಯ ಕಾರ್ಯಕರ್ತರಿಗೆ ನಿರಾಸೆ ಉಂಟುಮಾಡಿದೆ.

ಹಾಲಾಡಿ ಶ್ರೀನಿವಾಸ ಶೆಟ್ಟಿ
ಉಡುಪಿ ಜಿಲ್ಲೆಯ ಕುಂದಾಪುರ ವಿಧಾನಸಭಾ ಕ್ಷೇತ್ರದಿಂದ 5 ಬಾರಿ ಗೆದ್ದಿರುವ ಹಾಲಾಡಿ ಶ್ರೀನಿವಾಸ ಶೆಟ್ಟಿಯವರಿಗೂ ಬಿಎಸ್‌ ವೈ ಸಂಪುಟದ ಮೊದಲ ಹಂತದಲ್ಲಿ ಸ್ಥಾನ ಸಿಕ್ಕಿಲ್ಲ. 1999, 2004, 2008,ರಲ್ಲಿ ಬಿಜೆಪಿಯಿಂದ ಗೆದ್ದಿದ್ದ ಹಾಲಾಡಿ 2012ರ ಜಗದೀಶ್‌ ಶೆಟ್ಟರ್‌ ಸಂಪುಟದಲ್ಲಿ ಕೊನೆಯ ಕ್ಷಣದಲ್ಲಿ ಸಚಿವ ಸ್ಥಾನ ತಪ್ಪಿದಾಗ ಬೇಸರಿಸಿ ರಾಜೀನಾಮೆ ನೀಡಿದ್ದರು.

2013ರ ಚುನಾವಣೆಯಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿ ಭಾರಿ ಅಂತರದಿಂದ ಗೆದ್ದು ಶಾಸಕರಾಗಿದ್ದ ಹಾಲಾಡಿ ಶ್ರೀನಿವಾಸ ಶೆಟ್ಟಿಯವರು 2018ರ ಚುನಾವಣೆಯಲ್ಲಿ ಮತ್ತೆ ಬಿಜೆಪಿಗೆ ಸೇರಿ ದಾಖಲೆಯ ಅಂತರದಿಂದ ಕಾಂಗ್ರೆಸ್‌ ನ ರಾಕೇಶ್‌ ಮಲ್ಲಿ ವಿರುದ್ಧ ಗೆದ್ದು ಸತತ 5ನೇ ಬಾರಿಗೆ ವಿಧಾನಸಭೆ ಪ್ರವೇಶಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next